ಬುಧವಾರ, ಅಕ್ಟೋಬರ್ 28, 2020
25 °C

Pv Web Exclusive | ಕ್ರಿಕೆಟ್‌: ಸಿಡಿಲ ಮರಿ ಸಂಜು...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಸಂಜು ಸ್ಯಾಮ್ಸನ್‌.. ಅಬ್ಬಾ, ಎಂಥಾ ಅದ್ಭುತ ಆಟಗಾರ. ಕಲಾತ್ಮಕ ಹೊಡೆತಗಳಿಂದ ಸಮ್ಮಿಳಿತಗೊಂಡಿರುವ ಅವರ ಆಟವನ್ನು ನೋಡೋದೆ ಚೆಂದ. ಅವರು ನಿಜವಾಗಿಯೂ ಚಾಂಪಿಯನ್‌. ಇಂತಹ ಪ್ರತಿಭಾವಂತ, ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿಲ್ಲ ಎಂಬುದೇ ಬಹುದೊಡ್ಡ ಅಚ್ಚರಿ..

ಸರಿಯಾಗಿ ಏಳು ದಿನಗಳ ಹಿಂದೆ ಆಸ್ಟ್ರೇಲಿಯಾದ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಆಡಿದ್ದ ಮಾತುಗಳಿವು. 

ವಾರ್ನ್‌ ಮಾತ್ರವಲ್ಲ. ಸೆಪ್ಟೆಂಬರ್‌ 22ರಂದು ನಡೆದಿದ್ದ ರಾಜಸ್ಥಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಐಪಿಎಲ್‌ ಪಂದ್ಯ ನೋಡಿದವರೆಲ್ಲರದ್ದೂ ಇದೇ ಉದ್ಗಾರ. ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕೇರಳದ ಈ ಅಪ್ರತಿಮ ಹೋರಾಟಗಾರನ ಗುಣಗಾನ ಮಾಡಿದವರೆ. 

ಅಂದ ಹಾಗೆ ಆ ಪಂದ್ಯದಲ್ಲಿ ಸಂಜು, ಅಕ್ಷರಶಃ ಗುಡುಗಿದ್ದರು. ಅವರ ಬ್ಯಾಟ್‌ನಿಂದ ಸಿಡಿದ ಸಿಕ್ಸರ್‌ಗಳ (9) ಮಳೆಯಿಂದಾಗಿ ಶಾರ್ಜಾ ಅಂಗಳದಲ್ಲಿ ರನ್‌ ಹೊಳೆಯೇ ಹರಿದಿತ್ತು. ಪಿಯೂಷ್‌ ಚಾವ್ಲಾ, ರವೀಂದ್ರ ಜಡೇಜ ಅವರಂತಹ ಅನುಭವಿ ಸ್ಪಿನ್ನರ್‌ಗಳ ಮೇಲೆ ಪ್ರಹಾರ ನಡೆಸಿದ್ದ ಸಂಜು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಸಂಭ್ರಮಿಸಿದ್ದರು. ಆ ಹಣಾಹಣಿಯಲ್ಲಿ ಅವರ ಸ್ಟ್ರೈಕ್‌ರೇಟ್‌ ಬರೋಬ್ಬರಿ 231.25 !


ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ವೈಖರಿ

ಭಾನುವಾರ (ಸೆ.27) ರಾತ್ರಿ ನಡೆದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್ ಎದುರಿನ ಹೋರಾಟದಲ್ಲೂ ಸಂಜು ಸ್ಯಾಮ್ಸನ್ ಅವರದ್ದು ಮತ್ತದೇ ಅಬ್ಬರ. 224ರನ್‌ಗಳ ಸವಾಲಿನ ಗುರಿ ಬೆನ್ನಟ್ಟುವ ಹಾದಿಯಲ್ಲಿ ಎಳ್ಳಷ್ಟೂ ಎದೆಗುಂದದೆ ಬ್ಯಾಟ್‌ ಬೀಸಿದ ಅವರು ಅಭಿಮಾನಿಗಳ ಪಾಲಿಗೆ ಮತ್ತೊಮ್ಮೆ ‘ಹೀರೊ’ ಆದರು. ಈ ಪಂದ್ಯದಲ್ಲಿ ಅವರು ಬಾರಿಸಿದ್ದು ಏಳು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿ. ಅವರ ಖಾತೆಗೆ ಸೇರಿದ್ದು 85ರನ್‌.

ಹೋದ ಐಪಿಎಲ್‌ ಆವೃತ್ತಿಯಲ್ಲೂ ಸಂಜು, ಇದೇ ಗತ್ತು ಗೈರತ್ತಿನಿಂದ ಬ್ಯಾಟಿಂಗ್‌ ಮಾಡಿದ್ದರು. ಮಾರ್ಚ್‌ 19ರಂದು ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್‌‌ ಎದುರಿನ ಪಂದ್ಯವನ್ನು ಕ್ರಿಕೆಟ್‌ ಪ್ರೇಮಿಗಳು ಮರೆತಿರಲಿಕ್ಕಿಲ್ಲ. ಆ ಪೈಪೋಟಿಯಲ್ಲಿ ಅವರು ಅಜೇಯ ಶತಕ ಸಿಡಿಸಿ ಮಿಂಚಿದ್ದರು. ಆ ಮೂಲಕ ಐಪಿಎಲ್‌ನಲ್ಲಿ ಎರಡನೇ ಬಾರಿ ಮೂರಂಕಿಯ ಗಡಿ ದಾಟಿದ ಸಾಧನೆಯನ್ನೂ ಮಾಡಿದ್ದರು.

ಲಾಕ್‌ಡೌನ್‌ನಲ್ಲಿ ಎದುರಿಸಿದ್ದು 20,000ಕ್ಕೂ ಅಧಿಕ ಎಸೆತ!

ಈ ಬಾರಿಯ ಐಪಿಎಲ್‌ನಲ್ಲಿ ಸಂಜು, ಬ್ಯಾಟಿಂಗ್‌ ಕರಾಮತ್ತು ತೋರುತ್ತಿರುವುದರ ಹಿಂದೆ ಕಠಿಣ ಪರಿಶ್ರಮದ ಕಥೆ ಇದೆ. ಕೊರೊನಾ ವೈರಾಣುವಿನ ಉಪಟಳಕ್ಕೆ ಕಡಿವಾಣ ಹಾಕುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಕ್ರೀಡಾ ಚಟುವಟಿಕೆಗಳೆಲ್ಲಾ ಸ್ತಬ್ಧಗೊಂಡಿದ್ದವು. ಕೊರೊನಾ ಕಾಲದ ಈ ‘ರಜೆ’ಯಲ್ಲಿ ಅವರು ಕಠಿಣ ತಾಲೀಮು ಕೈಗೊಂಡಿದ್ದರು. 

ಕೇರಳದ ಮಾಜಿ ಆಟಗಾರ ರೈಫಿ ಗೋಮೆಜ್‌ ಅವರ ಮನೆಯ ತಾರಸಿಯ ಮೇಲೆ ತಲೆ ಎತ್ತಿದ್ದ ನೆಟ್ಸ್‌ನಲ್ಲಿ ನಿರಂತರವಾಗಿ ಬೆವರು ಹರಿಸಿದ್ದರು. ರೈಫಿ ಅವರು ಥ್ರೋ ಡೌನ್‌ ಮೂಲಕ ಹಾಕಿದ್ದ 20,000ಕ್ಕೂ ಅಧಿಕ ಎಸೆತಗಳನ್ನು ಸಂಜು ಎದುರಿಸಿದ್ದರು. ಸಿಎಸ್‌ಕೆ ಎದುರಿನ ಪಂದ್ಯದ ಬಳಿಕ ಅವರು ರೈಫಿ ನೀಡಿದ ಸಹಕಾರವನ್ನು ವಿನಮ್ರತೆಯಿಂದಲೇ ಸ್ಮರಿಸಿದ್ದರು.


ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪಿಂಗ್‌ ವೈಖರಿ

ಫಿಟ್‌ನೆಸ್‌ಗೂ ಒತ್ತು

ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಒತ್ತು ನೀಡಿದ್ದ ಸಂಜು, ಇದಕ್ಕಾಗಿ ಕಸರತ್ತು ಮತ್ತು ಧ್ಯಾನದ ಮೊರೆ ಹೋಗಿದ್ದರು. ಮುಂಜಾನೆಯ ಸಮಯದಲ್ಲಿ ಕಡಲ ತೀರದ ಮರಳು ಹಾಸಿನ ಮೇಲೆ ಓಡುವುದಷ್ಟೇ ಅಲ್ಲದೆ, ಟಯರ್‌ ನೆರವಿನಿಂದ ಬ್ಯಾಕ್‌ ಆ್ಯಂಡ್‌ ಫೊರ್ಥ್‌ ಫ್ಲಿಪ್‌, ಕಂಟಿನ್ಯೂವಸ್‌ ಫ್ಲಿಪ್‌ ಸೇರಿದಂತೆ ವಿವಿಧ ಬಗೆಯ ವ್ಯಾಯಾಮಗಳನ್ನು ಮಾಡುತ್ತಿದ್ದರು. ಜೊತೆಗೆ ಜಿಮ್‌ನಲ್ಲೂ ಗಂಟೆಗಟ್ಟಲೆ ಬೆವರು ಸುರಿಸುತ್ತಿದ್ದರು. ಭಾರ ಎತ್ತುವುದೂ ಸೇರಿದಂತೆ ನಾನಾ ಬಗೆಯ ಕಸರತ್ತುಗಳನ್ನು ಮಾಡಿ ತೋಳ್ಬಲ ಹೆಚ್ಚಿಸಿಕೊಂಡಿದ್ದರು. ಇದು ಅವರ ದಣಿವರಿಯದ ಆಟದ ಹಿಂದಿನ ಗುಟ್ಟು.

ಭಾರತದ ಕ್ರಿಕೆಟ್‌ ಕಂಡ ಸರ್ವಶ್ರೇಷ್ಠ ವಿಕೆಟ್‌ ಕೀಪರ್‌ ಎಂಬ ಹಿರಿಮೆ ಮಹೇಂದ್ರ ಸಿಂಗ್‌ ಧೋನಿ ಅವರದ್ದು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಮಹಿ’ ವಿದಾಯ ಹೇಳಿಯಾಗಿದೆ. ಅವರ ವಾರಸುದಾರನ ಸ್ಥಾನಕ್ಕೆ ಈಗ ಸಾಕಷ್ಟು ಪೈಪೋಟಿ ಏರ್ಪಟ್ಟಿರುವುದು ಗೊತ್ತಿರುವ ವಿಚಾರ. ಕನ್ನಡಿಗ ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಅವರು ಈ ರೇಸ್‌ನ ಮುಂಚೂಣಿಯಲ್ಲಿದ್ದಾರೆ. ರಿಷಭ್‌‌, ತಮಗೆ ಸಿಕ್ಕಿದ ಅವಕಾಶವನ್ನೆಲ್ಲಾ ಕೈಚೆಲ್ಲಿದ್ದಾರೆ. ಹೀಗಾಗಿ ಅವರ ಬದಲು ಸಂಜುಗೆ ಸ್ಥಾನ ನೀಡಬೇಕೆಂಬ ಕೂಗು ಈಗ ಮತ್ತೆ ಕೇಳಿಬರುತ್ತಿದೆ. ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿದಂತೆ ಅನೇಕರು ಇದಕ್ಕೆ ದನಿಗೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಸಂಜುಗೆ ಮಣೆ ಹಾಕಲಿದೆಯೇ. ಇದಕ್ಕೆ ಕಾಲವೇ ಉತ್ತರಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು