ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ನಿವೃತ್ತಿ

Last Updated 3 ಜನವರಿ 2022, 12:18 IST
ಅಕ್ಷರ ಗಾತ್ರ

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸೋಮವಾರ ನಿವೃತ್ತಿಯಾಗಿದ್ದಾರೆ. ಈ ಮೂಲಕ 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. 41 ವರ್ಷದ ಹಫೀಜ್‌, ಬೌಲಿಂಗ್ ಶೈಲಿಗೆ ಸಂಬಂಧಿಸಿದ ವಿವಾದದಿಂದ ಅವರ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕಳೆದ ವರ್ಷದ ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆದ ಟ್ವೆಂಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಯದಾಗಿ ಹಫೀಜ್ ಆಡಿದ್ದರು. ಟೂರ್ನಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾಗೆ ಮಣಿದಿತ್ತು.

ಟೆಸ್ಟ್ ಕ್ರಿಕೆಟ್‌ಗೆ ಹಫೀಜ್ 2018ರಲ್ಲಿ ವಿದಾಯ ಹೇಳಿದ್ದರು. 2019ರ ವಿಶ್ವಕಪ್‌ ಟೂರ್ನಿಯ ನಂತರ ಏಕದಿನ ತಂಡದಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. 55 ಟೆಸ್ಟ್, 218 ಏಕದಿನ ಮತ್ತು 119 ಟ್ವೆಂಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 3,652 ರನ್ ಗಳಿಸಿರುವ ಅವರು 53 ವಿಕೆಟ್ ಉರುಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 6,614 ರನ್‌ ಕಲೆ ಹಾಕಿದ್ದು 139 ವಿಕೆಟ್ ಉರುಳಿಸಿದ್ದಾರೆ. ಟ್ವೆಂಟಿ20 ಕ್ರಿಕೆಟ್‌ನಲ್ಲಿ 2514 ರನ್‌ಗಳೊಂದಿಗೆ ಪಾಕಿಸ್ತಾನ ಪರವಾಗಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 61 ವಿಕೆಟ್‌ಗಳು ಈ ಮಾದರಿಯಲ್ಲಿ ಅವರ ಖಾತೆಯಲ್ಲಿವೆ.

ಆಫ್‌ ಬ್ರೇಕ್ ಬೌಲರ್‌ ಆಗಿರುವ ಅವರು ನಾಲ್ಕು ಬಾರಿ ವಿವಾದಲ್ಲಿ ಸಿಲುಕಿದ್ದರು. 2015ರ ಜುಲೈನಲ್ಲಿ ಅವರ ಮೇಲೆ ನಿಷೇಧ ಹೇರಲಾಗಿತ್ತು.

ಅಮೀರ್‌ ವಿರುದ್ಧ ಹೋರಾಟ
ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿ ಐದು ವರ್ಷಗಳ ನಿಷೇಧದ ನಂತರ ತಂಡದಲ್ಲಿ ಆಡಲು ಮೊಹಮ್ಮದ್ ಅಮೀರ್ ಅವರಿಗೆ ಅವಕಾಶ ನೀಡಿದ್ದಕ್ಕೆ ಹಫೀಜ್ ಸಿಡಿದೆದ್ದಿದ್ದರು. 29 ಟ್ವೆಂಟಿ20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದ ಹಫೀಜ್ 17ರಲ್ಲಿ ಜಯ ಗಳಿಸಿದ್ದಾರೆ. ಒಂದು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳಲ್ಲೂ ಅವರು ನಾಯಕತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT