ಸೋಮವಾರ, ಮಾರ್ಚ್ 8, 2021
22 °C
ಪಾಕಿಸ್ತಾನದ ವಿರುದ್ಧ ಗೆಲುವಿನ ಅಂಚಿನಲ್ಲಿ ನ್ಯೂಜಿಲೆಂಡ್‌

ಮೊದಲ ಟೆಸ್ಟ್: ಮಧ್ಯಮವೇಗದ ಬೌಲರ್ ಟಿಮ್ ಸೌಥಿ 300 ವಿಕೆಟ್‌ ಸಾಧನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೌಂಟ್‌ ಮಾಂಗನೂಯಿ: ನ್ಯೂಜಿಲೆಂಡ್‌ ತಂಡದ ಮಧ್ಯಮವೇಗದ ಬೌಲರ್ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಮೈಲುಗಲ್ಲು ತಲುಪಿದರು. ಅವರ ಆಟದ ನೆರವಿನಿಂದ ನ್ಯೂಜಿಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿದೆ.

ಸೌಥಿ ಅವರು 300 ವಿಕೆಟ್‌ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೂರನೇ ಹಾಗೂ ವಿಶ್ವದ 34ನೇ ಬೌಲರ್‌ ಎನಿಸಿಕೊಂಡರು. ಈ ಮೊದಲು ಕಿವೀಸ್‌ನ ರಿಚರ್ಡ್‌ ಹ್ಯಾಡ್ಲಿ (431) ಹಾಗೂ ಡೇನಿಯಲ್ ವೆಟೊರಿ (361) ಈ ಮೈಲುಗಲ್ಲು ದಾಟಿದ್ದಾರೆ. ಸದ್ಯ ಆಡುತ್ತಿರುವವರ ಪೈಕಿ ಸೌಥಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ. 76 ಟೆಸ್ಟ್ ಪಂದ್ಯಗಳಲ್ಲಿ 28.48ರ ಸರಾಸರಿ ಹಾಗೂ 56.8ರ ಸ್ಟ್ರೈಕ್ ರೇಟ್‌ನಲ್ಲಿ ಅವರು 300 ವಿಕೆಟ್‌ ಗಳಿಸಿದ್ದಾರೆ.

ಆತಿಥೇಯ ಕಿವೀಸ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 180 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಒಟ್ಟು 373 ರನ್‌ಗಳ ಗೆಲುವಿನ ಗುರಿಯನ್ನು ಪಾಕಿಸ್ತಾನ ತಂಡಕ್ಕೆ ನೀಡಿದೆ. ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ ನಾಲ್ಕನೇ ದಿನದಾಟದ ಕೊನೆಗೆ ಮೂರು ವಿಕೆಟ್ ಕಳೆದುಕೊಂಡು 71 ರನ್‌ ಗಳಿಸಿದೆ. ಅಜರ್ ಅಲಿ (34) ಹಾಗೂ ಫವಾದ್‌ ಆಲಂ ಕ್ರೀಸ್‌ನಲ್ಲಿದ್ದು, ಜಯ ಗಳಿಸಲು ಇನ್ನೂ 202 ರನ್‌ ಕಲೆಹಾಕಬೇಕಿದೆ.

ಒಂದೂ ರನ್‌ ಇಲ್ಲದೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅಜರ್ ಹಾಗೂ ಫವಾದ್ ಆಸರೆಯಾಗಿದ್ದರು. ಒಂಬತ್ತು ಓವರ್ ಬೌಲ್ ಮಾಡಿದ್ದ ಸೌಥಿ 15 ರನ್ ನೀಡಿ ಎರಡು ವಿಕೆಟ್‌ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್‌: 155 ಓವರ್‌ಗಳಲ್ಲಿ 431; ಪಾಕಿಸ್ತಾನ: 102.2 ಓವರ್‌ಗಳಲ್ಲಿ 239; ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 45.3 ಓವರ್‌ಗಳಲ್ಲಿ 5 ವಿಕೆಟ್‌ಗೆ 180 (ಟಾಮ್‌ ಲೇಥಮ್‌ 53, ಟಾಮ್ ಬ್ಲಂಡೆಲ್‌ 64, ಕೇನ್‌ ವಿಲಿಯಮ್ಸನ್‌ 21; ನಸೀಂ ಶಾ 55ಕ್ಕೆ 3). ಪಾಕಿಸ್ತಾನ: 38 ಓವರ್‌ಗಳಲ್ಲಿ 3 ವಿಕೆಟ್‌ಗೆ 71 (ಅಜರ್ ಅಲಿ ಔಟಾಗದೆ 34, ಫವಾದ್ ಆಲಂ ಔಟಾಗದೆ 21; ಟಿಮ್ ಸೌಥಿ 15ಕ್ಕೆ 2).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು