ಗುರುವಾರ , ಆಗಸ್ಟ್ 11, 2022
21 °C
ಟಿಮ್‌ ಸೌಥಿ, ವ್ಯಾಗ್ನರ್ ಪರಿಣಾಮಕಾರಿ ದಾಳಿ: ಇನಿಂಗ್ಸ್ ಜಯದ ಅಂಚಿನಲ್ಲಿ ನ್ಯೂಜಿಲೆಂಡ್‌

ಜರ್ಮೈನ್‌– ಜೋಸೆಫ್‌ ಜೊತೆಯಾಟ

ಎಪಿ Updated:

ಅಕ್ಷರ ಗಾತ್ರ : | |

Prajavani

ಹ್ಯಾಮಿಲ್ಟನ್‌: ಎದುರಾಳಿ ವೆಸ್ಟ್ ಇಂಡೀಸ್‌ ತಂಡಕ್ಕೆ ಫಾಲೋ ಆನ್ ಹೇರಿ ಪಂದ್ಯದ ಮೂರನೇ ದಿನದಲ್ಲೇ ಇನಿಂಗ್ಸ್ ಜಯ ಸಾಧಿಸುವ ನ್ಯೂಜಿಲೆಂಡ್ ತಂಡದ ಆಸೆಗೆ ಜರ್ಮೈನ್ ಬ್ಲಾಕ್‌ವುಡ್‌ ಹಾಗೂ ಅಲ್ಜರಿ ಜೋಸೆಫ್‌ ಅಡ್ಡಿಯಾದರು. ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ 107 ರನ್‌ ಸೇರಿಸಿದ ಇವರು ಆತಿಥೇಯ ತಂಡದ ಬೌಲರ್‌ಗಳಿಗೆ ಸವಾಲಾದರು.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ, ನ್ಯೂಜಿಲೆಂಡ್‌ ತಂಡದ ಮೊದಲ ಇನಿಂಗ್ಸ್ ಮೊತ್ತಕ್ಕೆ (7 ವಿಕೆಟ್‌ಗೆ 519) ಉತ್ತರವಾಗಿ ಬ್ಯಾಟ್‌ ಮಾಡಿದ ವೆಸ್ಟ್ ಇಂಡೀಸ್‌ ತಂಡವು ಟಿಮ್‌ ಸೌಥಿ (35ಕ್ಕೆ 4) ದಾಳಿಗೆ ತತ್ತರಿಸಿತು. 138 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು.

ಮೊದಲ ಇನಿಂಗ್ಸ್‌ನಲ್ಲಿ 381 ರನ್‌ಗಳ ಮುನ್ನಡೆ ಗಳಿಸಿದ ನ್ಯೂಜಿಲೆಂಡ್ ತಂಡವು ಫಾಲೋ ಆನ್‌ ಹೇರಿತು. ಎರಡನೇ ಇನಿಂಗ್ಸ್‌ನಲ್ಲೂ ಕೆರಿಬಿಯನ್‌ ಪಡೆಯ ಬ್ಯಾಟಿಂಗ್‌ ವೈಫಲ್ಯ ಮುಂದುವರಿಯಿತು. 89 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡ ತಂಡ, ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಆಗುವ ಆತಂಕ ಎದುರಿಸಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಬ್ಲಾಕ್‌ವುಡ್‌ (ಔಟಾಗದೆ 80) ಹಾಗೂ ಜೋಸೆಫ್‌ (ಔಟಾಗದೆ 59) ಅರ್ಧಶತಕಗಳನ್ನು ಗಳಿಸಿ ಆಸರೆಯಾದರು. ದಿನದಾಟದ ಅಂತ್ಯಕ್ಕೆ ವಿಂಡೀಸ್‌ 6 ವಿಕೆಟ್‌ಗೆ 196 ರನ್‌ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಆ ತಂಡ ಇನ್ನೂ 185 ರನ್‌ ಗಳಿಸಬೇಕಿದೆ.

ಬೆರಳಿಗೆ ಗಾಯ ಮಾಡಿಕೊಂಡಿರುವ ವಿಂಡೀಸ್‌ ವಿಕೆಟ್‌ ಕೀಪರ್ ಶೇನ್ ಡೌರಿಚ್‌ ಎರಡೂ ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಆ ತಂಡ 10 ಆಟಗಾರರೊಂದಿಗೆ ಆಡಬೇಕಾಯಿತು.

ಸಂಕ್ಷಿಪ್ತ ಸ್ಕೋರ್‌:  ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್: 7 ವಿಕೆಟ್‌ಗೆ 519 ಡಿಕ್ಲೇರ್ಡ್‌: ವೆಸ್ಟ್ ಇಂಡೀಸ್‌ ಮೊದಲ ಇನಿಂಗ್ಸ್ (ಶುಕ್ರವಾರ ವಿಕೆಟ್‌ ನಷ್ಟವಿಲ್ಲದೆ 49): 64 ಓವರ್‌ಗಳಲ್ಲಿ 138 ಆಲೌಟ್‌(ಜಾನ್‌ ಕ್ಯಾಂಪ್‌ಬೆಲ್‌ 26, ಜೇಸನ್‌ ಹೋಲ್ಡರ್‌ 25, ಜರ್ಮೈನ್ ಬ್ಲಾಕ್‌ವುಡ್‌ 23; ಟಿಮ್‌ ಸೌಥಿ 35ಕ್ಕೆ 4, ಕೈಲ್‌ ಜೆಮಿಸನ್‌ 25ಕ್ಕೆ 2, ನೀಲ್‌ ವ್ಯಾಗ್ನರ್‌ 33ಕ್ಕೆ 2:  ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್ (ಫಾಲೋ ಆನ್‌): 42 ಓವರ್‌ಗಳಲ್ಲಿ 6 ವಿಕೆಟ್‌ಗೆ 196 (ಜರ್ಮೈನ್‌ ಬ್ಲಾಕ್‌ವುಡ್‌ ಔಟಾಗದೆ 80, ಅಲ್ಜರಿ ಜೋಸೆಫ್‌ ಔಟಾಗದೆ 59; ನೀಲ್‌ ವ್ಯಾಗ್ನರ್ 62ಕ್ಕೆ 2, ಕೈಲ್‌ ಜೆಮಿಸನ್‌ 33ಕ್ಕೆ 1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು