ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಕೊಟ್ಟು ಸೋಬರ್ಸ್ ವಿಕೆಟ್‌ ಗಳಿಸಿದ್ದ ದುರಾನಿ

‘ದಿ ಬಿಗಿನಿಂಗ್‌ ಆಫ್‌ ಇಂಡಿಯಾಸ್‌ ಕ್ರಿಕೆಟಿಂಗ್ ಗ್ರೇಟ್‌ನೆಸ್‌‘ ಪುಸ್ತಕದಲ್ಲಿ ಉಲ್ಲೇಖ: ವಿಂಡೀಸ್‌, ಇಂಗ್ಲೆಂಡ್‌ ವಿರುದ್ಧದ ಐತಿಹಾಸಿಕ ವಿಜಯಗಳ ನೆನಪು
Last Updated 5 ಮಾರ್ಚ್ 2021, 20:06 IST
ಅಕ್ಷರ ಗಾತ್ರ

ನವದೆಹಲಿ: 1971ರ ಇಸ್ವಿಯು ಭಾರತ ಕ್ರಿಕೆಟ್‌ ಪ್ರೇಮಿಗಳಿಗೆ ಯಾವಾಗಲೂ ವಿಶೇಷವಾದದ್ದು. ದಿಗ್ಗಜ ಸುನಿಲ್ ಗಾವಸ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರವರ್ಧಮಾನಕ್ಕೆ ಬಂದ ಅದೇ ವರ್ಷದಲ್ಲಿ ಭಾರತ ತಂಡವು ಇಂಗ್ಲೆಂಡ್‌ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಜಯಭೇರಿ ಮೊಳಗಿಸಿತ್ತು.

ಈ ಎರಡೂ ವಿಜಯಗಳು ಭಾರತದ ಕ್ರಿಕೆಟ್‌ಗೆ ಐತಿಹಾಸಿಕ ಪ್ರಥಮಗಳಾಗಿದ್ದವು. ಆ ಗೆಲುವುಗಳ 50ನೇ ವರ್ಷಾಚರಣೆಯ ನೆನಪಿಗಾಗಿ ‘1971: ದಿ ಬಿಗಿನಿಂಗ್ ಆಫ್ ಇಂಡಿಯಾಸ್‌ ಕ್ರಿಕೆಟಿಂಗ್ ಗ್ರೇಟ್‌ನೆಟ್‌‘ ಎಂಬ ಕೃತಿಯೊಂದು ಹೊರಬಂದಿದೆ. ಕ್ರಿಕೆಟ್‌ ಇತಿಹಾಸಕಾರ ಬೋರಿಯಾ ಮಜುಂದಾರ್‌ ಹಾಗೂ ಹಿರಿಯ ಪತ್ರಕರ್ತ ಗೌತಮ್ ಭಟ್ಟಾಚಾರ್ಯ ಸಹ ಲೇಖಕರಾಗಿರುವ ಈ ಕೃತಿಯನ್ನು ಹಾರ್ಪರ್ ಕಾಲಿನ್ಸ್ ಪ್ರಕಟಿಸಿದೆ. ದಿವಂಗತ ಅಜಿತ್ ವಾಡೇಕರ್ ಅವರ ನೇತೃತ್ವದ ತಂಡದ ಸಾಹಸಗಳು ಈ ಕೃತಿಯಲ್ಲಿ ದಾಖಲಾಗಿವೆ.

ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಸಲೀಮ್ ದುರಾನಿ ಅವರು ಕ್ಲೈವ್ ಲಾಯ್ಡ್‌ ಹಾಗೂ ಸರ್ ಗ್ಯಾರಿ ಸೋಬರ್ಸ್‌ ಅವರು ವಿಕೆಟ್‌ ಕಬಳಿಸಿ ತಂಡದ ಜಯಕ್ಕೆ ಅಡಿಪಾಯ ಹಾಕಿಕೊಟ್ಟಿದ್ದರು. ಅಂದು 21 ವರ್ಷದ ಉದಯೋನ್ಮುಖ ಆಟಗಾರನಾಗಿದ್ದ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಅವರು, ಆ ಸವಿನೆನಪುಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ಆ ಪಂದ್ಯದ ಮೂರನೇ ದಿನ ವೆಸ್ಟ್ ಇಂಡೀಸ್‌ ತಂಡವು 1 ವಿಕೆಟ್‌ಗೆ 150 ರನ್ ಗಳಿಸಿತ್ತು. ಅಂದು ಸಂಜೆ ತಂಡದ ಹೊಟೇಲ್‌ನಲ್ಲಿ ನಡೆದ ಸ್ವಾರಸ್ಯಕರ ಚರ್ಚೆಯನ್ನು ವಿಶ್ವನಾಥ್ ಅವರು ತಮ್ಮದೇ ಶೈಲಿಯಲ್ಲಿ ಮೆಲುಕು ಹಾಕಿದ್ದಾರೆ.

‘ಮೂರನೇ ದಿನದಾಟದ ಕೊನೆಯಲ್ಲಿ ಅಜಿತ್ ಅವರ ಕೋಣೆಯಲ್ಲಿ ನಾವು ಮದ್ಯ ಸೇವಿಸುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಸಲೀಮ್, ತಾನೂ ಸೇವಿಸಬಹುದೆ ಎಂದು ನೇರವಾಗಿ ಅಜಿತ್ ಅವರನ್ನು ಕೇಳಿದರು. ಮಾನಸಿಕ ಒತ್ತಡ ಕಡಿಮೆ ಮಾಡಲು ಅಂದು ವೆಸ್ಟ್ ಇಂಡೀಸ್‌ನಲ್ಲಿ ಇದು ನಮಗೆ ಸಾಮಾನ್ಯವಾಗಿತ್ತು‘ ಎಂದು ವಿಶ್ವನಾಥ್ ನೆನಪಿಸಿಕೊಂಡಿದ್ದಾರೆ.

‘ಮಾತು ಮುಂದುವರಿಸಿದ ಸಲೀಮ್ ಅವರು ನಾನು ನಾಳೆ ಲಾಯ್ಡ್ ಹಾಗೂ ಸೋಬರ್ಸ್‌ ವಿಕೆಟ್‌ ಗಳಿಸುತ್ತೇನೆ ಎಂದರು. ನಾವು ಅಚ್ಚರಿಯಿಂದ ಅವರತ್ತ ನೋಡಿದೆವು‘ ಎಂದು ವಿಶ್ವನಾಥ್ ಉಲ್ಲೇಖಿಸಿದ್ದಾರೆ.

ಸಲೀಮ್ ಅವರು ತಾವು ಹೇಳಿದಂತೆ ಲಾಯ್ಡ್‌ (15 ರನ್) ಅವರನ್ನು ಅಜಿತ್ ಅವರಿಗೆ ಕ್ಯಾಚ್ ಮಾಡುವಂತೆ ಪ್ರೇರೇಪಿಸಿದ್ದರು. ಸೋಬರ್ಸ್‌ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದ್ದರು. ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್‌ನಲ್ಲಿ 261ಕ್ಕೆ ಆಲೌಟ್ ಆಗಿತ್ತು. ಭಾರತದ ಗೆಲುವಿಗೆ 125 ರನ್‌ಗಳ ಗುರಿ ಸಿಕ್ಕಿತ್ತು.

ಸುನಿಲ್ ಗಾವಸ್ಕರ್ ಅವರು ಪದಾರ್ಪಣೆಯ ಈ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 65 ಮತ್ತು 67 ರನ್ ಗಳಿಸಿದ್ದರು. ಭಾರತ ಏಳು ವಿಕೆಟ್‌ಗಳಿಂದ ಪಂದ್ಯವನ್ನು ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT