ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ ವರ್ಲ್ಡ್ ಒನ್‌ ಫ್ಯಾಮಿಲಿ ಕಪ್‌: ಸಚಿನ್ ಸೇರಿ ದಿಗ್ಗಜ ಕ್ರಿಕೆಟಿಗರ ಭರಾಟೆ

Published 18 ಜನವರಿ 2024, 17:21 IST
Last Updated 18 ಜನವರಿ 2024, 17:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕ್ರಿಕೆಟ್ ದಂತಕಥೆ ಸಚಿನ್‌ ತೆಂಡೂಲ್ಕರ್‌, ಯುವರಾಜ್‌ ಸಿಂಗ್‌ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಸೇರಿದಂತೆ ಕ್ರಿಕೆಟಿಗರು  ಇಲ್ಲಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪ್ರೇಕ್ಷಕರಿಗೆ ಕ್ರಿಕೆಟ್‌ನ ರಸದೌತಣ ಉಣಬಡಿಸಿದರು. ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು.

‘ಒನ್‌ ವರ್ಲ್ಡ್ ಒನ್‌ ಫ್ಯಾಮಿಲಿ ಕಪ್‌’ ವಿಶೇಷ ಪ್ರದರ್ಶನ ಟಿ20 ಪಂದ್ಯದಲ್ಲಿ ಸಚಿನ್‌ ಸಾರಥ್ಯದ ‘ಒನ್‌ ವಲ್ಡ್‌’, 4 ವಿಕೆಟ್‌ಗಳಿಂದ ಯುವರಾಜ್‌ ನಾಯಕತ್ವದ ‘ಒನ್‌ ಫ್ಯಾಮಿಲಿ’ ವಿರುದ್ಧ ಗೆದ್ದಿತು.

ಮೊದಲು ಬ್ಯಾಟಿಂಗ್‌ ಮಾಡಿದ ಒನ್‌ ಫ್ಯಾಮಿಲಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್‌ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಸಚಿನ್‌ ಬಳಗವು ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್‌ಗಳಿಗೆ 184 ರನ್‌ ಗಳಿಸಿ ಜಯಿಸಿತು.

‘ಸಾಯಿಕೃಷ್ಣ’ ಕ್ರೀಡಾಂಗಣದ ಲೋಕಾರ್ಪಣೆಯ ಪ್ರಯುಕ್ತ ಅದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿವಿಧ ದೇಶಗಳ 22 ಮಾಜಿ ಕ್ರಿಕೆಟಿಗರು ಕಣದಲ್ಲಿದ್ದರು. 40ರಿಂದ 60 ವಯಸ್ಸಿನ ಆಟಗಾರರು ಯುವಕರನ್ನು ನಾಚಿಸುವಂತೆ ಆಡಿದರು.

ಸಚಿನ್, ತಮ್ಮ ಹಿಂದಿನ ಶೈಲಿಯಲ್ಲೇ ಬ್ಯಾಟ್‌ ಬೀಸಿದರು. ಒಂದು ಭರ್ಜರಿ ಸಿಕ್ಸರ್‌ ಮತ್ತು ಮೂರು ಬೌಂಡರಿ ಮೂಲಕ ಪ್ರೇಕ್ಷಕರನ್ನು ಪುಳಕಿತಗೊಳಿಸಿದರು. 16 ಎಸೆತಗಳಲ್ಲಿ 27 ರನ್‌ ಗಳಿಸಿದ್ದ ಅವರು, ಮುತ್ತಯ್ಯ ಮುರಳೀಧರನ್‌ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಸಿಕ್ಸರ್‌ಗೆತ್ತುವ ಭರದಲ್ಲಿ ಫೀಲ್ಡರ್ ಮೊಹಮ್ಮದ್‌ ಕೈಫ್‌ ಅವರಿಗೆ ಕ್ಯಾಚಿತ್ತರು.

ಪೀಟರ್ಸನ್‌ 50 ಎಸೆತಗಳಲ್ಲಿ ಮೂರು ಸಿಕ್ಸರ್‌ ಮತ್ತು ಐದು ಬೌಂಡರಿ ಸೇರಿದಂತೆ 74 ರನ್‌ ಗಳಿಸಿದರು. ಕೊನೆಯ ಎರಡು ಎಸೆತದಲ್ಲಿ ಮೂರು ರನ್‌ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಇರ್ಫಾನ್‌ ಪಠಾಣ್‌ ಹಾಗೂ ಅವರ ಅಣ್ಣ ಯೂಸುಫ್‌ ಪಠಾಣ್‌ ಅವರ 5ನೇ ಎಸೆತದಲ್ಲಿ ಸಿಕ್ಸರ್‌ ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌: ಒನ್‌ ಫ್ಯಾಮಿಲಿ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 (ಡ್ಯಾರೆನ್ ಮ್ಯಾಡಿ 51, ಯೂಸುಫ್‌ ಪಠಾಣ್‌ 38; ಹರ್ಭಜನ್‌ ಸಿಂಗ್‌ 30ಕ್ಕೆ 3). ಒನ್ ವಲ್ಡ್‌: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 184 (ಅಲ್ವಿರೋ ಪೀಟರ್ಸನ್‌ 74, ಉಪುಲ್​ ತರಂಗ 29, ಸಚಿನ್‌ ತೆಂಡೂಲ್ಕರ್‌ 27, ನಮನ್ ಓಜಾ 25, ಚಮಿಂದಾ ವಾಸ್ 46ಕ್ಕೆ 3). ಫಲಿತಾಂಶ: ಒನ್‌ ವಲ್ಡ್‌ ತಂಡಕ್ಕೆ 4 ವಿಕೆಟ್‌ ಜಯ. ಪಂದ್ಯಶ್ರೇಷ್ಠ’ ಅಲ್ವಿರೋ ಪೀಟರ್ಸನ್‌.

‘ಒನ್‌ ವಲ್ಡ್‌ ಒನ್‌ ಫ್ಯಾಮಿಲಿ ಕಪ್‌’ ಜತೆ ಸಚಿನ್‌ ತೆಂಡೂಲ್ಕರ್‌ ಸುನಿಲ್‌ ಗವಾಸ್ಕರ್‌ ಮಧುಸೂದನ ಸಾಯಿ ಮತ್ತು ಯುವರಾಜ್‌ ಸಿಂಗ್‌
‘ಒನ್‌ ವಲ್ಡ್‌ ಒನ್‌ ಫ್ಯಾಮಿಲಿ ಕಪ್‌’ ಜತೆ ಸಚಿನ್‌ ತೆಂಡೂಲ್ಕರ್‌ ಸುನಿಲ್‌ ಗವಾಸ್ಕರ್‌ ಮಧುಸೂದನ ಸಾಯಿ ಮತ್ತು ಯುವರಾಜ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT