ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚಿನ್ ರವೀಂದ್ರ ಈಗ ನ್ಯೂಜಿಲೆಂಡ್‌ನ ‘ಆಲ್‌ರೌಂಡ್ ಹೀರೊ’

ಭಾರತ–ನ್ಯೂಜಿಲೆಂಡ್‌ ಟೆಸ್ಟ್ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ
Last Updated 30 ನವೆಂಬರ್ 2021, 13:09 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಎದುರಿನ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದ ರಚಿನ್ ರವೀಂದ್ರ ಅವರು ಈಗನ್ಯೂಜಿಲೆಂಡ್‌ನ ‘ಆಲ್‌ರೌಂಡ್ ಹೀರೊ’ ಆಗಿದ್ದಾರೆ.

ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಕೊನೆಯ ವಿಕೆಟ್‌ಗೆ ಅಜೇಯ ಆಟವಾಡಿದ ರಚಿನ್ ರವೀಂದ್ರ ಮತ್ತು ಎಜಾಜ್ ಪಟೇಲ್ ಭಾರತದ ಕೈಯಿಂದ ಜಯ ಕಸಿದುಕೊಂಡಿದ್ದರು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ರಚಿನ್ 91 ಎಸೆತ ಎದುರಿಸಿ 18 ರನ್ ಗಳಿಸಿದ್ದರು. ಅದು ರಚಿನ್ ಅವರ ಪದಾರ್ಪಣೆ ಪಂದ್ಯವಾಗಿತ್ತು.

ಕೊನೆಯ ಕ್ರಮಾಂಕದ ಪಟೇಲ್‌ ಅವರು ರವೀಂದ್ರ ಜಡೇಜ ಹಾಕಿದ ಅಂತಿಮ ಓವರ್‌ನ ಎಲ್ಲ ಎಸೆತಗಳನ್ನು ಎದುರಿಸಿದ್ದರು. ಬೆಂಗಳೂರು ಮೂಲದ ರವೀಂದ್ರ ಅವರೊಂದಿಗೆ ಮುಂಬೈ ಮೂಲದ ಎಜಾಜ್ ಕೂಡ ನ್ಯೂಜಿಲೆಂಡ್‌ನಲ್ಲಿ ಈಗ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾರೆ.

‘ಗ್ಯಾಲರಿಗಳಿಂದ ಪ್ರೇಕ್ಷಕರ ಜೋರು ಕೂಗು. ವಿಕೆಟ್‌ ಸುತ್ತ ಫೀಲ್ಡರ್‌ಗಳ ಗೋಡೆ...ಸಣ್ಣ ವಯಸ್ಸಿನಲ್ಲಿ ಊಹಿಸಿಕೊಂಡಿದ್ದ ಇಂಥ ಸನ್ನಿವೇಶದಲ್ಲಿ ನಾನೇ ಸಿಕ್ಕಿಬಿದ್ದಾಗ ಒಂದು ಬಗೆಯ ರೋಮಾಂಚನವಾಗಿತ್ತು‘ ಎಂದು ವೆಲಿಂಗ್ಟನ್‌ನಲ್ಲಿ ಜನಿಸಿದ ರಚಿನ್ ಹೇಳಿದರು.

‘ಇಂಥ ರೋಚಕ ಪಂದ್ಯಗಳನ್ನು ನೋಡಿಕೊಂಡೇ ಬೆಳೆದವರು ನಾವು. ಅಂಥ ಪಂದ್ಯಗಳಲ್ಲಿ ಆಡಿದವರ ಬಗ್ಗೆ ಗೌರವ ಉಳಿಸಿಕೊಂಡು ಬಂದಿದ್ದೆವು. ಈ ಪಂದ್ಯದ ಕೊನೆಯ ಓವರ್‌ಗಳಲ್ಲಿ ಇಬ್ಬರೂ ನರನಾಡಿಗಳನ್ನು ಬಿಗಿಹಿಡಿದುಕೊಂಡು ಆಡಿದ್ದೆವು. ಆದರೆ ಕೊನೆಗೆ ಎಲ್ಲವೂ ಅಂದುಕೊಂಡಂತೆ ಆಯಿತು. ಈ ಗಳಿಗೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ’ ಎಂದು ರಚಿನ್ ನುಡಿದರು.

ರವೀಂದ್ರ ಬಗ್ಗೆ ಮಾತನಾಡಿದ ನಾಯಕ ಕೇನ್ ವಿಲಿಯಮ್ಸನ್ ’ಅವರೊಬ್ಬ ಆಲ್‌ರೌಂಡ್ ಪ್ಯಾಕೇಜ್‌’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‌‘ತಂದೆ–ತಾಯಿ ಪ್ರೋತ್ಸಾಹ ಕಾರಣ’

ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಸಿಸ್ಟಂ ಆರ್ಕಿಟೆಕ್ಟ್ ಆಗಿದ್ದರು. ಸ್ಥಳೀಯ ಹಂತದ ಕ್ರಿಕೆಟ್‌ ಆಡಿದ್ದ ಅವರು ನಂತರ ನ್ಯೂಜಿಲೆಂಡ್‌ಗೆ ವಲಸೆ ಹೋಗಿದ್ದರು. ಅಲ್ಲಿ ಹಟ್‌ ಹಾಕ್ಸ್‌ ಕ್ರಿಕೆಟ್ ಕ್ಲಬ್‌ನಲ್ಲೂ ಕೆಲ ಕಾಲ ಆಡಿದ್ದಾರೆ. 16 ವರ್ಷದವರಾಗಿದ್ದಾಗಲೇ ನ್ಯೂಜಿಲೆಂಡ್‌ನ 19 ವರ್ಷದೊಳಗಿನವರ ತಂಡದಲ್ಲಿ ಆಡಲು ಆರಂಭಿಸಿದ್ದ ರಚಿನ್ ನಂತರ ಪ್ರತಿ ಹಂತದಲ್ಲೂ ಮಿಂಚಿದ್ದರು. ತಂದೆ–ತಾಯಿ ಪ್ರೋತ್ಸಾಹವೇ ತಮ್ಮ ಸಾಧನೆಯ ಬಲ ಎಂದು ರಚಿನ್ ರವೀಂದ್ರ ಹೇಳಿದರು.

ಕಾನ್ಪುರ ಟೆಸ್ಟ್‌ ಡ್ರಾ ಮಾಡಿಕೊಳ್ಳಲು ‘ಮಾರ್ಗದರ್ಶಕ’ ಎಜಾಜ್ ಪಟೇಲ್ ಸಹಕಾರವೂ ಮುಖ್ಯವಾಗಿತ್ತು ಎಂದು ರಚಿನ್ ಹೇಳಿದ್ದಾರೆ.

’ಪಟೇಲ್ ಅವರನ್ನು ಐದು ವರ್ಷಗಳಿಂದ ಬಲ್ಲೆ. ಅವರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದೇನೆ. ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಅವರಿದ್ದುದು ಅನುಕೂಲವಾಯಿತು. ಬೌಲಿಂಗ್ ಮಾಡುವ ಸಂದರ್ಭದಲ್ಲೂ ಪಟೇಲ್ ನೆರವಾಗುತ್ತಿದ್ದಾರೆ’ ಎಂದು ಅವರು ಹೇಳಿದರು.

ರಾಹುಲ್–ಸಚಿನ್ ರಚಿನ್ ಆದಾಗ...

ರಚಿನ್ ರವೀಂದ್ರ ಅವರ ಹೆಸರಿನ ಮೊದಲ ಭಾಗವು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮಿಶ್ರಣ. ಪಂದ್ಯ ಮುಗಿದ ನಂತರ ರಚಿನ್ ಅವರನ್ನು ಸಚಿನ್ ಕೊಂಡಾಡಿದ್ದರು. ’ಅದು ಅಮೋಘ ಆಟವಾಗಿತ್ತು’ ಎಂದು ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT