ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಅಧಿಕಾರಿ ಎದುರು ದ್ರಾವಿಡ್ ಹಾಜರು ಇಂದು

Last Updated 25 ಸೆಪ್ಟೆಂಬರ್ 2019, 17:30 IST
ಅಕ್ಷರ ಗಾತ್ರ

ಮುಂಬೈ: ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಬಿಸಿಸಿಐ ನೀತಿ ಅಧಿಕಾರಿಯ ಮುಂದೆ ವಿಚಾರಣೆಗಾಗಿ ಹಾಜರಾಗಲಿದ್ದಾರೆ.

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇಂಡಿಯಾ ಸಿಮೆಂಟ್ಸ್‌ ಗ್ರೂಪ್‌ನ ಉಪಾಧ್ಯಕ್ಷರೂ ಆಗಿದ್ದಾರೆ. ಐಪಿಎಲ್‌ನಲ್ಲಿ ಸ್ಪರ್ಧಿಸುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇಂಡಿಯಾ ಸಿಮೆಂಟ್ಸ್‌ನ ಫ್ರ್ಯಾಂಚೈಸ್‌ನದ್ದಾಗಿದೆ.

ಆದ್ದರಿಂದ ಇದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಆಗುತ್ತದೆ ಎಂದು ಆರೋಪಿಸಿದ್ದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಆಜೀವ ಸದಸ್ಯ ಸಂಜೀವ್ ಗುಪ್ತಾ ದೂರು ನೀಡಿದ್ದರು.

ಇದಕ್ಕೆ ಈಗಾಗಲೇ ದ್ರಾವಿಡ್ ಅವರು ಪ್ರತ್ಯುತ್ತರ ನೀಡಿದ್ದಾರೆ. ತಾವು ಇಂಡಿಯಾ ಸಿಮೆಂಟ್ಸ್‌ನಿಂದ ಎರಡು ವರ್ಷಗಳ ರಜೆ (ಲೀವ್ ಆಫ್‌ ಅಬ್ಸೆನ್ಸ್‌) ಪಡೆದಿದ್ದೇನೆ. ಚೆನ್ನೈ ಸೂಪರ್ ಕಿಂಗ್ಸ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಿದ್ದಾರೆ. ‌

ಆದರೆ ನೀತಿ ಅಧಿಕಾರಿಯ ಮುಂದೆ ತಾವೇ ಖುದ್ದಾಗಿ ಹೇಳಿಕೆಯನ್ನು ದಾಖಲಿಸಬೇಕು ಎಂದು ರಾಹುಲ್ ದ್ರಾವಿಡ್ ಅವರಿಗೆ ಸೂಚಿಸಲಾಗಿದೆ.

ಇದೇ ವೇಳೆ ಬಿಸಿಸಿಐ ಉದ್ಯೋಗಿ ಮಯಂಕ್ ಪಾರೀಖ್ ಅವರಿಗೂ ನೋಟಿಸ್ ನೀಡಲಾಗಿದೆ. ಅವರು ಕೂಡ ಗುರುವಾರ ನೀತಿ ಅಧಿಕಾರಿಯ ಮುಂದೆ ಹಾಜರಾಗುವರು. ಮಂಡಳಿಯ ಕಾರ್ಯನಿರ್ವಹಣಾ ವಿಭಾಗದ ಉದ್ಯೋಗಿಯಾಗಿರುವ ಮಯಂಕ್, ಮುಂಬೈ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವ ಹೊಂದಿದ್ದಾರೆ. ಅಲ್ಲದೇ ಕೆಲವು ಕ್ರಿಕೆಟ್‌ ಕ್ಲಬ್‌ಗಳಲ್ಲಿ ಸದಸ್ಯರಾಗಿದ್ದಾರೆ. ಆದ್ದರಿಂದ ಅವರ ಮೇಲೆಯೂ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪವಿದೆ.

ಬಿಸಿಸಿಐ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಎರಡು ಲಾಭದಾಯಕ ಹುದ್ದೆಗಳನ್ನು ಹೊಂದುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT