ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟೇರಾ ಸಂಜೆಗಳಿಗೆ ನಸುಗೆಂಪಿನ ರಂಗು

ಭಾರತ–ಇಂಗ್ಲೆಂಡ್ ಮೂರನೇ ಟೆಸ್ಟ್ ಇಂದಿನಿಂದ: ವಿರಾಟ್–ರೂಟ್ ಪಡೆಗಳ ಹಣಾಹಣಿ
Last Updated 23 ಫೆಬ್ರುವರಿ 2021, 17:00 IST
ಅಕ್ಷರ ಗಾತ್ರ

ಅಹಮದಾಬಾದ್:ಮೊಟೇರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ನಸುಗೆಂಪು ಚೆಂಡು ಪುಟಿಯಲಿದೆ.

ವಿಶ್ವದ ಬೃಹತ್ ಕ್ರಿಕೆಟ್ ಮೈದಾನವಾಗಿ ಪರಿವರ್ತನೆಗೊಂಡಿರುವ ಈ ತಾಣದಲ್ಲಿ ಮೊದಲ ಹಗಲು–ರಾತ್ರಿ ಟೆಸ್ಟ್ ನಡೆಯಲಿದೆ.

ಈ ಹಿಂದೆ ಇಲ್ಲಿ ಇದ್ದ ಕ್ರೀಡಾಂಗಣದಲ್ಲಿ ಹಲವು ಅವಿಸ್ಮರಣೀಯ ದಾಖಲೆಗಳು ಇತಿಹಾಸದ ಪುಟ ಸೇರಿವೆ. ಸುನಿಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಮೈಲುಗಲ್ಲು ಮುಟ್ಟಿದ್ದು ಇದೇ ಕ್ರೀಡಾಂಗಣದಲ್ಲಿ. ಕಪಿಲ್ ದೇವ್ ತಮ್ಮ ಜೀವನಶ್ರೇಷ್ಠ ಬೌಲಿಂಗ್ (83ಕ್ಕೆ9) ಸಾಧನೆ ಮಾಡಿದ ಜಾಗ ಇದು. ಅದೇ ಸಂದರ್ಭದಲ್ಲಿ ರಿಚರ್ಡ್‌ ಹ್ಯಾಡ್ಲಿಯ ವಿಕೆಟ್ ಗಳಿಕೆಯ (ಆಗಿನ ವಿಶ್ವದಾಖಲೆ) ನ್ನು ಕಪಿಲ್ ಮೀರಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ಭಾರತದ ಮಧ್ಯಮವೇಗಿ ಇಶಾಂತ್ ಶರ್ಮಾ ತಮ್ಮ ನೂರನೇ ಟೆಸ್ಟ್ ಆಡಲಿದ್ಧಾರೆ. 1.10 ಲಕ್ಷ ಆಸನ ಸಾಮರ್ಥ್ಯ ಇರುವ ಕ್ರೀಡಾಂಗಣದಲ್ಲಿ ಕೋವಿಡ್ ಕಾರಣದಿಂದ ಶೇ 50ರಷ್ಟು ಸಂಖ್ಯೆಯ ಜನರಿಗೆ ಅವಕಾಶ ನೀಡಲಾಗುತ್ತಿದೆ. ಅದರಿಂದಾಗಿ 55 ಸಾವಿರ ಪ್ರೇಕ್ಷಕರು ಸೇರುವ ಸಾಧ್ಯತೆ ಇದೆ.

ಚೆನ್ನೈನಲ್ಲಿ ನಡೆದಿದ್ದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿವೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರವೇಶಕ್ಕಾಗಿ ಭಾರತ ತಂಡವು ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿ ಜಯಿಸಬೇಕು. ಯಾವುದೇ ಪಂದ್ಯದಲ್ಲಿಯೂ ಸೋಲಬಾರದು. ಅದರಿಂದಾಗಿ ಈ ಪಂದ್ಯವು ವಿರಾಟ್ ಕೊಹ್ಲಿ ಬಳಗಕ್ಕೆ ಮಹತ್ವದ್ದಾಗಿದೆ.

ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆರ್. ಅಶ್ವಿನ್ ಅವರ ಆಲ್‌ರೌಂಡ್ ಆಟಕ್ಕೆ ಇಂಗ್ಲೆಂಡ್ ಬಸವಳಿದಿತ್ತು. ಆ ಪಂದ್ಯದಲ್ಲಿಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಶತಕ ಗಳಿಸಿದ್ದರು. ಪದಾರ್ಪಣೆ ಮಾಡಿದ್ದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದರು. ಅವರಿಗೆ ಮೊಟೇರಾ ಮೈದಾನವು ತವರಿನಂಗಳ. ಇಲ್ಲಿಯೂ ಸ್ಪಿನ್ನರ್‌ಗಳಿಗೆ ನೆರವು ಸಿಗುವುದು ಬಹುತೇಕ ಖಚಿತವಾಗಿದೆ. ಮುಸ್ಸಂಜೆಯ ಇಬ್ಬನಿಯಲ್ಲಿ ಚೆಂಡಿನ ಮೇಲೆ ಕೈಹಿಡಿತ ಸಾಧಿಸುವ ಬೌಲರ್‌ಗಳಿಗೆ ಹೆಚ್ಚು ಯಶಸ್ಸು ಸಿಗಲಿದೆ.

ಉಮೇಶ್ ಯಾದವ್ ತಂಡಕ್ಕೆ ಮರಳಿದ್ದು ಸ್ಥಾನ ಪಡೆಯುವ ಸಾಧ್ಯತೆ ಇದೆ. ಹೋದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್ ಬೂಮ್ರಾ ಹನ್ನೊಂದರ ಬಳಗದಲ್ಲಿ ಜಾಗ ಪಡೆದರೆ, ಮೊಹಮ್ಮದ್ ಸಿರಾಜ್ ವಿಶ್ರಾಂತಿ ಪಡೆಯಬಹುದು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಬೆಂಚ್‌ಗೆ ಮರಳಬಹುದು.

ಅಶ್ವಿನ್ ಮತ್ತು ಅಕ್ಷರ್ ಸ್ಪಿನ್ ಹೊಣೆ ನೋಡಿಕೊಳ್ಳುವುದು ಖಚಿತ. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕಳೆದೆರಡೂ ಪಂದ್ಯಗಳಲ್ಲಿ ಆಡಿದ್ದಾರೆ. ಅವರಿಗೆ ವಿಶ್ರಾಂತಿ ಕೊಟ್ಟು ಮಯಂಕ್ ಅಗರವಾಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಸ್ಥಾನ ಲಭಿಸುವ ಬಗ್ಗೆ ಖಚಿತತೆ ಇಲ್ಲ.

ಇಂಗ್ಲೆಂಡ್ ತಂಡಕ್ಕೆ ಜಾನಿ ಬೆಸ್ಟೊ ಮರಳಿರುವುದರಿಂದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಗೊಂಡಿದೆ. ಮೋಯಿನ್ ಅಲಿ ಸ್ವದೇಶಕ್ಕೆ ಮರಳಿರುವುದರಿಂದ ಡಾಮ್ ಬೆಸ್ ಕಣಕ್ಕಿಳಿಯುವರು. ರೋರಿ ಬರ್ನ್ಸ್‌ ಬದಲು ಜ್ಯಾಕ್ ಕ್ರಾಲಿ ಸ್ಥಾನ ಪಡೆಯಲಿದ್ದಾರೆ. ಜೇಮ್ಸ್‌ ಆ್ಯಂಡರ್ಸನ್‌ ಮತ್ತೆ ಕಣಕ್ಕಿಳಿಯಲಿದ್ದಾರೆ. ಅವರಿಗೆ ಜೋಫ್ರಾ ಆರ್ಚರ್ ಅಥವಾ ಸ್ಟುವರ್ಟ್‌ ಬ್ರಾಡ್ ಜೊತೆಗೂಡಬಹುದು.

ತಂಡಗಳು: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಇಂಗ್ಲೆಂಡ್: ಜೋ ರೂಟ್ (ನಾಯಕ), ಜೇಮ್ಸ್‌ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಡಾಮ್ನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್‌, ಡ್ಯಾನ್ ಲಾರೆನ್ಸ್, ಜ್ಯಾಕ್ ಲೀಚ್, ಒಲಿ ಪೊಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್‌, ಒಲಿ ಸ್ಟೋನ್, ಕ್ರಿಸ್ ವೋಕ್ಸ್‌, ಮಾರ್ಕ್ ವುಡ್

ಪಂದ್ಯ ಆರಂಭ: ಮಧ್ಯಾಹ್ನ 2.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT