ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ ಸ್ಟೋಕ್ಸ್‌ ನಿರ್ಧಾರ ಸೂಕ್ತ: ವಾಸೀಂ ಅಕ್ರಂ

Last Updated 21 ಜುಲೈ 2022, 14:30 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ ಮಾದರಿಗೆ ನಿವೃತ್ತಿ ಘೋಷಿಸಿರುವ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟಿಗ ವಾಸೀಂ ಅಕ್ರಂ ಬೆಂಬಲಿಸಿದ್ದಾರೆ.

‘ಇವತ್ತಿನ ಕಾಲಘಟ್ಟದಲ್ಲಿ ಏಕದಿನ ಕ್ರಿಕೆಟ್ ಮಾದರಿಯು ಆಕರ್ಷಣೆ ಕಳೆದುಕೊಳ್ಳುತ್ತಿದೆ. ಆಟಗಾರರಿಗೆ ಮೂರು ಮಾದರಿಗಳಲ್ಲಿ ಆಡುವುದು ಅಪಾರ ಒತ್ತಡ ಉಂಟು ಮಾಡುತ್ತಿದೆ. ಟಿ20 ಮಾದರಿಯು ಜನಪ್ರಿಯವಾಗಿರುವ ಹೊತ್ತಿನಲ್ಲಿ 50–50 ಪಂದ್ಯಗಳ ಆಟವು ಸುಮ್ಮನೇ ಎಳೆದಿಟ್ಟಂತೆ ಭಾವ ಮೂಡಿಸುತ್ತದೆ. ಒಬ್ಬ ವೀಕ್ಷಕ ವಿವರಣೆಗಾರನಾಗಿ ನನ್ನ ಅನುಭವ ಇದು. ಪಂದ್ಯದ ಮೊದಲ ಹತ್ತು ಓವರ್‌ಗಳಲ್ಲಿ ಬ್ಯಾಟರ್‌ಗಳು ಬೀಸಾಟವಾಡುವುದರಿಂದ ಆಸಕ್ತಿ ಹೆಚ್ಚುತ್ತದೆ. ನಂತರದ 40ನೇ ಓವರ್‌ನವರೆಗೂ ವಿಕೆಟ್‌ ಉಳಿಸಿಕೊಂಡು ಆಡಲು ಒತ್ತು ನೀಡುವಾಗ ತಂಡದ ಮೊತ್ತ 200, 220ರವರೆಗೂ ಬೆಳೆಯಬಹುದು. ಕೊನೆಯ ಹತ್ತು ಓವರ್‌ನಲ್ಲಿ ಮತ್ತೆ ನೂರು ರನ್‌ ಗಳಿಸುವ ಅವಕಾಶ ಲಭಿಸುತ್ತದೆ. ಒಟ್ಟಿನಲ್ಲಿ ಇಡೀ 50 ಓವರ್‌ ಇನಿಂಗ್ಸ್‌ನಲ್ಲಿ 20 ಓವರ್‌ಗಳ ಆಟವಷ್ಟೇ ಗಮನ ಸೆಳೆಯುತ್ತದೆ’ ಎಂದು ವಾನಿ ಮತ್ತು ಟರ್ಫರ್‌ ಕ್ರಿಕೆಟ್ ಕ್ಲಬ್‌ ಪಾಡ್‌ಕಾಸ್ಟ್‌ ನಲ್ಲಿ ಹೇಳಿದ್ದಾರೆ.

‘ಟಿ20 ಮಾದರಿ ವೇಗವಾಗಿ ಬೆಳೆಯುತ್ತಿರುವ ಮತ್ತು ಜನಪ್ರಿಯವಾಗುತ್ತಿರುವ ಇಂದಿನ ಕಾಲದಲ್ಲಿ ಏಕದಿನ ಕ್ರಿಕೆಟ್‌ಗೆ ಭವಿಷ್ಯವಿಲ್ಲ. ನಾಲ್ಕು ತಾಸುಗಳಲ್ಲಿ ಟಿ20 ಪಂದ್ಯ ಮುಗಿಯುತ್ತದೆ. ಅಪಾರ ಆದಾಯವನ್ನೂ ತರುತ್ತದೆ. ಅದರಿಂದಾಗಿ ಆಟಗಾರರು ಚುಟುಕು ಮಾದರಿಯತ್ತಲೇ ಹೆಚ್ಚು ಗಮನ ನೀಡುತ್ತಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಟೆಸ್ಟ್ ಮತ್ತು ಟಿ20 ಮಾತ್ರ ಜನಾಕರ್ಷಣೆಯಾಗಿ ಉಳಿಯುವ ಸಾಧ್ಯತೆಗಳಿವೆ’ ಎಂದು ವಿಶ್ಲೇಷಿಸಿದರು.

‘ಟೆಸ್ಟ್ ಮಾದರಿಯು ಕ್ರಿಕೆಟ್‌ನ ಮೂಲಬೇರು. ನಾನಂತೂ ಯಾವಾಗಲೂ ಟೆಸ್ಟ್ ಕ್ರಿಕೆಟ್‌ ಬಗ್ಗೆ ಹೆಚ್ಚು ಒಲವು ಹೊಂದಿದ್ದೆ. ಏಕದಿನ ಮಾದರಿಯು ಕೇವಲ ಮನರಂಜನೆಗೆ ಸೀಮಿತ. ಟೆಸ್ಟ್‌ನಲ್ಲಿ ಒಬ್ಬ ಆಟಗಾರನ ಸಾಮರ್ಥ್ಯ ಸಾಬೀತಾಗುತ್ತದೆ. ಅವರಿಗೆ ಮಾನ್ಯತೆ ಸಿಗುತ್ತದೆ’ ಎಂದರು.

1992ರಲ್ಲಿ ಪಾಕಿಸ್ತಾನ ತಂಡವು ಐಸಿಸಿ ಏಕದಿನ ವಿಶ್ವಕಪ್ಜಯಿಸಲು ಅಕ್ರಂ ಆಟ ಪ್ರಮುಖವಾಗಿತ್ತು. ಎಡಗೈ ಆಲ್‌ರೌಂಡರ್ 356 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 502 ವಿಕೆಟ್ ಗಳಿಸಿರುವ ಅವರು, 3717 ರನ್ ಪೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT