ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಆರಂಭಿಸಿದ ಚೇತೇಶ್ವರ್ ಪೂಜಾರ

Last Updated 5 ಜೂನ್ 2021, 16:38 IST
ಅಕ್ಷರ ಗಾತ್ರ

ಸೌತಾಂಪ್ಟನ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಮತ್ತು ಕೆಲವು ಆಟಗಾರರು ಶನಿವಾರ ಇಲ್ಲಿ ಅಭ್ಯಾಸ ಆರಂಭಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಲು ತೆರಳಿರುವ ಭಾರತ ತಂಡವು ಕ್ವಾರಂಟೈನ್‌ನಲ್ಲಿ ಮೂರು ದಿನಗಳನ್ನು ಪೂರೈಸಿದೆ. ಆದ್ದರಿಂದ ಲಘು ವ್ಯಾಯಾಮ, ಓಟದಂತಹ ಅಭ್ಯಾಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಬಯೋಬಬಲ್‌ ವ್ಯವಸ್ಥೆಯಲ್ಲಿ ತಮಗೆ ನಿಗದಿ ಪಡಿಸಿದ ಸ್ಥಳಗಳಲ್ಲಿ ಅಭ್ಯಾಸ ಮಾಡಿದರು.

ಪೂಜಾರ ಅವರು ತಾವು ಓಟ ಮತ್ತು ಜಿಗಿತದ ಅಭ್ಯಾಸ ಮಾಡಿದ ವಿಡಿಯೊ ತುಣುಕೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಲೆಟ್ಸ್‌ ಗೋ‘ ಹಾಗೂ ‘ಗೋಲ್ಡನ್ ಅವರ್‘ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

ಹ್ಯಾಂಪ್‌ಶೈರ್ ಬೌಲ್‌ ಕ್ರೀಡಾಂಗಣದ ಭಾಗವೇ ಆಗಿರುವ ಹಿಲ್ಟನ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟಿಗರು ತಂಗಿದ್ದಾರೆ. ಮೂರನೇ ದಿನದಂದು ತಮ್ಮ ಕೋಣೆಗಳಿಂದ ಹೊರಬರಲು ಅವರಿಗೆ ಅನುಮತಿ ನೀಡಲಾಗಿದೆ. ಆದರೆ ಪರಸ್ಪರ ಭೇಟಿಯಾಗುವಂತಿಲ್ಲ.

ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಅಭ್ಯಾಸ ಮಾಡಲು ಪ್ರತ್ಯೇಕ ಜಿಮ್ನಾಷಿಯಂ ಮತ್ತು ತರಬೇತಿ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ.

ಭಾನುವಾರ ಕೌಶಲ ತರಬೇತಿಯನ್ನು ಹೋಟೆಲ್‌ ಪಕ್ಕದ ಮೈದಾನದಲ್ಲಿ ಆಯೋಜಿಸಲಾಗಿದೆ. ಪರಸ್ಪರ ಅಂತರ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ನಾಲ್ಕನೇ ದಿನ ರೂಮ್ ಕ್ವಾರಂಟೈನ್ ಕೂಡ ಮುಕ್ತಾಯವಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಣ್ಣ ಗುಂಪುಗಳಲ್ಲಿ ಜಿಮ್ನಾಷಿಯಂ ಬಳಸಲು ಅವಕಾಶ ಸಿಗಬಹುದು.

ವ್ಯಾಯಾಮಗಳನ್ನು ಮಾಡಲು ಎಲ್ಲ ಆಟಗಾರರ ಕೋಣೆಗಳಲ್ಲಿಯೇ ಕೆಲವು ಉಪಕರಣಗಳನ್ನೂ ಅಳವಡಿಸಲಾಗಿದೆ. ಜೂನ್ 18ರಂದು ಡಬ್ಲ್ಯುಟಿಸಿ ಫೈನಲ್ ಪಂದ್ಯವು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT