ಶನಿವಾರ, ಸೆಪ್ಟೆಂಬರ್ 24, 2022
24 °C
ಮಂಗಳೂರು ಮಣಿಸಿದ ಮೈಸೂರು ವಾರಿಯರ್ಸ್‌

ಮಹಾರಾಜ ಟ್ರೋಫಿ ಟಿ20 ಟೂರ್ನಿ: ಪವನ್‌, ಕರುಣ್‌ ಬಿರುಸಿನ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪವನ್‌ ದೇಶಪಾಂಡೆ ಮತ್ತು ಕರುಣ್‌ ನಾಯರ್‌ ಅವರ ಭರ್ಜರಿ ಆಟದ ನೆರವಿನಿಂದ ಮೈಸೂರು ವಾರಿಯರ್ಸ್‌ ತಂಡದವರು ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎರಡನೇ ಲೆಗ್‌ನಲ್ಲಿ ಗೆಲುವಿನ ಆರಂಭ ಪಡೆದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್‌ ತಂಡ ಆರು ವಿಕೆಟ್‌ಗಳಿಂದ ಮಂಗಳೂರು ಯುನೈಟೆಡ್‌ ತಂಡವನ್ನು ಮಣಿಸಿತು. ವಾರಿಯರ್ಸ್‌ ನೀಡಿದ್ದ 172 ರನ್‌ಗಳ ಗುರಿಯನ್ನು 18.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ತಲುಪಿತು.

35 ಎಸೆತಗಳಲ್ಲಿ ಅಜೇಯ 53 ರನ್‌ ಗಳಿಸಿದ ಪವನ್‌ ದೇಶಪಾಂಡೆ ಅವರು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ನಾಯಕ ಕರುಣ್‌ ನಾಯರ್‌ (47 ರನ್‌, 27 ಎ, 4X3, 6X3) ತಕ್ಕ ಸಾಥ್‌ ನೀಡಿದರು.

ವಾರಿಯರ್ಸ್‌ ತಂಡದ ಮೊತ್ತ 50 ಆಗಿದ್ದಾಗ ಆರಂಭಿಕ ಆಟಗಾರರಾದ ನಿಹಾಲ್‌ ಉಲ್ಲಾಳ್‌ (25, 22 ಎ) ಮತ್ತು ನಿತಿನ್‌ ಭಿಲ್ಲೆ (11) ಪೆವಿಲಿಯನ್‌ ಮರಳಿದ್ದರು.

ಈ ವೇಳೆ ಜತೆಯಾದ ಪವನ್‌ ಮತ್ತು ಕರುಣ್‌ ಮೂರನೇ ವಿಕೆಟ್‌ಗೆ 88 ರನ್‌ ಸೇರಿಸಿದರು. ಮಂಗಳೂರು ತಂಡದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಬೌಂಡರಿ, ಸಿಕ್ಸರ್‌ಗಳ ಮೂಲಕ ವೇಗವಾಗಿ ರನ್‌ ಕಲೆಹಾಕಿತು.

ಕರುಣ್‌ ಮತ್ತು ಶ್ರೇಯಸ್‌ ಗೋಪಾಲ್‌ (6) ಅಲ್ಪ ಅಂತರದಲ್ಲಿ ಔಟಾದರು. ಆದರೆ ಭರ್ಜರಿ ಆಟ ಮುಂದುವರಿಸಿದ ಪವನ್‌ ಅವರು ಎಸ್‌.ಶಿವರಾಜ್‌ (21, 11 ಎ.) ಜೊತಗೂಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಅಭಿನವ್‌, ನಿಕಿನ್‌ ಆಸರೆ: ಮೊದಲು ಬ್ಯಾಟ್‌ ಮಾಡಿದ ಮಂಗಳೂರು ತಂಡ ಮ್ಯಾಕ್‌ಲಿನ್‌ ಹ್ಯಾಡ್ಲಿ ನೊರೊನಾ (0) ಅವರನ್ನು ಬೇಗನೇ ಕಳೆದುಕೊಂಡಿತು. ಆರ್‌.ಸಮರ್ಥ್‌ (22) ಮತ್ತು ಅನೀಶ್ವರ್‌ ಗೌತಮ್ (5) ಅವರೂ ಹೆಚ್ಚುಹೊತ್ತು ನಿಲ್ಲಲಿಲ್ಲ. ಪ್ರತೀಕ್‌ ಜೈನ್‌ (31ಕ್ಕೆ 2), ಎದುರಾಳಿ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು.

ಆದರೆ ನಿಕಿನ್‌ ಜೋಸ್‌ (55 ರನ್‌, 47 ಎಸೆತ) ಮತ್ತು ಮಧ್ಯಮ ಕ್ರಮಾಂಕದಲ್ಲಿ ಅಭಿನವ್‌ ಮನೋಹರ್‌ (68 ರನ್, 35 ಎ., 4X5, 6X5) ಅವರು ಜವಾಬ್ದಾರಿಯುತ ಆಟವಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 90 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌
ಮಂಗಳೂರು ಯುನೈಟೆಡ್‌
20 ಓವರ್‌ಗಳಲ್ಲಿ 7ಕ್ಕೆ171 (ಆರ್‌.ಸಮರ್ಥ್‌ 22, ನಿಕಿನ್ ಜೋಸ್ 55, ಅಭಿನವ್‌ ಮನೋಹರ್‌ 68, ಪ್ರತೀಕ್‌ ಜೈನ್ 31ಕ್ಕೆ 2, ವಿದ್ಯಾಧರ್‌ ಪಾಟೀಲ್ 44ಕ್ಕೆ 1, ಆದಿತ್ಯ ಗೋಯಲ್ 41ಕ್ಕೆ 2)

ಮೈಸೂರು ವಾರಿಯರ್ಸ್‌ 18.1 ಓವರ್‌ಗಳಲ್ಲಿ 4ಕ್ಕೆ 172 (ನಿಹಾಲ್‌ ಉಲ್ಲಾಳ್ 25, ಪವನ್‌ ದೇಶಪಾಂಡೆ ಔಟಾಗದೆ 53, ಕರುಣ್‌ ನಾಯರ್‌ 47, ಎಸ್‌.ಶಿವರಾಜ್‌ ಔಟಾಗದೆ 21, ಎಚ್‌.ಎಸ್‌.ಶರತ್‌ 32ಕ್ಕೆ 2, ಎಂ.ವೆಂಕಟೇಶ್ 20ಕ್ಕೆ 2)

ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 6 ವಿಕೆಟ್‌ ಗೆಲುವು

ಇಂದಿನ ಪಂದ್ಯಗಳು: ಬೆಂಗಳೂರು ಬ್ಲಾಸ್ಟರ್ಸ್‌– ಗುಲ್ಬರ್ಗಾ ಮಿಸ್ಟಿಕ್ಸ್ (ಮಧ್ಯಾಹ್ನ 3)

ಹುಬ್ಬಳ್ಳಿ ಟೈಗರ್ಸ್‌– ಮೈಸೂರು ವಾರಿಯರ್ಸ್‌ (ಸಂಜೆ 7)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು