ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಡಿ ಎಂದರೆ ಬರೀ ಧೋನಿಯಲ್ಲ!

Last Updated 21 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಎಂ.ಎಸ್‌.ಡಿ..

ಇದನ್ನು ಕೇಳಿದ ಯಾವುದೇ ಕ್ರಿಕೆಟ್ ಅಭಿಮಾನಿಯಾದರೂ ಥಟ್ ಅಂತ ಹೇಳೋ ಉತ್ತರ ‘ಮಹೇಂದ್ರಸಿಂಗ್ ಧೋನಿ’ ಎಂಬುದು. ಆದರೆ, ತಮಿಳುನಾಡಿನ ತಿರುಪ್ಪುರ್‌ ನಗರ ಪೊಲೀಸರು ಇದಕ್ಕೊಂದು ಹೊಸ ಅರ್ಥ ಕೊಟ್ಟಿದ್ದಾರೆ. ಅದೇನು ಗೊತ್ತಾ?

‘ಮೆಂಟೇನ್ ಸೋಷಿಯಲ್ ಡಿಸ್ಟೆನ್ಸ್‌’ ಎಂಬುದು ಆ ನವನಾಮವಾಗಿದೆ. ಹೌದು; ಕೊರೊನಾ ವೈರಸ್‌ ಪ್ರಸರಣದ ಸರಪಳಿ ತುಂಡರಿಸಿ ಮಟ್ಟ ಹಾಕಲು ‘ಅಂತರ’ ನಿಯಮ ಪರಿಣಾಮಕಾರಿ. ಅದಕ್ಕಾಗಿ ಕ್ರಿಕೆಟ್‌ ದಿಗ್ಗಜ ಮಹೇಂದ್ರಸಿಂಗ್ ಧೋನಿ ಅವರ ಹೆಸರನ್ನು ಪೊಲೀಸರು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಎಷ್ಟೇ ಆದರೂ ಜಾರ್ಖಂಡ್‌ನ ಧೋನಿಗೂ, ತಮಿಳುನಾಡಿಗೂ ಹಲವು ವರ್ಷಗಳಿಂದ ಅವಿನಾವಭಾವ ಸಂಬಂಧ ಅಲ್ಲವೇ?

2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಅವರು ತಮಿಳುನಾಡಿನ ಅಭಿಮಾನಿಗಳ ಪಾಲಿಗೆ ‘ಥಾಲಾ’ ಆಗಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಶುರುವಾಗುವ ಮೊದಲು ಧೋನಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಐಪಿಎಲ್ ಮುಂದೂಡಲಾಯಿತು. ಆಗ ಅವರು ತಮ್ಮ ತವರೂರು ರಾಂಚಿಗೆ ಮರಳಿದರು. ಸದ್ಯ ತಮ್ಮ ತೋಟದಲ್ಲಿ ಸಾವಯವ ಕೃಷಿ ಮಾಡುವುದರಲ್ಲಿ ನಿರತರಾಗಿದ್ದಾರೆ.

ಇತ್ತ ತಿರುಪ್ಪುರ್‌ ಪೊಲೀಸರು, ಧೋನಿಯು ಕ್ರಿಕೆಟ್ ಪಂದ್ಯವೊಂದರಲ್ಲಿ ಸಹ ಆಟಗಾರ ರೋಹಿತ್ ಶರ್ಮಾರೊಂದಿಗೆ ಮಾತನಾಡುವ ಸಂದರ್ಭದ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಇಬ್ಬರೂ ಆಟಗಾರರಿಗೆ ಮಾಸ್ಕ್‌ ಹಾಕಿದ್ದಾರೆ. ಕೊರೊನಾ ವಿರುದ್ಧ ಜನಜಾಗೃತಿಗಾಗಿ ಪೊಲೀಸರು ಕಂಡುಕೊಂಡಿರುವ ಈ ದಾರಿಯು ಅಲ್ಲಿ ಸಂಚಲನ ಮೂಡಿಸಿದೆಯಂತೆ. ದಿನನಿತ್ಯದ ಜೀವನದೊಂದಿಗೆ ಕ್ರಿಕೆಟ್‌ನ ಮಜಲುಗಳನ್ನು ಥಳಕು ಹಾಕುವ ಕಾರ್ಯಗಳು ಹೊಸದೇನಲ್ಲ.

ಕೆಲವು ವರ್ಷಗಳ ಹಿಂದೆ ರಾಜಸ್ಥಾನ ಪೊಲೀಸರು ಸಂಚಾರ ನಿಯಮ ಪಾಲನೆಗಾಗಿ ಇಂತಹದ್ದೇ ಒಂದು ಹಾದಿ ಕಂಡುಕೊಂಡಿದ್ದರು. ಬೌಲರ್ ಜಸ್‌ಪ್ರೀತ್ ಬೂಮ್ರಾ ಪಂದ್ಯವೊಂದರಲ್ಲಿ ನೋಬಾಲ್‌ ಹಾಕಿದ್ದನ್ನು ಬಳಸಿಕೊಂಡು ‘ಲೈನ್ ಉಲ್ಲಂಘಿಸಿದರೆ ಸೋಲು ಖಚಿತ’ ಎಂದು ದೊಡ್ಡ ಪ್ರಚಾರ ಮಾಡಿದ್ದರು. ಆದರೆ ನಂತರ ಅದು ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿತ್ತು. ಪೊಲೀಸರು ಕ್ಷಮೆಯಾಚಿಸಿದ್ದರು.

ಅದೇನೇ ಇರಲಿ; ಸದ್ಯ ತಿರುಪ್ಪುರ್‌ದಲ್ಲಿ ಪೊಲೀಸರು ಬಳಸಿಕೊಂಡಿರುವ ಪರಿಕಲ್ಪನೆಯು ಜನಮೆಚ್ಚುಗೆ ಗಳಿಸುತ್ತಿದೆ. ಕೊರೊನಾ ಹಾವಳಿಯಿಂದ ಅತಿಹೆಚ್ಚು ಬಾಧೆಗೊಳಗಾಗಿರುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಇಲ್ಲಿ ಈ ವೈರಸ್‌ ಮಟ್ಟ ಹಾಕಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ. ಆದರೆ, ಜನರ ಸಹಕಾರವಿಲ್ಲದೇ ಅದು ಸಾಧ್ಯವಿಲ್ಲ. ಆದ್ದರಿಂದ ಜಾಗೃತಿ ಮೂಡಿಸಲು ಕ್ರಿಕೆಟಿಗರು, ಚಲನಚಿತ್ರ ತಾರೆಯರ ವರ್ಚಸ್ಸನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ಆಡಳಿತ ಚಿತ್ತ ನೆಟ್ಟಿದೆ.

ತಮಿಳುನಾಡಿನ ತಿರುಪ್ಪುರ ಪೊಲೀಸರು ಟ್ವಿಟರ್‌ನಲ್ಲಿ ಹಾಕಿರುವ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT