ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್‌ ಪ್ರವಾಹದಲ್ಲಿ ಈಜಿ ಗೆದ್ದ ಪಾಕಿಸ್ತಾನ

ಜೋ ರೂಟ್, ಜೋಸ್ ಬಟ್ಲರ್ ಶತಕಗಳು ವ್ಯರ್ಥ: ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ನಿರಾಸೆ; ಹಫೀಜ್ ಮಿಂಚು
Last Updated 4 ಜೂನ್ 2019, 4:12 IST
ಅಕ್ಷರ ಗಾತ್ರ

ನಾಟಿಂಗಂ (ಎಎಫ್‌ಪಿ): ಸೋಮವಾರ ರಾತ್ರಿ ಆತಿಥೇಯ ಇಂಗ್ಲೆಂಡ್‌ನ ಜೋ ರೂಟ್ ಮತ್ತು ಜೋಸ್ ಬಟ್ಲರ್ ಅವರು ಗಳಿಸಿದ ಶತಕಗಳ ವೈಭವಕ್ಕೆ ಮರುಳಾಗದವರು ಯಾರೂ ಇರಲಿಲ್ಲ. ಆದರೆ, ರೋಚಕ ಹೋರಾಟದಲ್ಲಿ ತನ್ನ ಛಲದ ಆಟದಿಂದಾಗಿ ಪಾಕಿಸ್ತಾನ ಗೆದ್ದಿತು.

ಹಫೀಜ್ ಆಲ್‌ರೌಂಡ್ ಆಟದಿಂದಾಗಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಎದುರು 14 ರನ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಇಯಾನ್ ಮಾರ್ಗನ್ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದ್ದ ಪಿಚ್‌ನಲ್ಲಿ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸಿದರು. ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 348 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಬಾಬರ್ ಅಜಂ (63; 66ಎಸೆತ, 4ಬೌಂಡರಿ, 1ಸಿಕ್ಸರ್), ಮೊಹಮ್ಮದ್ ಹಫೀಜ್ (84; 62ಎಸೆತ, 8ಬೌಂಡರಿ, 2ಸಿಕ್ಸರ್) ಮತ್ತು ಸರ್ಫರಾಜ್ ಅಹಮದ್ (55; 44ಎಸೆತ, 5ಬೌಂಡರಿ) ಅವರು ಅರ್ಧಶತಕ ಗಳಿಸಿದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 334 ರನ್‌ ಗಳಿಸಿತು. ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಜೇಸನ್ ರಾಯ್ ಬೇಗನೆ ಔಟಾದರು. ಜಾನಿ ಬೆಸ್ಟೊ, ನಾಯಕ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್‌ ಅವರು ದೊಡ್ಡ ಮೊತ್ತ ಗಳಿಸಲಿಲ್ಲ. ಆದರೆ, ಮಧ್ಯಮ ಕ್ರಮಾಂಕದ ಪರಿಣತ ಜೋ ರೂಟ್ (107; 104ಎಸೆತ, 10ಬೌಂಡರಿ, 1ಸಿಕ್ಸರ್) ಮತ್ತು ಜೋಸ್ ಬಟ್ಲರ್ (103; 76ಎಸೆತ, 9ಬೌಂಡರಿ, 2ಸಿಕ್ಸರ್) ಐದನೇ ವಿಕೆಟ್ ಜೊತೆಯಾಟದಲ್ಲಿ 130 ರನ್‌ ಸೇರಿಸಿದ್ದು, ತಂಡವು ಗೆಲ್ಲುವ ಭರವಸೆ ಮೂಡಿಸಿದರು.

ಆದರೆ 39ನೇ ಓವರ್‌ನಲ್ಲಿ ಶಾದಾಬ್ ಖಾನ್ ಎಸೆತದಲ್ಲಿ ಹಫೀಜ್ ಪಡೆದ ಕ್ಯಾಚ್‌ಗೆ ಜೋ ರೂಟ್ ಪೆವಿಲಿಯನ್ ಹಾದಿ ಹಿಡಿದರು. ಪಾಕ್ ಪಾಳೆಯದಲ್ಲಿ ವಿಶ್ವಾಸ ಮರುಕಳಿಸಿತು. ಆದರೂ ಕ್ರೀಸ್‌ನಲ್ಲಿದ್ದ ಜೋಸ್ ಬಟ್ಲರ್ ಅವರು ಇಂಗ್ಲೆಂಡ್ ತಂಡದ ಆಸೆಯನ್ನು ಜೀವಂತವಾಗಿರಿಸಿದರು. ಮೊಯಿನ್ ಅಲಿ ಜೊತೆಗೂಡಿ ಶತಕವನ್ನೂ ಗಳಿಸಿದರು. 45ನೇ ಓವರ್‌ನಲ್ಲಿ ಮೊಹಮ್ಮದ್ ಅಮೀರ್ ಎಸೆತವನ್ನು ಬೌಂಡರಿಯತ್ತ ಹೊಡೆಯುವ ಯತ್ನದಲ್ಲಿ ವಹಾಬ್‌ ರಿಯಾಜ್‌ಗೆ ಸುಲಭ ಕ್ಯಾಚಿತ್ತರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ವಹಾಬ್ ರಿಯಾಜ್ ಪಾಕ್ ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿದರು.

ಪಾಕ್ ಉತ್ತಮ ಆರಂಭ:ಪಾಕ್ ತಂಡವು ಈ ಮೈದಾನದಲ್ಲಿ ಮುನ್ನೂರಕ್ಕೂ ಹೆಚ್ಚಿನ ಮೊತ್ತ ಗಳಿಸಿದ್ದು ಇದು ಮೂರನೇ ಸಲ. ಹೋದ ತಿಂಗಳು ಪಾಕ್ ತಂಡವು ಇಂಗ್ಲೆಂಡ್ ಎದುರು 340 ಮತ್ತು 1975ರಲ್ಲಿ ಶ್ರೀಲಂಕಾ ಎದುರು 330 ರನ್‌ ಹೊಡೆದಿತ್ತು. ಈ ಸಲವೂ ಅವಕಾಶ ಬಿಟ್ಟುಕೊಡಲಿಲ್ಲ. ತನ್ನ ಮೊದಲ ಪಂದ್ಯದಲ್ಲಿ ಪಾಕ್ ತಂಡವು ವೆಸ್ಟ್ ಇಂಡೀಸ್ ಎದುರು ಮಾಡಿದ್ದ ತಪ್ಪುಗಳೆಲ್ಲವನ್ನೂ ಇಲ್ಲಿ ಸರಿಪಡಿಸಿಕೊಂಡ ಸರ್ಫರಾಜ್ ಅಹಮದ್ ಬಳಗಕ್ಕೆ ಉತ್ತಮ ಫಲ ಸಿಕ್ಕಿತು.

ಇಮಾಮ್ ಉಲ್ ಹಕ್ ಮತ್ತು ಫಕ್ರ್‌ ಜಮಾನ್ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇ ಅವಧಿಯಲ್ಲಿ ಮೊದಲ ವಿಕೆಟ್‌ಗೆ 82 ರನ್‌ಗಳನ್ನು ಸೇರಿಸಿದರು. ಜಮಾನ್ ಔಟಾದ ನಂತರ ಕ್ರೀಸ್‌ಗೆ ಬಂದ ಬಾಬರ್ ಅಜಂ ಜೊತೆಗೆ ಇಮಾಮ್ ಉತ್ತಮ ಆಟ ಮುಂದುವರಿಸಿದರು. ಆದರೆ ತಮ್ಮ ಅರ್ಧಶತಕಕ್ಕೆ ಆರು ರನ್‌ಗಳ ಅಗತ್ಯವಿದ್ದಾಗ ಇಮಾಮ್ ಅವರು ಮೊಯಿನ್ ಅಲಿ ಎಸೆತ ದಲ್ಲಿ ಔಟಾದರು. ಬಾಬರ್ ಜೊತೆಗೂಡಿದ ಮೊಹಮ್ಮದ್ ಹಫೀಜ್ ವೇಗದ ಆಟಕ್ಕೆ ಒತ್ತು ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 88 ರನ್‌ಗಳನ್ನು ಪೇರಿಸಿದರು.

ಇದರಿಂದಾಗಿ ತಂಡವು 33ನೇ ಓವರ್‌ನಲ್ಲಿ ಇನ್ನೂರರ ಗಡಿ ತಲುಪಿತು. ಬಾಬರ್ (63; 66ಎಸೆತ, 4ಬೌಂಡರಿ, 1ಸಿಕ್ಸರ್) ಔಟಾದ ನಂತರ ಹಫೀಜ್ ಜೊತೆಗೂಡಿದ ನಾಯಕ ಸರ್ಫರಾಜ್ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು.

ಹಫೀಜ್ (84; 62ಎಸೆತ, 8ಬೌಂಡರಿ, 2ಸಿಕ್ಸರ್) ಔಟಾದ ನಂತರವೂ ಸರ್ಫರಾಜ್ ಅವರು ಆಸಿಫ್ ಅಲಿ ಜೊತೆಗೂಡಿ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ಒಂದು ತಿಂಗಳು ಹಿಂದೆಯೇ ಇಂಗ್ಲೆಂಡ್‌ಗೆ ಹೋಗಿದ್ದ ಪಾಕ್ ಸರಣಿ ಆಡಿತ್ತು. ಆದರೆ, ಏಪ್ರಿಲ್‌ 24ರಿಂದ ಇಲ್ಲಿಯವರೆಗೆ ಇಲ್ಲಿ ಆಡಿದ ಒಟ್ಟು ಆರು ಪಂದ್ಯಗಳಲ್ಲಿ ಗೆದ್ದಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT