ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಅಜಿಂಕ್ಯ ಮುಂದೆ ’ಸಮ್ಮರ್ 36‘ ಕೆಂಡದುಂಡೆಗಳ ಹಾದಿ

Last Updated 22 ಡಿಸೆಂಬರ್ 2020, 13:51 IST
ಅಕ್ಷರ ಗಾತ್ರ

2020ರ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತದ ಪರ ದಾಖಲಾದ ಏಕೈಕ ಸಿಕ್ಸರ್ ಗಳಿಸಿದ್ದು ಯಾರು?–

ಭವಿಷ್ಯದಲ್ಲಿ ಇಂತಹದೊಂದು ಪ್ರಶ್ನೆಯು ಟಿವಿ ವಾಹಿನಿಯ ಕ್ವಿಜ್‌ ಶೋನಲ್ಲಿ ಬಂದರೂ ಬರಬಹುದು. ಆಗ ನಿರೂಪಕರು ’ಆ ಪಂದ್ಯವನ್ನು ಸಮ್ಮರ್ 36 ಎಂದೂ ಕರೆಯುತ್ತಾರೆ‘ ಎಂಬ ಸುಳಿವನ್ನೂ ಸ್ಪರ್ಧಿಗೆ ನೀಡಬಹುದೇನೋ?

ಹೌದು; ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಿಕ್ಸರ್‌ ಹೊಡೆದಿದ್ದ ಅಜಿಂಕ್ಯ ರಹಾನೆ ಮುಂದೆ ಈಗ ನಿಗಿನಿಗಿಸುವ ಕೆಂಡದ ರಾಶಿ ಚೆಲ್ಲಿದ ಹಾದಿ ಇದೆ. ಬಹುಶ: ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಯಾವುದೇ ‘ಹಂಗಾಮಿ ನಾಯಕ’ನೂ ಎದುರಿಸದಂತಹ ಕಠಿಣ ಸವಾಲೊಂದಕ್ಕೆ ಅಜಿಂಕ್ಯ ಸಿದ್ಧರಾಗಬೇಕಿದೆ.

ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಭಾರತ ತಂಡವು ಕುಸಿದಿತ್ತು. ಭಾರತದ ಟೆಸ್ಟ್ ಇತಿಹಾಸದಲ್ಲಿಯೇ ದಾಖಲಾದ ಅತ್ಯಂತ ಕನಿಷ್ಠ ಮೊತ್ತವಿದು. 1974ರಲ್ಲಿ ಅಜಿತ್ ವಾಡೇಕರ್ ಬಳಗವು 42 ರನ್‌ಗಳಿಗೆ ಕುಸಿದಿದ್ದ ದಾಖಲೆಯನ್ನೂ ಇದು ಮೀರಿದೆ. ಐಸಿಸಿ ಟೆ್ಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಈ ರೀತಿಯ ಕಳಪೆ ಆಟವಾಡಿದ್ದು ಅಕ್ಷಮ್ಯವೆಂದೇ ಟೀಕೆಗಳು ವ್ಯಕ್ತವಾಗಿವೆ. ಆದರೆ ಆಗಿದ್ದು ಆಯಿತು. ಮುಂದಿನ ಹಾದಿ ನೋಡಿ ಎಂದಿದ್ದಾರೆ ಕೆಲವು ದಿಗ್ಗಜರು.

ಸ್ವತಃ ವಿರಾಟ್ ಕೊಹ್ಲಿಯವರೇ ’ಕಡ್ಡಿಯನ್ನು ಗುಡ್ಡ ಮಾಡಬೇಡಿ. ಮುಂದೆ ಪುಟಿದೇಳುತ್ತೇವೆ‘ ಎಂದು ತಂಡಕ್ಕೆ ಧೈರ್ಯ ತುಂಬಿದ್ದಾರೆ. ಆದರೆ, ’ಪಿತೃತ್ವ ರಜೆ‘ಗಾಗಿ ತವರಿಗೆ ಮರಳುತ್ತಿರುವ ಕೊಹ್ಲಿಯ ಬದಲು ಮುಂದಿನ ಮೂರು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4245 ರನ್‌ಗಳು ಇವರ ಖಾತೆಯಲ್ಲಿವೆ. ಬ್ಯಾಟಿಂಗ್ ವಿಷಯದಲ್ಲಿ ಇವರೂ ಅಗ್ರೆಸಿವ್. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಬಲ ಒದಗಿಸಬಲ್ಲ ಆಟಗಾರ. ಸೀಮಿತ ಓವರ್‌ಗಳಲ್ಲಿ ಲಯ ಕಳೆದುಕೊಂಡಿರುವ ಅಜಿಂಕ್ಯ ಭಾರತಕ್ಕಾಗಿ ಏಕದಿನ ಪಂದ್ಯವಾಡಿ ಎರಡು ಮತ್ತು ಟಿ20 ಪಂದ್ಯವಾಡಿ ನಾಲ್ಕು ವರ್ಷಗಳು ಕಳೆದುಹೋಗಿವೆ. ಆದರೆ ಟೆಸ್ಟ್‌ನಲ್ಲಿ ಮಾತ್ರ ಅವರು ಸ್ಥಾನ ಕಳೆದುಕೊಂಡಿಲ್ಲ. ಇದು ಅವರಲ್ಲಿರುವ ಉತ್ತಮ ಕೌಶಲದ ಆಟಕ್ಕೆ ಲಭಿಸಿರುವ ಗೌರವ.

ಆದರೆ ಈಗ ಅವರ ಮುಂದಿರುವ ಸವಾಲು ಬಹಳ ಕ್ಲಿಷ್ಟವಾಗಿದೆ. ಮೊದಲ ಪಂದ್ಯದಲ್ಲಿ ತಮ್ಮ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟವು ಚೆನ್ನಾಗಿ ನಡೆದ ಹೊತ್ತಲ್ಲಿ ಎಡವಟ್ಟು ಮಾಡಿಕೊಂಡು ಟೀಕೆಗೊಳಗಾಗಿದ್ದರು. ಅವರ ನಿರ್ಣಯದಿಂದ ವಿರಾಟ್ ರನ್ಔಟ್ ಆಗಿದ್ದರು. ನಂತರ ತಂಡವು ಕುಸಿದಿತ್ತು. ಅದೂ ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಆದರೆ ಕನಿಷ್ಠ ಮೊತ್ತದ ಸುದ್ದಿಯಿಂದಾಗಿ ರನ್‌ಔಟ್ ವಿಷಯ ತೆರೆಮರೆಗೆ ಸರಿಯಿತು.

ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅವಕಾಶ ಈಗ ಅಜಿಂಕ್ಯಗೆ ಇದೆ. ಆದರೆ, ಡಿಸೆಂಬರ್ 26ರಿಂದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಅನುಭವಿ ಬೌಲರ್ ಮೊಹಮ್ಮದ್ ಶಮಿ ಇಲ್ಲ. ಕ್ವಾರಂಟೈನ್‌ನಲ್ಲಿರುವ ರೋಹಿತ್ ಶರ್ಮಾ ಕಣಕ್ಕಿಳಿಯುವುದಿಲ್ಲ. ಆರಂಭಿಕ ಜೋಡಿಯಾಗಿದ್ದ ಪೃಥ್ವಿ ಶಾ ಮತ್ತು ಮಯಂಕ್ ಅಗರವಾಲ್ ಲಯದಲ್ಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಗಳಿಸಿರುವ ಮಯಂಕ್ ಮತ್ತೊಂದು ಅವಕಾಶ ಪಡೆಯುವುದು ಖಚಿತ. 2018ರಲ್ಲಿ ಇದೇ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮಯಂಕ್ ಪದಾರ್ಪಣೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 76 ರನ್ ಹೊಡೆದು ಜನಮನ ಗೆದ್ದಿದ್ದರು.

ಪೃಥ್ವಿ ಬದಲು ಕೆ.ಎಲ್. ರಾಹುಲ್ ಅಥವಾ ಶುಭಮನ್ ಗಿಲ್ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಬೇಕೆಂಬ ಸಲಹೆಗಳು ಕೇಳಿಬಂದಿವೆ. ಮಧ್ಯಮ ಕ್ರಮಾಂಕದಲ್ಲಿ ವೃದ್ಧಿಮಾನ ಸಹಾ ಮತ್ತು ಹನುಮವಿಹಾರಿ ಅವರನ್ನು ಕೈಬಿಟ್ಟು ರಿಷಭ್ ಪಂತ್ ಮತ್ತು ರವೀಂದ್ರ ಜಡೇಜ ಅವರನ್ನು ಕಣಕ್ಕಿಳಿಸಬೇಕು ಎಂಬ ಮಾತುಗಳೂ ಹಿರಿಯ ಕ್ರಿಕೆಟಿಗರಿಂದ ಕೇಳಿಬಂದಿವೆ.

ಬ್ಯಾಟಿಂಗ್ ಸಂಯೋಜನೆಯನ್ನು ಹೊಂದಿಸಿಕೊಳ್ಳುವ ಮೊದಲ ಸವಾಲು ಅಜಿಂಕ್ಯಗೆ ಇದೆ. ಆಸ್ಟ್ರೇಲಿಯಾದಲ್ಲಿ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡುವುದು ಬಹುಮುಖ್ಯ. ಆರಂಭ ಆಟಗಾರರು ಕನಿಷ್ಟ ಒಂದು ಅವಧಿಯನ್ನು ಪೂರ್ತಿಯಾಗಿ ಆಡಿದರೆ, ನಂತರದ ಕ್ರಮಾಂಕದವರಿಗೆ ಆತ್ಮವಿಶ್ವಾಸ ಬೆಳೆಯುತ್ತದೆ. ಆದ್ದರಿಂದ ನಾಯಕನಿಗೆ ಇರುವ ಮೊದಲ ತಲೆನೋವು ಇದಾಗಿದೆ. ಗಿಲ್ ಅವರಿಗೆ ಪದಾರ್ಪಣೆಯ ಅವಕಾಶವನ್ನು ನೀಡುವುದು ಅಜಿಂಕ್ಯ ಪಾಲಿಗೆ ಲಾಟರಿಯಂತಾಗಬಹುದು. ಒಂದೊಮ್ಮೆ ಪಂಜಾಬಿ ಹುಡುಗ ಗಿಲ್ ಮಿಂಚಿದರೆ ಓಕೆ. ಇಲ್ಲದಿದ್ದರೆ ಟೀಕೆಗಳನ್ನು ಕೇಳುವ ಪಾಳಿ ಅಜಿಂಕ್ಯ ಮತ್ತು ರವಿಶಾಸ್ತ್ರಿಗೆ ಖಂಡಿತ.

ಆದ್ದರಿಂದ ಬಹುತೇಕ ಅನುಭವಿ ರಾಹುಲ್ ಮತ್ತು ಮಯಂಕ್ ಜೋಡಿಯನ್ನೇ ಅವರು ಕಣಕ್ಕಿಳಿಸುವ ಬಗ್ಗೆ ಯೋಚಿಸಬಹುದು. ಸಹಾ ಬದಲು ಪಂತ್ ಮತ್ತು ಹನುಮ ವಿಹಾರಿ ಬದಲು ಜಡೇಜಗೆ ಮಣೆ ಹಾಕಿದರೆ ಬ್ಯಾಟಿಂಗ್ ಲೈನ್ ಅಪ್ ತುಸು ಆಳವಾಗುತ್ತದೆ. ಇನ್ನುಳಿದಂತೆ ಈ ಎಲ್ಲ ಒತ್ತಡಗಳ ನಡುವೆ ವಿರಾಟ್ ಆಡುತ್ತಿದ್ದ ನಾಲ್ಕನೇ ಕ್ರಮಾಂಕದಲ್ಲಿ ತಮ್ಮನ್ನು ಪಣಕ್ಕೊಡ್ಡಿಕೊಳ್ಳುವ ಸಾಧ್ಯತೆಯೂ ಇದೆ. ಇದು ಎಲ್ಲಕ್ಕಿಂತ ಕಠಿಣ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಮತ್ತು ಆರಂಭಿಕ ಜೋಡಿ ಚೆನ್ನಾಗಿ ಆಡದೇ ಹೋದರೆ ಆ ಹೊಣೆಯನ್ನು ಸಂಪೂರ್ಣ ತಮ್ಮ ಮೇಲೆ ಹಾಕಿಕೊಂಡು ಇನಿಂಗ್ಸ್‌ಗೆ ಬಲ ತುಂಬಬೇಕು. ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿರುವ ದಾಖಲೆಯಿರುವ ಅಜಿಂಕ್ಯ ಈ ಸವಾಲನ್ನು ನಿಭಾಯಿಸಬಲ್ಲರು.

ಆದರೆ, ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್‌ ಬದಲಿಗೆ ಮೊಹಮ್ಮದ್ ಸಿರಾಜ್ ಅಥವಾ ನವದೀಪ್ ಸೈನಿ ಅವರನ್ನು ನಿಭಾಯಿಸುವುದು ಹೊಸ ಅನುಭವವೇ ಆಗಲಿದೆ. ಇವರಿಬ್ಬರೂ ಸೀಮಿತ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಅವರಿಬ್ಬರ ಸಾಮರ್ಥ್ಯ ಸಾಬೀತಾಗಬೇಕಿದೆ. ಇಲ್ಲದಿದ್ದರೆ ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಮೇಲಿನ ಒತ್ತಡ ದುಪ್ಪಟ್ಟಾಗುತ್ತದೆ. ಅಶ್ವಿನ್ ಜೊತೆಗೆ ಜಡೇಜ ಸ್ಪಿನ್ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅಜಿಂಕ್ಯಗೆ ನಿರಾಳ. ಆದರೆ ಕನ್‌ಕಷನ್‌ನಿಂದ ಚೇತರಿಸಿಕೊಂಡಿರುವ ಜಡೇಜ ಯಾವ ರೀತಿ ಆಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇದೆ.

ಇವೆಲ್ಲ ಸವಾಲುಗಳನ್ನು ಮೀರಿ ನಿಲ್ಲುವುದರ ಜೊತೆಗೆ ’ಸಮ್ಮರ್ 36‘ ಆಘಾತವನ್ನು ಮರೆತು ಗಟ್ಟಿ ಮನೋಬಲದೊಂದಿಗೆ ಕಣಕ್ಕಿಳಿಯಬೇಕು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಮತ್ತು ಅಲ್ಲಿ ರಾಹುಲ್ ದ್ರಾವಿಡ್ ಅವರಿಂದ ಲಭಿಸಿದ್ದ ಮಾರ್ಗದರ್ಶನವು ಅವರಿಗೆ ಇಲ್ಲಿ ನೆರವಿಗೆ ಬರಬಹುದು. ಮುಂಬೈ ತಂಡದಲ್ಲಿ ಜೊತೆಗೆ ಆಡಿದ್ದ ಮಾಜಿ ಆಟಗಾರ ವಾಸೀಂ ಜಾಫರ್ ಅವರ ಪ್ರೋತ್ಸಾಹದ ನುಡಿಯೂ ಅಜಿಂಕ್ಯ ಮನೋಬಲ ಹೆಚ್ಚಿಸಬಹುದು.

ಒಂದೊಮ್ಮೆ 32 ವರ್ಷದ ಅಜಿಂಕ್ಯ ಈ ಸರಣಿಯಲ್ಲಿ ತಮ್ಮ ನಾಯಕತ್ವ ಹಾಗೂ ಆಟದಲ್ಲಿ ವಿಫಲರಾದರೆ ದೊಡ್ಡಬೆಲೆ ತೆರಬೇಕಾದ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT