ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ವಿಕೆಟ್‌ ಕಬಳಿಸುವುದು ನನ್ನ ಗುರಿ: ಇಂಗ್ಲೆಂಡ್‌ ಆಲ್‌ರೌಂಡರ್‌ ಮೋಯಿನ್‌ಅಲಿ

Last Updated 29 ಜೂನ್ 2019, 10:48 IST
ಅಕ್ಷರ ಗಾತ್ರ

ಬರ್ಮಿಂಗಂ: ‘ವಿರಾಟ್‌ ಕೊಹ್ಲಿ ವಿಶ್ವಶ್ರೇಷ್ಠ ಆಟಗಾರ. ಅಪಾಯಕಾರಿ ಬ್ಯಾಟ್ಸ್‌ಮನ್‌. ಭಾನುವಾರದ ಹೋರಾಟದಲ್ಲಿ ಅವರ ವಿಕೆಟ್‌ ಕಬಳಿಸುವುದು ನನ್ನ ಗುರಿ’ ಎಂದು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಮೋಯಿನ್‌ ಅಲಿ ಹೇಳಿದ್ದಾರೆ.

ವಿರಾಟ್‌ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ನಾಯಕ ಎಂಬ ಹಿರಿಮೆ ಅವರದ್ದಾಗಿದೆ. ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 20 ಸಾವಿರ ರನ್‌ ಗಳಿಸಿ ದಾಖಲೆ ಬರೆದಿದ್ದಾರೆ.

‘ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಹೆಚ್ಚು ರನ್‌ ಗಳಿಸಬೇಕೆಂಬುದು ವಿರಾಟ್‌ ಗುರಿಯಾದರೆ, ಅವರ ವಿಕೆಟ್‌ ಉರುಳಿಸುವುದು ನನ್ನ ಯೋಜನೆ. ಅವರಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಿದಾಗ ಸಿಗುವ ಖುಷಿ ಪದಗಳಿಗೆ ನಿಲುಕದ್ದು’ ಎಂದಿದ್ದಾರೆ.

‘ವಿರಾಟ್‌ ಅವರನ್ನು ನಾನು ಬಹಳ ಹಿಂದಿನಿಂದಲೂ ಬಲ್ಲೆ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ ಆಡುವ ಅವಕಾಶ ಸಿಕ್ಕ ನಂತರ ಅವರೊಂದಿಗಿನ ಒಡನಾಟ ಹೆಚ್ಚಾಯಿತು. ಈಗ ನಾವಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ಪಾಲಿಗೂ ಭಾನುವಾರದ ಪಂದ್ಯ ಮಹತ್ವದ್ದು. ಈ ಹೊತ್ತಿನಲ್ಲಿ ಅವರ ಮೇಲೆ ಮಾತಿನ ಬಾಣ ಬಿಟ್ಟು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ಮಾಡುವುದಿಲ್ಲ’ ಎಂದು ನುಡಿದಿದ್ದಾರೆ.

‘ಭಾರತ ಮತ್ತು ನ್ಯೂಜಿಲೆಂಡ್‌ ಎದುರಿನ ಅಂತಿಮ ಎರಡು ಪಂದ್ಯಗಳು ನಮ್ಮ ಪಾಲಿಗೆ ನಿರ್ಣಾಯಕ. ಈ ಎರಡೂ ಹಣಾಹಣಿಗಳಲ್ಲೂ ನಾವು ನಿರ್ಭೀತಿಯಿಂದ ಹೋರಾಡುತ್ತೇವೆ. ಭಾರತದ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ಎದುರಿಸಲೂ ಸೂಕ್ತ ಯೋಜನೆ ಹೆಣೆದಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT