ಶನಿವಾರ, ಡಿಸೆಂಬರ್ 14, 2019
25 °C
ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಮ್ಯಾಚ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕರಣ: ರಹಸ್ಯ ವಿಡಿಯೊ ಚಿತ್ರೀಕರಣ ಮಾಡಿದ ಆರೋಪ

ಬುಕ್ಕಿಗಳ ಹನಿಟ್ರ್ಯಾಪ್‌ ಬಲೆಗೆ ಬಿದ್ದ ಕೆಪಿಎಲ್ ಕ್ರಿಕೆಟ್ ಆಟಗಾರರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಬಲೆಯಲ್ಲಿ ಆಟಗಾರರನ್ನು ಕೆಡವಲು ಮೋಹಜಾಲ (ಹನಿಟ್ರ್ಯಾಪ್‌), ವಿದೇಶ ಪ್ರವಾಸ ಮತ್ತು ಭಾರಿ ಹಣದ ಆಮಿಷದಂಥ ಅಸ್ತ್ರಗಳನ್ನು ಬುಕ್ಕಿಗಳು, ಮ್ಯಾಚ್‌ ಫಿಕ್ಸರ್‌ಗಳು ಬಳಸಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಸಂಗತಿ ಪೊಲೀಸ್‌ ತನಿಖೆಯಿಂದ ಬಯಲಿಗೆ ಬಂದಿದೆ.

ಆಟಗಾರರ ಬಳಿಗೆ ಹುಡುಗಿಯರನ್ನು ಕಳುಹಿಸಿ ರಹಸ್ಯವಾಗಿ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಬಳಿಕ ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡಲಾಗಿದೆ. ತಮ್ಮ ಸೂಚನೆಯಂತೆ ಆಡದಿದ್ದರೆ ವಿಡಿಯೊ ಬಹಿರಂಗ ಮಾಡು ವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್‌ ಕಮಿಷನರ್ ಪಿ. ಭಾಸ್ಕರ ರಾವ್‌ ತಿಳಿಸಿದರು.


ಭಾಸ್ಕರ್‌ರಾವ್

ಕ್ರೀಡಾಳುಗಳನ್ನು ಮೋಹಜಾಲದಲ್ಲಿ ಕೆಡವಲು ಚಿಯರ್‌ ಗರ್ಲ್ಸ್‌ಗಳನ್ನು ಬಳಸಲಾಗುತಿತ್ತು ಎನ್ನಲಾಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಲ್ಲದೆ, ದುಬೈ, ವೆಸ್ಟ್‌ ಇಂಡಿಸ್‌ನಂಥ ದೇಶಗಳಿಗೂ ಅವರನ್ನು ಪ್ರವಾಸಕ್ಕೆ ಕಳುಹಿಸಿ, ಪಂಚತಾರಾ ಹೊಟೇಲ್‌ಗಳಲ್ಲಿ ಉಳಿಸುತ್ತಿದ್ದರು. ಕೆಲವರಿಗೆ ಭಾರಿ ಹಣವನ್ನೂ ನೀಡಲಾಗುತಿತ್ತು ಎಂದೂ ಕಮಿಷನರ್‌ ಹೇಳಿದರು.

ಮ್ಯಾಚ್‌ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ ಬಗ್ಗೆ ಅರಿವಿಲ್ಲದ ಜನ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗುತ್ತಾರೆ. ಆದರೆ, ಆಟಕ್ಕೆ ಮೊದಲೇ ಎಲ್ಲವೂ ನಿರ್ಧಾರವಾಗಿರುತ್ತದೆ. ಯಾರು ಹೇಗೆ ಆಡಬೇಕು. ಯಾರು ಗೆಲ್ಲಬೇಕು.

ಯಾರು ಸೋಲಬೇಕು ಎಂಬುದೂ ನಿರ್ಧಾರವಾಗಿರುತ್ತದೆ. ಕ್ರೀಡಾಂಗಣಕ್ಕಿಂತಲೂ ಹೊರಗೆ ಆಟಗಾರರು ಹೆಚ್ಚು ‘ಕ್ರಿಕೆಟ್‌‘ ಆಟವಾಡುತ್ತಾರೆ. ಪ್ರತಿ ಮ್ಯಾಚ್‌ನಲ್ಲೂ ಆಟಗಾರರಿಗಿಂತ ಬುಕ್ಕಿಗಳೇ ಸಕ್ರಿಯರು ಎಂದೂ ಕಮಿಷನರ್‌ ವಿವರಿಸಿದರು.

ರಾಜ್ಯ ಕ್ರಿಕೆಟ್‌ ಸಂಸ್ಥೆ ಹಾಗೂ ಕ್ರಿಕೆಟ್‌ ನಿಯಂತ್ರಣ ಮಂಡಳಿಗಳೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಅವು ಮೂಕಪ್ರೇಕ್ಷಕವಾಗಿ ಕುಳಿತುಕೊಂಡಿವೆ. ಪೊಲೀಸರಿಗೆ ದೂರು ಬರುವವರೆಗೂ ಸುಮ್ಮನೆ ಕುಳಿತಿದ್ದರು ಎಂದು ಭಾಸ್ಕರರಾವ್‌ ಹೇಳಿದರು.

ಕ್ರಿಕೆಟ್‌ ಸಂಸ್ಥೆಯ ಸದಸ್ಯರು, ಆಟಗಾರರು ಮತ್ತು ತಂಡಗಳ ಮಾಲೀಕರಿಗೆ ಎಲ್ಲವೂ ಗೊತ್ತಿದ್ದರೂ ಮೌನವಾಗಿದ್ದಾರೆ. ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಕಮಿಷನರ್‌ ಸ್ಪಷ್ಟಪಡಿಸಿದರು.

ತನಿಖೆಗೆ ವಿಶೇಷ ತನಿಖಾ ತಂಡ

ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆಗೆ ಜಂಟಿ ಕಮಿಷನರ್‌ (ಅಪರಾಧ) ಸಂದೀಪ್‌ ಪಾಟೀಲರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ವರೆಗೂ (ಐಪಿಎಲ್‌) ವಿಸ್ತಾರಗೊಳ್ಳುವ ಸಾಧ್ಯತೆ ಇದೆ.

ಕ್ರಿಕೆಟ್‌ ನಿಯಂತ್ರಣ ಮಂಡಳಿಯೂ ನಮ್ಮ ತನಿಖೆ ಪ್ರಗತಿ ಕುರಿತು ವರದಿ ಕೇಳಿದೆ. ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧಿತರಾದವರ ಪಾತ್ರ ಕುರಿತು ಮಾಹಿತಿ ಪಡೆಯುತ್ತಿದೆ. ಕೆಲವು ಕೆಪಿಎಲ್‌ ತಂಡಗಳ ಮಾಲೀಕರು ದೇಶ ಬಿಟ್ಟು ಹೋಗಿದ್ದು, ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಅವರನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ವಿಷಯವಲ್ಲ ಎಂದೂ ಪೊಲೀಸ್‌ ಕಮಿಷನರ್‌ ಸ್ಪಷ್ಟಪಡಿಸಿದರು.

ಸಿಸಿಬಿಯು ಕೆಎಸ್‌ಸಿಎ ಮತ್ತು ಫ್ರ್ಯಾಂಚೈಸ್‌ಗಳಿಗೆ ಕೇಳಿದ್ದ ಮಾಹಿತಿಗಳು

* ಫ್ರ್ಯಾಂಚೈಸ್‌ ಹೆಸರು, ವಲಯ ಮತ್ತು ಈಗಿನ ಮಾಲೀಕರ ಮೊಬೈಲ್ ಸಂಖ್ಯೆ ಮತ್ತು ವೃತ್ತಿ ಕುರಿತು ಮಾಹಿತಿ ನೀಡಿ.

* ತಂಡವನ್ನು ನೀವು ಯಾವು ವರ್ಷದಿಂದ ಖರೀದಿಸಿದ್ದೀರಿ. ಅದಕ್ಕೂ ಮೊದಲಿನ ಮಾಲೀಕರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ.

* ತಂಡದ ಕಚೇರಿಯ ವಿಳಾಸ, ಫ್ರಾಂಚೈಸಿ ಖರೀದಿಯ ವಿವರ, ತಂಡದ ಮೌಲ್ಯ, ಇದುವರೆಗಿನ ಲೆಕ್ಕಪತ್ರ ಮಾಹಿತಿವರದಿ ಮತ್ತು ತಂಡದ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ.

* ತಂಡದ ವಾರ್ಷಿಕ ಆಯವ್ಯಯದ ಮಾಹಿತಿ ನೀಡಿ.

* ನಿಮ್ಮ ತಂಡದ ಖರೀದಿ ಸಲುವಾಗಿ ನೀಡಿರುವ ಆಕ್ಷನ್ (ಹರಾಜು) ಹಣ, ಆಟಗಾರರು ಮತ್ತು ನೌಕರರ ವೇತನ ಇತ್ಯಾದಿ ಪಾವತಿಗಳ ವಿವರಣೆ ಕೊಡಿ

* 2018,2019ರ ತಂಡದ ಆಯ್ಕೆಗಾರರು, ಕೋಚ್‌ಗಳು, ಫಿಸಿಯೋ, ನಾಯಕರು, ಮಾರ್ಗದರ್ಶಕರು, ಮ್ಯಾನೇಜರ್‌ಗಳು ಮತ್ತು ಆಟಗಾರರ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳ ಮತ್ತು ವಿವರಗಳನ್ನು ನೀಡಬೇಕು.

* ತಂಡದ ಧ್ಯೇಯ, ಉದ್ದೇಶಗಳ ವಿವರ ಮತ್ತು ತಂಡಕ್ಕೆ ನೇಮಕವಾದ ಸಿ.ಇ.ಒ, ಅಧಿಕಾರಿ, ಸಿಬ್ಬಂದಿ, ಪ್ರಚಾರ ರಾಯಭಾರಿ, ಡ್ರಮ್ಮರ್ ಕಲಾವಿದ, ಚಿಯರ್‌ ಗರ್ಲ್ಸ್‌ ಹೆಸರು, ವಿಳಾಸ ಮೊಬೈಲ್ ನಂಬರ್‌ಗಳನ್ನು ಕೊಡಬೇಕು.

* ತಂಡದಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರ ವಿವರಗಳು ಹಾಗೂ  ಅವರು ತೊಡಗಿಸಿರುವ ಹಣದ ಸಂಪೂರ್ಣ ಮಾಹಿತಿ ನೀಡಬೇಕು

* ತಂಡದ ವೆಬ್‌ಸೈಟ್, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಪ್ರಾಯೋಜಕರ ವಿವರ, ಕಾನೂನು ಸಲಹೆ ಏಜೆನ್ಸಿ, ಸಾರ್ವಜನಿಕ ಸಂಪರ್ಕ ಏಜೆನ್ಸಿ, ಪ್ರಮೋಟರ್ಸ್ ವಿವರಗಳನ್ನು ನೀಡಬೇಕು.

* ಆಟಗಾರರು ಬೇರೆ ಯಾವ ಯಾವ ಕ್ಲಬ್‌ಗಳಲ್ಲಿ ತರಬೇತಿ ಪಡೆದಿದ್ದಾರೆ ಹಾಗೂ ಆಟಗಾರರಾಗಿ ಆಡಿದ ವಿವರಗಳನ್ನು ನೀಡಬೇಕು.

* ತಂಡದ ಮತ್ತು ಮಾಲೀಕರ ಇದುವರೆಗಿನ ಆದಾಯ ತೆರಿಗೆ ಪಾವತಿಯ ಮಾಹಿತಿ ಹಾಗೂ ಹಣಕಾಸು ವ್ಯವಹಾರಗಳ ವಿವರಗಳನ್ನು ಒದಗಿಸಿ.

* ತಂಡವನ್ನು ನಿಮಗೆ ಹಂಚಿಕೆ ಮಾಡಿದ ಬಗ್ಗೆ ದೃಢೀಕೃತ ದಾಖಲಾತಿಗಳನ್ನು ನೀಡುವುದು.

* ಆಟಗಾರರನ್ನು ಖರೀದಿಸಿದ ಬಗ್ಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡುವುದು.

* ಆಟಗಾರರು ಪಾಲಿಸಬೇಕಾದ ನಿಯಮಗಳು ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಜರುಗಿಸಬೇಕಾದ ಕ್ರಮಗಳ ಬಗ್ಗೆ ಆಗಿರುವ ಒಪ್ಪಂದದ ಪ್ರತಿ ನೀಡುವುದು.

* ತಂಡವನ್ನು  ಎಷ್ಟು ವರ್ಷಗಳ ಅವಧಿಗೆ ಖರೀದಿಸಲಾಗಿದೆ ಹಾಗೂ ತಂಡ ಮತ್ತು ಕೆ.ಎಸ್‌.ಸಿ.ಎ ನಡುವೆ ಆಗಿರುವ ಒಪ್ಪಂದ ಪತ್ರದ ಪ್ರತಿ ಸಲ್ಲಿಸಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು