ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಪರಿಣಿತೆ ಪೂನಂ ಯಾದವ್ ಅವರ ಜಾವಾ ಬೈಕ್ ಯಾನ

Last Updated 3 ಆಗಸ್ಟ್ 2020, 20:15 IST
ಅಕ್ಷರ ಗಾತ್ರ

ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ಮಹಿಳಾ ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿರುವ ಲೆಗ್ ಸ್ಪಿನ್ನರ್ ಪೂನಂ ಯಾದವ್ ಕೊರೊನಾ ಕಾಲದಲ್ಲಿ ಲಭಿಸಿರುವ ವಿರಾಮದಲ್ಲಿ ನೆಚ್ಚಿನ ಜಾವಾ ಬೈಕ್ ಕಲಿಕೆಯನ್ನು ಪೂರ್ಣಗೊಳಿಸಿದ್ದಾರೆ.

***

2018ರ ಮಹಿಳೆಯರ ಟಿ–20 ವಿಶ್ವಕಪ್‌ಗೆ ತಂಡಗಳು ಸಜ್ಜಾಗುತ್ತಿದ್ದ ಸಂದರ್ಭ. ಮಹಿಳಾ ಕ್ರಿಕೆಟ್‌ನಲ್ಲಿ ಜಗತ್ತಿನ ಬಲಶಾಲಿ ರಾಷ್ಟ್ರಗಳ ಕಣ್ಣು ಇದ್ದದ್ದು ಭಾರತ ತಂಡದ, ಅದರಲ್ಲೂ ತಂಡದ ಸ್ಪಿನ್ನರ್ ಪೂನಂ ಯಾದವ್ ಮೇಲೆ. ಇದಕ್ಕೆ ಕಾರಣ, 2017ರ ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಅವರು ತೋರಿದ್ದ ಸಾಮರ್ಥ್ಯ. ಆ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ಕೇವಲ ಒಂಬತ್ತು ರನ್‌ಗಳ ಅಂತರದಲ್ಲಿ ಇಂಗ್ಲೆಂಡ್‌ ವಿರುದ್ಧಸೋತಿತ್ತು.

ಲೆಗ್ ಬ್ರೇಕ್ ದಾಳಿ ಮೂಲಕ ಟೂರ್ನಿಯಲ್ಲಿ ಎದುರಾಳಿ ತಂಡಗಳ ಆಟಗಾರ್ತಿಯರ ಲಯ ತಪ್ಪಿಸಿದ್ದ ಪೂನಂ ಒಂಬತ್ತು ಪಂದ್ಯಗಳಲ್ಲಿ 11 ವಿಕೆಟ್ ಉರುಳಿಸಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಆರನೇ ಸ್ಥಾನ ಗಳಿಸಿದ್ದರು. 2018ರ ಮಹಿಳೆಯರ ಟಿ–20 ವಿಶ್ವಕಪ್‌ ಟೂರ್ನಿಯಲ್ಲೂ ಪೂನಂ ಪಾರಮ್ಯ ಮುಂದುವರಿಯಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ಭಾರತಕ್ಕಾಗಿ ಅವರು ಐದು ಪಂದ್ಯಗಳಲ್ಲಿ ಎಂಟು ವಿಕೆಟ್ ಉರುಳಿಸಿದ್ದರು. ಈ ವರ್ಷದ ಪೆಬ್ರುವರಿ–ಮಾರ್ಚ್‌ನಲ್ಲಿ ನಡೆದ ಮಹಿಳೆಯರ ಟಿ–20 ವಿಶ್ವಕಪ್‌ನಲ್ಲಂತೂ ಭಾರತಕ್ಕೆ ಕೆಲವು ಸ್ಮರಣೀಯ ಗೆಲುವುಗಳನ್ನು ಗಳಿಸಿಕೊಟ್ಟ ಅವರು ಐದು ಪಂದ್ಯಗಳಲ್ಲಿ 10 ವಿಕೆಟ್ ಗಳಿಸಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು.

2013ರಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಪೂನಂ ಯಾದವ್‌ ಪುರುಸೊತ್ತಿಲ್ಲದ ಆಟಗಾರ್ತಿ. ಕೊರೊನಾ ಹಾವಳಿಯಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯಿಂದಾಗಿ ಅವರಿಗೆ ಸ್ವಲ್ಪ ಬಿಡುವು ಸಿಕ್ಕಂತಾಗಿದೆ. ಈ ಸಂದರ್ಭವನ್ನು ಅವರು ನೆಚ್ಚಿನ ಬೈಕ್ ಪ್ರಯಾಣಕ್ಕಾಗಿ ಬಳಸಿಕೊಂಡಿದ್ದಾರೆ.

ಸೇನಾ ಅಧಿಕಾರಿ ರಘುವೀರ್ ಸಿಂಗ್ ಯಾದವ್ ಅವರ ಪುತ್ರಿಯಾಗಿರುವ ಉತ್ತರ ಪ್ರದೇಶದ ಪೂನಂ, ಕ್ರಿಕೆಟ್‌ಗಾಗಿ ಕುಟುಂಬ ಸಮೇತ ಆಗ್ರಾ ನಗರಕ್ಕೆ ವಲಸೆ ಬಂದವರು. ಕ್ರಿಕೆಟ್ ಸರಣಿ, ಅಭ್ಯಾಸ ಇತ್ಯಾದಿಗಳಲ್ಲೇ ದಿನಗಳೆಯುತ್ತಿದ್ದಾಗಲೂ ಬೈಕ್ ಚಲಾಯಿಸುವ ಆಸೆ ಮನಸ್ಸನ್ನು ಕಾಡುತ್ತಲೇ ಇತ್ತು. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಬೈಕ್ ಬಳಿ ಸುಳಿಯಲು ಆತಂಕ. ಕಲಿಯುವ ಸಾಹಸದ ನಡುವೆ ಅನಾಹುತವಾಗಿ ಗಾಯಗೊಂಡರೆ...? ಎಂಬ ಭಯ. ಕೊರೊನಾದಿಂದಾಗಿ ಕ್ರಿಕೆಟ್ ಚಟುವಟಿಕೆ ನಿಂತ ಮೇಲೆ ಮನೆಮಂದಿಯ ಜೊತೆಯಲ್ಲೇ ಕಾಲ ಕಳೆಯುತ್ತಿರುವ ಅವರು ಈಗ ಸರಾಗವಾಗಿ ಬೈಕ್ ಓಡಿಸುತ್ತಿದ್ದಾರೆ. ಅಂದ ಹಾಗೆ ಅವರಿಗೆ ಬುಲೆಟ್ ಕಲಿಸಿದ ಗುರು, ಅವರ ಸಹೋದರನೇ.

ಆರಂಭದಲ್ಲಿ ಬೈಕ್ ಮೇಲೆ ಕುಳಿತ ಚಿತ್ರವನ್ನು ಟ್ವಿಟರ್‌ ಖಾತೆಗೆ ಅಪ್‌ಲೋಡ್ ಮಾಡಿದ್ದ ಪೂನಂ ಕೆಲವೇ ದಿನಗಳಲ್ಲಿ ರೈಡ್ ಮಾಡುವ ವಿಡಿಯೊವನ್ನು ಕೂಡ ಹಾಕಿದ್ದರು. ಅದಕ್ಕೆ ‘ಮೊದಲ ಅನುಭವ‘ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದರು. ಮಾಸ್ಕ್ ಧರಿಸಿಕೊಂಡು ಬೈಕ್‌ನಲ್ಲಿ ಮುನ್ನುಗ್ಗುವ ಅವರ ವಿಡಿಯೊವನ್ನು ನೂರಾರು ವೀಕ್ಷಿಸಿದ್ದಾರೆ. ಅನೇಕರು ಶುಭಕೋರಿ ಕಮೆಂಟ್ ಕೂಡ ಮಾಡಿದ್ದಾರೆ. ಜಾವಾ ಕಂಪೆನಿಯ ವಿಶೇಷ ಪ್ರಶಂಸೆಗೂ ಅವರು ಪಾತ್ರರಾಗಿದ್ದಾರೆ. ‘ಹಾಯ್ ಪೂನಂ, ಜಾವಾದಲ್ಲಿ ನೀವು ರೈಡ್ ಮಾಡುವುದನ್ನು ನೋಡಲು ಖುಷಿಯಾಗುತ್ತಿದೆ. ಈ ರೈಡ್ ನಿಮಗೂ ಸಂತಸ ನೀಡಿದೆ ಎಂಬುದು ನಮ್ಮ ಅನಿಸಿಕೆ‘ ಎಂದು ಕಂಪನಿ (#jawamotorcycles) ಟ್ವೀಟ್ ಮಾಡಿದೆ.

‘ಕೊರೊನಾ ಕಾಲದ ವಿರಾಮವು ಕುಟುಂಬದವರ ಜೊತೆ ಕಳೆಯಲು ಸಾಕಷ್ಟು ಅವಕಾಶ ನೀಡಿದೆ. ಬೈಕ್ ಕಲಿಯುವ ಆಸೆ ಪೂರೈಸಿದ್ದೇನೆ. ಬಗೆಬಗೆಯ ಖಾದ್ಯಗಳನ್ನುಸಿದ್ಧಪಡಿಸುವುದೂ ಈಗ ಕರಗತ. ರಾಮಾಯಣ ಮತ್ತು ಮಹಾಭಾರತ ವೀಕ್ಷಿಸುವುದು ನೆಚ್ಚಿನ ಹವ್ಯಾಸಗಳಲ್ಲಿ ಸೇರಿಕೊಂಡಿದೆ’ ಎಂದು ಅವರು ಇತ್ತೀಚೆಗೆ ತಿಳಿಸಿದ್ದರು.

ಇದೆಲ್ಲದರ ನಡುವೆ 28 ವರ್ಷದ ಈ ಆಟಗಾರ್ತಿ ಫಿಟ್‌ನೆಸ್ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ. ಅಭ್ಯಾಸ, ವ್ಯಾಯಾಮದ ಜೊತೆಯಲ್ಲಿ ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನು ಮಾಡುವುದಕ್ಕೂ ಅವರು ಮುಂದಾಗಿದ್ದಾರೆ ‘ಯಾವುದೇ ಸಂದರ್ಭದಲ್ಲಿ ನಮಗೆ ಕರೆ ಬರಬಹುದು. ಆದ್ದರಿಂದ ಸದಾ ಫಿಟ್ ಆಗಿರಬೇಕು. ನಾನು ಸದ್ಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಫ್ಲಿಪರ್ ಮತ್ತು ಟಾಪ್ ಸ್ಪಿನ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಫ್ಲಿಪರ್ ಎಸೆತವನ್ನು ರೂಢಿಸಿಕೊಳ್ಳುವುದು ಸುಲಭವಲ್ಲ. ನನಗೆ ಇದರಲ್ಲಿ ಪಾರಮ್ಯ ಸಾಧಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾದೀತು’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT