ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಸತತ 9 ಬಾರಿ ಮೊದಲ ಪಂದ್ಯ ಸೋತ ಮುಂಬೈ ಇಂಡಿಯನ್ಸ್ – ಏನಂದ್ರು ರೋಹಿತ್?

Last Updated 10 ಏಪ್ರಿಲ್ 2021, 5:25 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋಲನುಭವಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ದಾಖಲೆ ಬರೆದಿದೆ!

ಐಪಿಎಲ್‌ ಇತಿಹಾಸದಲ್ಲಿಯೇ ಟೂರ್ನಿಯ ಮೊದಲ ಪಂದ್ಯದಲ್ಲಿ ಸತತ 9 ಬಾರಿ ಸೋಲನುಭವಿಸಿದ ಅಪಖ್ಯಾತಿಗೆ ಪಾತ್ರವಾಗಿದೆ. 2013ರ ಬಳಿಕ ನಡೆದ ಎಲ್ಲ ಐಪಿಎಲ್‌ ಟೂರ್ನಿಗಳ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

ಆದರೆ, ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದರೂ ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ತಂಡ ಯಶಸ್ವಿಯಾಗಿದೆ. ಪರಿಣಾಮವಾಗಿ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2013, 2015, 2017, 2019 ಹಾಗೂ 2020ರ ಐಪಿಎಲ್‌ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ. ಈ ಎಲ್ಲ ಟೂರ್ನಿಗಳ ಮೊದಲ ಪಂದ್ಯದಲ್ಲಿ ತಂಡವು ಸೋಲನುಭವಿಸಿತ್ತು.

ನಾಯಕ ರೋಹಿತ್ ಶರ್ಮಾ ಏನೆನ್ನುತ್ತಾರೆ?

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯು ರೋಚಕ ಗೆಲುವು ಸಾಧಿಸಿತ್ತು. ಮ್ಯಾಕ್ಸ್‌ವೆಲ್ ಮತ್ತು ಡಿವಿಲಿಯರ್ಸ್ ಬ್ಯಾಟಿಂಗ್ ಬಲದ ಹೊರತಾಗಿಯೂ ಉತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ಕೊನೆಯ ಎಸೆತದ ವರೆಗೆ ಕೊಂಡೊಯ್ಯುವಲ್ಲಿ ಮುಂಬೈ ಇಂಡಿಯನ್ಸ್‌ ಯಶಸ್ವಿಯಾಗಿತ್ತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ‘ನಾನು ತರ್ಕಿಸುವ ಬಹು ಮುಖ್ಯ ಅಂಶವದು (ಟೂರ್ನಿಗಳನ್ನು ಗೆಲ್ಲುವುದು). ಮೊದಲ ಪಂದ್ಯವಲ್ಲ. ಇದು ಉತ್ತಮ ಪ್ರದರ್ಶನ ಎಂದು ಭಾವಿಸಿದ್ದೇನೆ. ಕೊನೆಯವರೆಗೂ ಉತ್ತಮ ಹೋರಾಟ ನಡೆಸಿದೆವು. ನಮಗೆ ದೊರೆತ ಆರಂಭಕ್ಕೆ ಹೋಲಿಸಿದರೆ 20 ರನ್‌ಗಳಷ್ಟು ಕಡಿಮೆ ಮೊತ್ತ ಪೇರಿಸಿದೆವು. ಮೊದಲ ಪಂದ್ಯದಲ್ಲಿ ಕೆಲವು ತಪ್ಪುಗಳನ್ನು ಮಾಡಿದೆವು, ಅವು ಸಂಭವಿಸುತ್ತವೆ’ ಎಂದು ಹೇಳಿದ್ದಾರೆ.

‘ಅವರೊಬ್ಬ (ಮ್ಯಾಕ್ರೊ ಜಾನ್ಸನ್) ಪ್ರತಿಭಾನ್ವಿತರಾಗಿದ್ದು ಯಾವುದೇ ಪರಿಸ್ಥಿತಿಯಲ್ಲೂ ಬೌಲಿಂಗ್ ಮಾಡಬಲ್ಲರು. ಡಿವಿಲಿಯರ್ಸ್ ಮತ್ತು ಕ್ರಿಶ್ಚಿಯನ್ ಅವರ ವಿಕೆಟ್ ಪಡೆಯಲು ಬಯಸಿದ್ದೆವು. ಹಾಗಾಗಿ ಬೂಮ್ರಾ ಮತ್ತು ಬೌಲ್ಟ್ ಅವರಿಗೆ ಬೌಲಿಂಗ್ ನೀಡಲಾಗಿತ್ತು. ದುರದೃಷ್ಟವಶಾತ್ ಅದು ಫಲಪ್ರದವಾಗಲಿಲ್ಲ. ನಿಜವಾಗಿಯೂ ಇದು ಬ್ಯಾಟಿಂಗ್‌ಗೆ ಸುಲಭವಾದ ಪಿಚ್ ಕೂಡ ಆಗಿರಲಿಲ್ಲ. ಡಿವಿಲಿಯರ್ಸ್ ಅದ್ಭುತ ಆಟಗಾರ, ಪಂದ್ಯ ಗೆಲ್ಲಿಸಿಕೊಟ್ಟರು’ ಎಂದು ರೋಹಿತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT