ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ | ದೇಶಿ ಟೂರ್ನಿ, ಹೆಚ್ಚು ಪಂದ್ಯಗಳೇ ಗುರಿ ಎಂದ ಸಾಬಾ ಕರೀಂ

ಆಗಸ್ಟ್‌ನಲ್ಲಿ ಆರಂಭವಾಗಬೇಕಿರುವ ಪಂದ್ಯಗಳು: ಪ್ರತಿ ತಿಂಗಳು ಪರಿಸ್ಥಿತಿ ಅವಲೋಕನ: ಸಾಬಾ ಕರೀಂ
Last Updated 27 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಹಾವಳಿಯ ನಡುವೆ ಎಲ್ಲ ಕ್ರೀಡೆಗಳಂತೆ ಕ್ರಿಕೆಟ್ ಚಟುವಟಿಕೆಯೂ ಸ್ತಬ್ಧವಾಗಿದೆ. ಆಗಸ್ಟ್‌ನಲ್ಲಿ ಆರಂಭವಾಗಬೇಕಿರುವ 2020–21ರ ಋತುವಿನ ದೇಶಿ ಟೂರ್ನಿಗಳಿಗೆ ಬಿಸಿಸಿಐ ಇನ್ನೂ ಯಾವ ಸಿದ್ಧತೆಯನ್ನೂ ನಡೆಸಿಲ್ಲ. ಈ ನಡುವೆ ದೇಶಿ ಟೂರ್ನಿಗಳ ಉಸ್ತುವಾರಿ ಸಾಬಾ ಕರೀಂ ಭರವಸೆಯಲ್ಲಿದ್ದು ಸವಾಲಿನ ನಡುವೆಯೇ ಆದಷ್ಟು ಪಂದ್ಯಗಳನ್ನು ನಡೆಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

‘ದೇಶಿ ಟೂರ್ನಿಗಳಿಗೆ ಸಂಬಂಧಿಸಿದ ಯಾವುದೇ ಬಗೆಯ ’ಬ್ಯಾಕ್‌ ಅಪ್’ ಯೋಜನೆಗಳು ಇಲ್ಲ. ನಮ್ಮ ಬಳಿ ಸದ್ಯ ಸಾಕಷ್ಟು ಸಮಯವಿದ್ದು ಆಗಸ್ಟ್ ವರೆಗೆ ಪ್ರತಿ ತಿಂಗಳು ಪರಿಸ್ಥಿತಿಯನ್ನು ಅವಲೋಕಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಿಸಿಸಿಐ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಗಿರುವ ಸಾಬಾ ಹೇಳಿದರು.

ಕಳೆದ ಬಾರಿಯ ದೇಶಿ ಋತು ಆಗಸ್ಟ್‌ನಲ್ಲಿ ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಆರಂಭಗೊಂಡು ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಫೈನಲ್‌ನೊಂದಿಗೆ ಕೊನೆಗೊಂಡಿತ್ತು. ಕ್ರಿಕೆಟ್ ಋತುವಿನ ಕೊನೆಯ ಟೂರ್ನಿಯಾದ ಇರಾನಿ ಟ್ರೋಫಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಟೂರ್ನಿ ರಣಜಿ ಫೈನಲ್‌ನ ನಾಲ್ಕು ದಿನಗಳ ನಂತರ ನಿಗದಿಯಾಗಿತ್ತು.

ಐಪಿಎಲ್ ಟೂರ್ನಿಯನ್ನು ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು ಸೆಪ್ಟೆಂಬರ್‌ನಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಈ ವರೆಗೆ ಐಪಿಎಲ್ ಸಂದರ್ಭದಲ್ಲಿ ಭಾರತದಲ್ಲಿ ಬೇರೆ ಯಾವುದೇ ಕ್ರಿಕೆಟ್ ಚಟುವಟಿಕೆ ನಡೆಯುತ್ತಿರಲಿಲ್ಲ. ಈ ಬಾರಿ ಐಪಿಎಲ್ ಮತ್ತು ಇತರ ಟೂರ್ನಿಗಳು ಒಂದೇ ಸಂದರ್ಭದಲ್ಲಿ ನಡೆದರೆ ಸಮಸ್ಯೆಯಾಗಲಾರದೇ ಎಂದು ಕೇಳಿದಾಗ ‘ಕೊರೊನಾ ಹಾವಳಿ ನಿಯಂತ್ರಣದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಸದ್ಯ ಏನೂ ಹೇಳಲಾಗದು. ಈಗ ಸುರಕ್ಷಿತವಾಗಿರುವುದಕ್ಕಷ್ಟೇ ಮೊದಲ ಆದ್ಯತೆ. ಶೀಘ್ರದಲ್ಲೇ ಎಲ್ಲವೂ ಸರಿ ಹೋಗುವ ನಿರೀಕ್ಷೆ ಇದೆ. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲ ಸಾಧ್ಯತೆಗಳನ್ನೂ ಪೂರಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಸಾಬಾ ಕರೀಂ ಹೇಳಿದರು.

ಕಳೆದ ಬಾರಿ 2035 ಪಂದ್ಯಗಳು: ಕಳೆದ ಋತುವಿನಲ್ಲಿ ಪುರುಷ, ಮಹಿಳಾ ವಿಭಾಗ ಮತ್ತು ವಿವಿಧ ವಯೋಮಾನ ವರ್ಗಗಳಲ್ಲಿ ಬಿಸಿಸಿಐ ಒಟ್ಟು 2035 ಪಂದ್ಯಗಳನ್ನು ಆಯೋಜಿಸಿದೆ. ಪುರುಷರ ವಿಭಾಗದಲ್ಲೇ 470 ಪಂದ್ಯಗಳು ನಡೆದಿವೆ. 2018ರಲ್ಲಿ ದೇಶಿ ಕ್ರಿಕೆಟ್‌ಗೆ ಒಂಬತ್ತು ತಂಡಗಳನ್ನು ಸೇರಿಸಿದ್ದರಿಂದಾಗಿ ಪಂದ್ಯಗಳ ಸಂಖ್ಯೆ ಎಚ್ಚಾಗಿದೆ.

ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯು ಕೊರೊನಾ ಹಾವಳಿಯಿಂದಾಗಿ ದೇಶಿ ಟೂರ್ನಿಗಳು ಸೇರಿದಂತೆ ಎಲ್ಲ ಕ್ರಿಕೆಟ್ ಚಟುವಟಿಕೆಯನ್ನು ಜೂನ್ ಆಂತ್ಯದ ವರೆಗೆ ರದ್ದುಗೊಳಿಸಲು ನಿರ್ಧರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT