ಗುರುವಾರ , ಅಕ್ಟೋಬರ್ 21, 2021
29 °C

PAK vs ENG: ಕ್ರಿಕೆಟ್‌ ಸರಣಿ ಮೊಟಕು, ಆಕ್ರೋಶ ಹೊರಹಾಕಿದ ಪಾಕ್‌ ಹಿರಿಯ ಆಟಗಾರರು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಾಹೋರ್: ಭದ್ರತಾ ಕಾರಣಗಳಿಂದಾಗಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ತಂಡಗಳು ಪಾಕ್‌ ಪ್ರವಾಸ ರದ್ದುಗೊಳಿಸಿರುವುದಕ್ಕೆ ಪಾಕಿಸ್ತಾನದ ಹಿರಿಯ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಾಕ್‌ ಮತ್ತು ಕಿವೀಸ್‌ ನಡುವೆ ಶುಕ್ರವಾರ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ, ಈ ಪ್ರವಾಸವನ್ನು ಮೊಟಕುಗೊಳಿಸಿದ್ದ ನ್ಯೂಜಿಲೆಂಡ್‌ ತಂಡವು ಹಠಾತ್ ನಿರ್ಧಾರ ತೆಗೆದುಕೊಂಡಿತ್ತು.

ಇದರ ನಡುವೆ ಇಂಗ್ಲೆಂಡ್‌ ಪುರುಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕ್ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರು ನಿರ್ಧಾರ ಕೈಗೊಂಡಿರುವುದು ಪಾಕಿಸ್ತಾನದ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷ ರಮೀಜ್‌ ರಾಜಾ, ‘ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತೆಗೆದುಕೊಂಡ ನಿರ್ಧಾರ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಅವರು (ಇಂಗ್ಲೆಂಡ್‌) ಬದ್ಧತೆಯಿಂದ ಹೊರಬಂದಿದ್ದಾರೆ. ಆದರೆ, ಪಾಕ್ ತಂಡವು ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಸಾಬೀತುಪಡಿಸುವ ಎಚ್ಚರಿಕೆಯ ಸಂದೇಶವಾಗಿದೆ. ಸದ್ಯ ಪಂದ್ಯಗಳನ್ನು ಮೊಟಕುಗೊಳಿಸಿರುವ ತಂಡಗಳನ್ನು ಪಾಕ್‌ ಕ್ಷಮಿಸದೆ ಅವರೊಂದಿಗೆ ಆಟವಾಡಲು ಅಣಿಯಾಗಿದೆ’ ಎಂದಿದ್ದಾರೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯಗಳನ್ನು ರದ್ದುಪಡಿಸಿರುವುದರಿಂದ ಪಾಕಿಸ್ತಾನ ತಂಡವನ್ನು ಇನ್ನಷ್ಟು ಬಲಿಷ್ಠವಾಗಿಸುತ್ತದೆ ಎಂದು ಪಾಕ್‌ ಕ್ರಿಕೆಟ್‌ ತಂಡದ ಆಟಗಾರ್ತಿ ಜವೇರಿಯಾ ಖಾನ್‌ ಟ್ವೀಟ್ ಮಾಡಿದ್ದಾರೆ.

ಮಾಜಿ ವೇಗಿ ಶೋಯಬ್‌ ಅಖ್ತರ್‌, ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಂ ಹಾಗೂ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ನ್ಯೂಜಿಲೆಂಡ್‌, ಇಂಗ್ಲೆಂಡ್‌ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

ಅಕ್ಟೋಬರ್ 13 ಮತ್ತು 14 ರಂದು ಪುರುಷರ ತಂಡವು ಎರಡು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಬೇಕಿತ್ತು. ಮಹಿಳೆಯರು ಅಕ್ಟೋಬರ್ 17, 19 ಮತ್ತು 21 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದರು. ಎಲ್ಲಾ ಪಂದ್ಯಗಳು ರಾವಲ್ಪಿಂಡಿಯಲ್ಲಿ ನಿಗದಿಯಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು