ಗುರುವಾರ , ಮೇ 13, 2021
40 °C

ಮೊದಲ ಟಿ20: ಪಾಕಿಸ್ತಾನಕ್ಕೆ ಮಣಿದ ಜಿಂಬಾಬ್ವೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಹರಾರೆ, ಜಿಂಬಾಬ್ವೆ: ಕ್ರೆಗ್ ಎರ್ವಿನ್ ಮತ್ತು ಲೂಕ್ ಜೊಂಗ್ವೆ ಅವರ ದಿಟ್ಟ ಆಟ ಸೃಷ್ಟಿಸಿದ ಆತಂಕವನ್ನು ಮೆಟ್ಟಿ ನಿಂತ ‍ಪಾಕಿಸ್ತಾನ ಆತಿಥೇಯ ಜಿಂಬಾಬ್ವೆ ವಿರುದ್ಧ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 11 ರನ್‌ಗಳ ಜಯ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ರಿಜ್ವಾನ್ (82; 61 ಎಸೆತ, 10 ಬೌಂಡರಿ, 1 ಸಿಕ್ಸರ್‌) ಅವರ ಮೋಹಕ್ ಅರ್ಧಶತಕ ಮತ್ತು ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ಅವರ ಪ್ರಭಾವಿ ಬೌಲಿಂಗ್ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಟಾಸ್ ಗೆದ್ದ ಜಿಂಬಾಬ್ವೆ ಪ್ರವಾಸಿಗರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಎಂಟು ರನ್‌ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ನಂತರ ಚೇತರಿಸಿಕೊಳ್ಳಲಿಲ್ಲ. ಫಖರ್ ಜಮಾನ್ ಮತ್ತು ಡ್ಯಾನಿಶ್ ಅಜೀಜ್ ಅವರನ್ನು ಹೊರತುಪಡಿಸಿದರೆ ಮಧ್ಯಮ ಕ್ರಮಾಂಕ ಮತ್ತು ಕೆಳಕ್ರಮಾಂಕದ ಆಟಗಾರರೆಲ್ಲರೂ ಬೇಗನೇ ಔಟಾದರು. ರಿಜ್ವಾನ್ ಏಕಾಂಗಿಯಾಗಿ ಇನಿಂಗ್ಸ್ ಮುನ್ನಡೆಸಿದರು.  

ಗುರಿ ಬೆನ್ನತ್ತಿದ ಜಿಂಬಾಬ್ವೆ 10ನೇ ಓವರ್‌ನಲ್ಲಿ 77ಕ್ಕೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಖಾದಿರ್ ಮತ್ತು ಮಧ್ಯಮ ವೇಗಿ ಮೊಹಮ್ಮದ್ ಹೊಸೇನ್ ದಾಳಿಗೆ ನಲುಗಿದ ತಂಡ 138 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕೊನೆಯ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 20 ರನ್‌ ಬೇಕಾಗಿತ್ತು. ಹ್ಯಾರಿಸ್ ರವೂಫ್ ಪ್ರಭಾವಿ ದಾಳಿ ನಡೆಸಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 7ಕ್ಕೆ 149 (ಮೊಹಮ್ಮದ್ ರಿಜ್ವಾನ್ 82, ಫಖರ್ ಜಮಾನ್ 13, ಡ್ಯಾನಿಶ್ ಅಜೀಜ್ 15; ಮುಜರಬಾನಿ 22ಕ್ಕೆ1, ಗರಾವ 48ಕ್ಕೆ1, ಜೊಂಗ್ವೆ 24ಕ್ಕೆ2, ಮಧೆವೆರೆ 11ಕ್ಕೆ2); ಜಿಂಬಾಬ್ವೆ: 20 ಓವರ್‌ಗಳಲ್ಲಿ 7ಕ್ಕೆ 138 (ಕಮುಂಕನ್ವೆ 29, ಮಧೆವೆರೆ 14, ಎರ್ವಿನ್ 34, ಬರ್ಲ್‌ 14, ಜೊಂಗ್ವೆ 30; ಹಸನೈನ್ 27ಕ್ಕೆ2, ರವೂಫ್‌ 29ಕ್ಕೆ1, ಖಾದಿರ್ 29ಕ್ಕೆ3, ಹಫೀಜ್ 21ಕ್ಕೆ1). ಫಲಿತಾಂಶ: ಪಾಕಿಸ್ತಾನಕ್ಕೆ 11 ರನ್‌ಗಳ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು