ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಕ್ಕೆ ಪಂಚ್‌ ಮಾಡಿ ಬಿಡ್ತೇನೆ ಎಂದು ಪಾರ್ಥೀವ್‌ರನ್ನು ಬೆದರಿಸಿದ್ದ ಹೇಡನ್

Last Updated 7 ಮೇ 2020, 18:51 IST
ಅಕ್ಷರ ಗಾತ್ರ

ನವದೆಹಲಿ: ‘2004ರಲ್ಲಿ ನಾವು ಏಕದಿನ ಕ್ರಿಕೆಟ್‌ ಸರಣಿ ಆಡಲು ಅಸ್ಟ್ರೇಲಿಯಾಕ್ಕೆ ಹೋಗಿದ್ದೆವು. ಆಗ ಆ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌ ನನ್ನ ಮುಖಕ್ಕೆ ಪಂಚ್‌ ಮಾಡುವುದಾಗಿ ಹೆದರಿಸಿದ್ದರು’ ಎಂದು ಭಾರತದ ಕ್ರಿಕೆಟಿಗ ಪಾರ್ಥೀವ್‌ ಪಟೇಲ್‌ ಹೇಳಿದ್ದಾರೆ.

‘ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಪಂದ್ಯವದು. ಆ ಹೋರಾಟದಲ್ಲಿ ಹೇಡನ್‌ ಶತಕ ಬಾರಿಸಿದ್ದರು. ನಿರ್ಣಾಯಕ ಘಟ್ಟದಲ್ಲಿ ಅವರು ಇರ್ಫಾನ್‌ ಪಠಾಣ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಅದೇ ಸಮಯದಲ್ಲಿ ಪಾನೀಯ ನೀಡಲು ಮೈದಾನದೊಳಗೆ ಪ್ರವೇಶಿಸಿದ ನಾನು ಹೇಡನ್‌ ಅವರತ್ತ ನೋಡಿ ‘ಹೊ..ಹೋ..’ ಎಂದು ಕೆಣಕಿದ್ದೆ’ ಎಂದು ತಿಳಿಸಿದ್ದಾರೆ.

‘ನನ್ನ ಆ ವರ್ತನೆಯಿಂದ ಕುಪಿತಗೊಂಡಿದ್ದ ಹೇಡನ್‌, ಬ್ರಿಸ್ಬೇನ್‌ ಮೈದಾನದಲ್ಲಿರುವ ಡ್ರೆಸಿಂಗ್‌ ಕೋಣೆಯ ಹತ್ತಿರವೇ ನಿಂತಿದ್ದರು. ನಾನು ಅಂಗಳದಿಂದ ವಾಪಸ್‌ ಬಂದೊಡನೆಯೇ ದುರುಗುಟ್ಟಿ ನೋಡಿದ ಅವರು ಇನ್ನೊಮ್ಮೆ ಈ ರೀತಿ ಮಾಡಿದರೆ ಬಲವಾಗಿ ನಿನ್ನ ಮುಖಕ್ಕೆ ಗುದ್ದಿ ಬಿಡುತ್ತೇನೆ ಎಂದಿದ್ದರು. ನಾನು ಕ್ಷಮೆ ಯಾಚಿಸಿದ ನಂತರ ಹೊರಟು ಹೋಗಿದ್ದರು’ ಎಂದು ಆ ಘಟನೆಯನ್ನು ಮೆಲುಕು ಹಾಕಿದ್ದರು.

ನಾಲ್ಕು ವರ್ಷಗಳ ಬಳಿಕ ಪಾರ್ಥೀವ್‌ ಹಾಗೂ ಹೇಡನ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ)‌ ತಂಡದ ಪರ ಆಡುವ ಸಂದರ್ಭ ಎದುರಾಗಿತ್ತು.

‘ಐಪಿಎಲ್‌ ಶುರುವಾದ ಬಳಿಕ ನಮ್ಮ ನಡುವೆ ಉತ್ತಮ ಸ್ನೇಹ ಬೆಳೆಯಿತು. ಇಬ್ಬರೂ ಸಿಎಸ್‌ಕೆ ಪರ ಅನೇಕ ಪಂದ್ಯಗಳಲ್ಲಿ ಆಡಿದೆವು. ಅವರ ಜೊತೆ ಇನಿಂಗ್ಸ್‌ ಆರಂಭಿಸುವ ಅವಕಾಶ ಸಿಕ್ಕಿತು’ ಎಂದೂ ತಿಳಿಸಿದ್ದಾರೆ.

‘ಐಪಿಎಲ್‌ ಮುಗಿದ ಬಳಿಕ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ಕೊಟ್ಟಿದ್ದೆ. ಆಗ ಹೇಡನ್‌, ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರು. ನನಗಾಗಿ ಚಿಕನ್‌ ಬಿರಿಯಾನಿ ಹಾಗೂ ದಾಲ್‌ ಸಿದ್ಧಪಡಿಸಿದ್ದರು’ ಎಂದೂ ಪಾರ್ಥೀವ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT