ಬುಧವಾರ, ಜನವರಿ 19, 2022
23 °C
ಹೋರಾಟದ ಮೊತ್ತ ಪೇರಿಸಿದ ನ್ಯೂಜಿಲೆಂಡ್; ಹ್ಯಾಜಲ್‌ವುಡ್‌ಗೆ ಮೂರು ವಿಕೆಟ್

ಕೇನ್ ವಿಲಿಯಮ್ಸನ್‌ ಬ್ಯಾಟಿಂಗ್ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ನಾಯಕನಿಗೆ ತಕ್ಕ ಆಟವಾಡಿದ ಕೇನ್ ವಿಲಿಯಮ್ಸನ್ ಅಬ್ಬರದ ಬ್ಯಾಟಿಂಗ್‌ ಬಲದಿಂದ ನ್ಯೂಜಿಲೆಂಡ್ ತಂಡವು ಭಾನುವಾರ ಇಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಹೋರಾಟದ ಮೊತ್ತ ಪೇರಿಸಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಬೌಲರ್‌ಗಳು ಕಿವೀಸ್‌ಗೆ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಈ ಹಂತದಲ್ಲಿ ಕೇನ್ ವಿಲಿಯಮ್ಸನ್ (85; 48ಎಸೆತ, 10ಬೌಂಡರಿ, 3ಸಿಕ್ಸರ್) ಆತಂಕ ದೂರ ಮಾಡಿದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 172 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ಇನಿಂಗ್ಸ್‌ಗೆ ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್  ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಹಾಕಿದ ಮೂರನೇ ಓವರ್‌ನಲ್ಲಿ  ಗಪ್ಟಿಲ್ ಹೊಡೆದೆ ಚೆಂಡನ್ನು ಕ್ಯಾಚ್‌ ಮಾಡುವ ಮ್ಯಾಥ್ಯೂ ವೇಡ್ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಆದರೆ ನಂತರದ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಡೆರಿಲ್ ಮಿಚೆಲ್ (11 ರನ್) ವಿಕೆಟ್ ಕಬಳಿಸುವಲ್ಲಿ ಸಫಲರಾದರು. ಸೆಮಿಫೈನಲ್‌ನಲ್ಲಿ ಕಿವೀಸ್ ಗೆಲುವಿಗೆ ಮಿಚೆಲ್ ಆಟವೇ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ಗಪ್ಟಿಲ್ ಜೊತೆಗೂಡಿದ ಕೇನ್ ತಮ್ಮ ಅನುಭವ, ತಾಳ್ಮೆ ಮತ್ತು ಕೌಶಲಗಳನ್ನು ಸಮ್ಮಿಶ್ರ ಮಾಡಿದ ಅಂದ–ಚೆಂದದ ಬ್ಯಾಟಿಂಗ್ ಮಾಡಿದರು. ಅವರ ಆಟಕ್ಕೆ ಹೆಚ್ಚು ಆದ್ಯತೆ ಕೊಟ್ಟ ಗಪ್ಪಿಲ್ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿದರು.ಎರಡನೇ ವಿಕೆಟ್‌ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಇವರಿಬ್ಬರ ತಾಳ್ಮೆಯ ಆಟದಿಂದಾಗಿ 11 ಓವರ್‌ಗಳಲ್ಲಿ ಒಟ್ಟು 76 ರನ್‌ಗಳು ಮಾತ್ರ ಸೇರಿದ್ದವು. ಆದರೆ, ವಿಕೆಟ್‌ಗಳನ್ನು ಕಾಪಾಡಿಕೊಂಡಿದ್ದರು. 11ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕೇನ್ ವಿಲಿಯಮ್ಸನ್‌ಗೆ ಫೀಲ್ಡರ್ ಜೋಶ್ ಜೀವದಾನ ಕೊಟ್ಟರು.

ನಂತರದ ಓವರ್‌ನಲ್ಲಿ ಗಪ್ಟಿಲ್ ವಿಕೆಟ್ ಪಡೆದ ಆ್ಯಡಂ ಜಂಪಾ ಸಂಭ್ರಮಿಸಿದರು. ಆದರೆ, ವಿಲಿಯಮಮ್ಸನ್‌ ಅವರನ್ನು ನಿಯಂತ್ರಿಸುವುದು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಗ್ಲೆನ್ ಫಿಲಿಪ್ಸ್ (18) ಔಟಾದರು. ಶತಕದತ್ತ ದಾಪುಗಾಲಿಟ್ಟಿದ್ದ ಕೇನ್  ರನ್‌ ಗಳಿಕೆಯ ವೇಗ ಹೆಚ್ಚಿಸುವ ಭರದಲ್ಲಿ ಔಟಾದರು. ಜಿಮ್ಮಿ ನಿಶಾಮ್ (ಔಟಾಗದೆ 13) ಮತ್ತು ಸೀಫರ್ಟ್ (ಔಟಾಗದೆ 8) ತಂಡದ ಮೊತ್ತ ಬೆಳೆಸಲು ತಮ್ಮ ಕಾಣಿಕೆ ನೀಡಿದರು.

ಆಸ್ಟ್ರೇಲಿಯಾದ ಹ್ಯಾಜಲ್‌ವುಡ್ 16 ರನ್‌ ಕೊಟ್ಟು ಮೂರು ವಿಕೆಟ್ ಗಳಿಸಿದರು. ಆದರೆ, ವೇಗಿ ಮಿಚೆಲ್ ಸ್ಟಾರ್ಕ್‌ (4–0–60–0) ದುಬಾರಿ ಬೌಲರ್‌ ಆದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು