ಭಾನುವಾರ, ಜನವರಿ 19, 2020
19 °C
ಅಭಿಮನ್ಯು ಮಿಥುನ್‌ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಹತ್ತು ವರ್ಷ

ದಶಕದಲ್ಲಿ ಮಿಥುನ್ ಬೆಳೆದ ಬಗೆ

ಪ್ರಮೋದ್ Updated:

ಅಕ್ಷರ ಗಾತ್ರ : | |

Prajavani

ಬರೋಬ್ಬರಿ ಹತ್ತು ವರ್ಷಗಳ ಹಿಂದಿನ ಮಾತಿದು, ಮೀರಟ್‌ನಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಗ 20 ವರ್ಷದ ಯುವ ಪ್ರತಿಭೆಯಾಗಿದ್ದ ಅಭಿಮನ್ಯು ಮಿಥುನ್‌ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಂಡದ ಯುವ ಆಟಗಾರರಿಗೆ ಗುರುವಿನಂತಿದ್ದ ರಾಹುಲ್ ದ್ರಾವಿಡ್‌ ಆಗ ತಂಡದ ನಾಯಕರಾಗಿದ್ದರು.

ಮೊದಲ ಪಂದ್ಯದಲ್ಲಿಯೇ ಮಿಥುನ್‌ ತಮ್ಮ ವೇಗದ ಬೌಲಿಂಗ್ ಸಾಮರ್ಥ್ಯ ಎನೆಂಬುದನ್ನು ತೋರಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಆರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿ ತಂಡದಲ್ಲಿದ್ದ ಹಿರಿಯ ಆಟಗಾರರಾದ ದ್ರಾವಿಡ್‌, ವಿ. ತಿಲಕ್ ನಾಯ್ಡು ಮತ್ತು ಸುನೀಲ್‌ ಜೋಶಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹುಬ್ಬಳ್ಳಿಯಲ್ಲಿ ಹೋದ ವಾರ ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯ ನಡೆದ ವೇಳೆ ಈ ಎಲ್ಲ ದಿನಗಳು ಮತ್ತೆ ನೆನಪಾದವು. ಆಗ ತಂಡದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದ ಸುನೀಲ್ ಜೋಶಿ ಈಗ ಉತ್ತರ ಪ್ರದೇಶ ತಂಡಕ್ಕೆ ಕೋಚ್ ಆಗಿದ್ದಾರೆ. ಜೋಶಿ ಅವರ ತಂಡದ ಬ್ಯಾಟ್ಸ್‌ಮನ್‌ಗಳೇ ಅಚ್ಚರಿಗೊಳ್ಳುವಂತೆ ಮಿಥುನ್ ಬೌಲಿಂಗ್‌ ಮಾಡಿದರು. ಹುಬ್ಬಳ್ಳಿಯಲ್ಲಿಯೂ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಪಡೆದಾಗ ದಶಕದ ಹಿಂದೆ ಉತ್ತರ ಪ್ರದೇಶ ವಿರುದ್ಧ ಮಾಡಿದ ಸಾಧನೆಗಳೆಲ್ಲ ನೆನಪಿಗೆ ಬಂದವು.

ಹೀಗೆ ನಿರಂತರವಾಗಿ ಅವಕಾಶಗಳನ್ನು ಬಳಸಿಕೊಳ್ಳುತ್ತ ಮಿಥುನ್‌ ಭಾರತ ‘ಎ’ ಮತ್ತು ಭಾರತ ತಂಡದಲ್ಲಿಯೂ ಅವಕಾಶ ಪಡೆದರು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದರ ಮರು ವರ್ಷವೇ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್‌ ತಂಡದಲ್ಲಿ ಅವಕಾಶ ಗಿಟ್ಟಿಸಿದರು. ನಾಲ್ಕು ಟೆಸ್ಟ್‌ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳಲ್ಲಿದ್ದರು.

ಆದರೆ, ಮಿಥುನ್‌ ಅವರ ನೈಜ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಾಗಿ ಬಳಕೆಗೆ ಬಂದಿದ್ದು ಕರ್ನಾಟಕ ತಂಡಕ್ಕೆ. ಹತ್ತು ವರ್ಷಗಳಿಂದ ಎಲ್ಲ ಮಹತ್ವದ ದೇಶಿ ಟೂರ್ನಿಗಳಲ್ಲಿ ಆಡುತ್ತಿರುವ ಅವರನ್ನು ಸಹ ಆಟಗಾರರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ‘ಚಿನ್ನ’ ಎನ್ನುತ್ತಾರೆ. ಬಲಗೈ ವೇಗಿ ಮಿಥುನ್‌ ಬೌಲಿಂಗ್ ಮಾಡುವಾಗಲೆಲ್ಲ ‘ಕಮಾನ್‌ ಚಿನ್ನ...’ ಎಂದೇ ಹುರಿದುಂಬಿಸುತ್ತಾರೆ.

ಈ ‘ಚಿನ್ನ’ ಕರ್ನಾಟಕ ತಂಡದ ಅನೇಕ ಸಾಧನೆಗಳಿಗೆ ಹೊಳಪು ತುಂಬಿದ್ದಾರೆ. ಸತತ 14 ವರ್ಷಗಳ ಕಾಲ ಕಾದು 2013–14 ಮತ್ತು 2014–15ರ ರಣಜಿ ಟೂರ್ನಿಯಲ್ಲಿ ರಾಜ್ಯ ತಂಡ ಚಾಂಪಿಯನ್ ಆಗಲು ಮಿಥುನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಎರಡೂ ದೇಶಿ ಋತುವಿನಲ್ಲಿ ಕರ್ನಾಟಕ ವಿಜಯ ಹಜಾರೆ ಮತ್ತು ಇರಾನಿ ಟ್ರೋಫಿಯಲ್ಲಿಯೂ ಪ್ರಶಸ್ತಿ ಜಯಿಸಿತ್ತು. ಆಗಲೂ ಮಿಥುನ್‌ ಗಮನಾರ್ಹ ಪ್ರದರ್ಶನ ನೀಡಿದ್ದರು.

ರಾಜ್ಯ ತಂಡದ ಈ ಯಶಸ್ಸಿನಲ್ಲಿ ತ್ರಿವಳಿ ವೇಗಿಗಳಾದ ಎಸ್‌. ಅರವಿಂದ್‌, ವಿನಯ ಕುಮಾರ್‌ ಮತ್ತು ಮಿಥುನ್‌ ಮಹತ್ವದ ಪಾತ್ರ ವಹಿಸಿದ್ದರು. ಈಗ ಅರವಿಂದ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ರಾಜ್ಯ ತಂಡಕ್ಕೆ ಬೌಲಿಂಗ್ ಕೋಚ್‌ ಆಗಿದ್ದಾರೆ. ವಿನಯ ಕುಮಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲು ಪುದುಚೇರಿ ತಂಡ ಸೇರಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ತಂಡದಲ್ಲಿ ಅನುಭವಿ ವೇಗಿ ಮಿಥುನ್‌ ಮಾತ್ರ ಇದ್ದಾರೆ. ಬೌಲಿಂಗ್‌ನಲ್ಲಿ ಮೊದಲಿನ ಶಕ್ತಿ ಉಳಿಸಿಕೊಳ್ಳುವ ಜೊತೆಗೆ ವೇಗಿಗಳಾದ ರೋನಿತ್ ಮೋರೆ, ಡೇವಿಡ್ ಮಥಾಯಸ್‌, ವಿ. ಕೌಶಿಕ್‌ ಅವರಂಥ ಯುವ ಪ್ರತಿಭೆಗಳನ್ನು ಸಜ್ಜುಗೊಳಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ.

ಎಲ್ಲವೂ ಫಿಟ್‌ನೆಸ್‌ನಿಂದ

ಮಿಥುನ್‌ ಹೊಂದಿರುವ ಆಕರ್ಷಕ ದೇಹ ಮತ್ತು ಫಿಟ್‌ನೆಸ್‌ ಈ ಎಲ್ಲ ಯಶಸ್ಸಿಗೆ ಕಾರಣವಾಗುತ್ತಿದೆ. ನಿತ್ಯ ವ್ಯಾಯಾಮ ಮತ್ತು ಜಿಮ್‌ನಲ್ಲಿ ಬೆವರು ಹರಿಸುವುದು ಅವರ ಯಶಸ್ಸಿನ ಗುಟ್ಟು. ಇದಕ್ಕಿಂತ ಮುಖ್ಯವಾಗಿ ಟೂರ್ನಿಗಳು ಇರದ ಸಮಯದಲ್ಲಿ ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಇದರಿಂದ ವರ್ಷಪೂರ್ತಿ ಫಿಟ್‌ ಆಗಿ ಇರುತ್ತಾರೆ.

ಈ ಬಾರಿಯೂ ರಣಜಿ ಟ್ರೋಫಿ ಗೆಲ್ಲುವ ಮಹತ್ವದ ಗುರಿ ಹೊಂದಿರುವ ಕರ್ನಾಟಕ ತಂಡಕ್ಕೆ ಮಿಥುನ್ ಈ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ತಂಡದಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ–20 ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಗಾಯದ ಸಮಸ್ಯೆಯಿಂದ ಫೈನಲ್‌ನಲ್ಲಿ ಆಡಲು ಸಾಧ್ಯವಾಗದಿದ್ದರೂ ಮಿಥುನ್‌ ಸೆಮಿಫೈನಲ್‌ನಲ್ಲಿ ಆರು ಎಸೆತಗಳಲ್ಲಿ ಐದು ವಿಕೆಟ್‌ ಕಬಳಿಸಿದ್ದರು. ಹೀಗೆ ಪಂಚ ವಿಕೆಟ್‌ಗಳ ಗುಚ್ಛ ಕಬಳಿಸುವುದು ಮಿಥುನ್‌ಗೆ ಅಭ್ಯಾಸವಾಗಿಬಿಟ್ಟಿದೆ. ಪ್ರಥಮ ದರ್ಜೆಯಲ್ಲಿ ಐದು ವಿಕೆಟ್‌ಗಳ ಗೊಂಚಲು 12 ಸಲ ಪಡೆದಿದ್ದಾರೆ. ಉತ್ತರ ಪ್ರದೇಶ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಉರುಳಿಸಿದ್ದರು.

ನಿರಂತರವಾಗಿ ಫಾರ್ಮ್ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ ಎಂದು ಮಿಥುನ್ ಅವರನ್ನು ಪ್ರಶ್ನಿಸಿದಾಗ ‘ತಂಡದ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿ ಮತ್ತು ಟೂರ್ನಿಗಳು ಇಲ್ಲದ ಸಮಯದಲ್ಲಿ ಮಾಡುವ ಅಭ್ಯಾಸವೇ ದೊಡ್ಡ ಶಕ್ತಿಯಾಗಿದೆ. ಆಗ ಪಟ್ಟ ಕಠಿಣ ಪರಿಶ್ರಮ ಮತ್ತು ಮಾಡಿದ ಅಭ್ಯಾಸಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಯಾವಾಗಲೂ ಶೇ 100ರಷ್ಟು ಫಲಿತಾಂಶ ಬರಬೇಕು ಎನ್ನುವ ಗುರಿಯಿಟ್ಟುಕೊಂಡು ಅಭ್ಯಾಸ ಮಾಡುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು