ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಆಟಗಾರರಿಗೆ ರಾಹುಲ್ ದ್ರಾವಿಡ್‌ ಪ್ರಶಂಸೆ

Published 6 ಫೆಬ್ರುವರಿ 2024, 4:30 IST
Last Updated 6 ಫೆಬ್ರುವರಿ 2024, 4:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಂಗ್ಲೆಂಡ್ ಎದುರು ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ಯುವ ಆಟಗಾರರ ಪ್ರದರ್ಶನದಿಂದ ಸಂತಸವಾಗಿದೆ ಎಂದು ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಹೇಳಿದ್ದಾರೆ.

‘ಸ್ಟಾರ್‌ ಬ್ಯಾಟರ್‌’ ವಿರಾಟ್‌ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅನುಭವಿ ಬ್ಯಾಟರ್ ಕೆ.ಎಲ್‌.ರಾಹುಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ವಿಶಾಖ ಪಟ್ಟಣದ ಟೆಸ್ಟ್‌ಗೆ ಲಭ್ಯರಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ, 22 ವರ್ಷದ ಯಶಸ್ವಿ ಜೈಸ್ವಾಲ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ, 24 ವರ್ಷದ ಶುಭಮನ್ ಗಿಲ್ ಅವರ ಶತಕದಿಂದ ಭಾರತ, ಇಂಗ್ಲೆಂಡ್‌ಗೆ ಸವಾಲಿನ ಗುರಿ ಎಸೆದಿತ್ತು. ‘ಯುವ ಆಟಗಾರರು ಈ ರೀತಿ ಸ್ಪಂದಿಸಿರುವುದನ್ನು ನೋಡುವಾಗ ಖುಷಿಯಾಗುತ್ತದೆ’ ಎಂದು ಅವರು ವರದಿಗಾರರಿಗೆ ತಿಳಿಸಿದರು.

ಮೂರನೇ ಟೆಸ್ಟ್‌ಗೆ ಎರಡು ದಿನಗಳಲ್ಲಿ ತಂಡ ಪ್ರಕಟಿಸುವ ಸಾಧ್ಯತೆಯಿದೆ. ಆದರೆ ಕೊಹ್ಲಿ ಅವರು ತಂಡಕ್ಕೆ ಮರಳುವ ಬಗ್ಗೆ ಕೇಳಿದಾಗ ಖಚಿತವಾಗಿ ಏನನ್ನೂ ಹೇಳಲಿಲ್ಲ. ‘ಮುಂದಿನ ಮೂರು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದ ಬಳಿಕ ಈ ಬಗ್ಗೆ ಆಯ್ಕೆಗಾರರನ್ನೇ ಕೇಳಬಹುದು’ ಎಂದು ಹೇಳಿದರು.

ಇಂಗ್ಲೆಂಡ್‌ನ ಆಕ್ರಮಣಕಾರಿ ಶೈಲಿಯ ‘ಬಾಝ್‌ಬಾಲ್‌’ ಆಟದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಅವರಿಗೆ ಇದರಿಂದ ಎಷ್ಟು ಅನುಕೂಲವಾಗಿದೆ ಎಂಬುದು ತಿಳಿದಿಲ್ಲ. ಆದರೆ ಅವರು ಒಳ್ಳೆಯ ಕ್ರಿಕೆಟ್‌ ಆಡುತ್ತಿದ್ದಾರೆ. ತಂಡದ ಆಡಳಿತ, ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ ಕೇಳುವುದಿಲ್ಲ. ಆದರೆ, ಟೆಸ್ಟ್‌ ಪಂದ್ಯದಲ್ಲಿ ನಿರ್ದಿಷ್ಟ ಪಿಚ್‌ವೊಂದು ದಿನಕಳೆದಂತೆ ಹೇಗೆ ವರ್ತಿಸುತ್ತದೆ ಎಂಬುದನ್ನು ಹೇಳುವುದು ಕಷ್ಟ’ ಎಂದರು.

ಸಮತೋಲನ ಹೊಂದಿರುವ ಬೌಲಿಂಗ್‌ ದಾಳಿಯನ್ನು ಹೊಂದಿರುವ ಕಾರಣ, ಸ್ಪಿನ್ನರ್‌ ಗಳಿಗೆ ನೆರವಾಗುವ ಪಿಚ್‌ಗಳನ್ನು ಭಾರತ ಕೇಳಬೇಕಾದ ಅಗತ್ಯವಿಲ್ಲ ಎಂದು ದ್ರಾವಿಡ್ ಜೊತೆ ಹಲವು ವರ್ಷ ಆಡಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT