ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಅಂತಿಮ ಟೆಸ್ಟ್‌ಗೂ ರಾಹುಲ್ ಅಲಭ್ಯ? ಪಡಿಕ್ಕಲ್‌ಗೆ ಅವಕಾಶ ಸಾಧ್ಯತೆ

Published 28 ಫೆಬ್ರುವರಿ 2024, 15:17 IST
Last Updated 28 ಫೆಬ್ರುವರಿ 2024, 15:17 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟರ್ ಕೆ.ಎಲ್‌.ರಾಹುಲ್ ಅವರು ಬಲತೊಡೆಯ ನೋವಿನಿಂದ ಪೂರ್ಣ ಗುಣಮುಖರಾಗದ ಕಾರಣ, ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆಯಿಲ್ಲ.

ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ರಾಹುಲ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಬಿಸಿಸಿಐ ಪ್ರಕಾರ ಅವರು ರಾಜಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ಗೆ ಮೊದಲು ಶೇ 90ರಷ್ಟು ಗುಣಮುಖರಾಗಿದ್ದರು. ತೊಡೆಯ ನೋವಿಗೆ ತಜ್ಞವೈದ್ಯರ ಸಲಹೆ ಪಡೆಯಲು ರಾಹುಲ್ ಈಗ ಲಂಡನ್‌ಗೆ ತೆರಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಈಗಾಗಲೇ ಸರಣಿ ಗೆದ್ದುಕೊಂಡಿರುವ ಭಾರತ ಅವರನ್ನು ಕೊನೆಯ ಟೆಸ್ಟ್‌ನಲ್ಲಿ ಆಡಿಸುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ. ಮಾರ್ಚ್‌ 7ರಂದು ಧರ್ಮಶಾಲಾದಲ್ಲಿ ಈ ಟೆಸ್ಟ್‌ ನಡೆಯಲಿದೆ.

ಐಪಿಎಲ್‌ ಶುರುವಾಗುವ ವೇಳೆಗೆ ಫಿಟ್ನೆಸ್‌ ಪಡೆದುಕೊಳ್ಳುವ ಅಗತ್ಯ ಅವರಿಗೆ ಎದುರಾಗಿದೆ. ಲಖನೌ ಸೂಪರ್‌ಜೈಂಟ್ಸ್‌ ತಂಡದ ನೇತೃತ್ವ ವಹಿಸಿರುವ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆಗೆ ಐಪಿಎಲ್‌ನ ಪ್ರದರ್ಶನವೂ ಗಣನೆಗೆ ಬರುವ ಸಾಧ್ಯತೆಯಿದೆ.

‘ಮುಂದೆ ಸಾಕಷ್ಟು ಕ್ರಿಕೆಟ್‌ ಆಡಲು ಇದೆ– ಐಪಿಎಲ್‌ ನಂತರ ಟಿ20 ಟೂರ್ನಿಗೆ ಆಯ್ಕೆಯ ರೇಸ್‌ನಲ್ಲಿ ರಾಹುಲ್ ಇದ್ದಾರೆ. ನಂತರ ವರ್ಷದ ಕೊನೆಗೆ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಸರಣಿ ಇದೆ. ಹೀಗಾಗಿ ಅವರಿಗೆ ಚೇತರಿಕೆಗೆ ಇನ್ನಷ್ಟು ಸಮಯ ನೀಡುವುದು ಒಳಿತು’ ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.

ತೊಡೆನೋವಿನ ಸಮಸ್ಯೆಯಿಂದಾಗಿಯೇ ಅವರು ಕಳೆದ ವರ್ಷವೂ ಸುಮಾರು ನಾಲ್ಕು ತಿಂಗಳು ತಂಡದಿಂದ ಹೊರಗಿರಬೇಕಾಯಿತು.

‍ಪಡಿಕ್ಕಲ್‌ಗೆ ಅವಕಾಶ?

ಅಂತಿಮ ಟೆಸ್ಟ್‌ನಲ್ಲಿ ರಜತ್‌ ಪಾಟೀದಾರ್ ಬದಲು ದೇವದತ್ತ ಪಡಿಕ್ಕಲ್ ಆಡುವ ಸಾಧ್ಯತೆಯಿದೆ. ಮಧ್ಯಪ್ರದೇಶದ ರಜತ್, ಆರು ಇನಿಂಗ್ಸ್‌ಗಳಿಂದ 63 ರನ್‌ಗಳನ್ನಷ್ಟೇ ಗಳಿಸಿದ್ದಾರೆ.

ಕಾರ್ಯಭಾರತ ನಿರ್ವಹಣೆ ಭಾಗವಾಗಿ ನಾಲ್ಕನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್ ಬೂಮ್ರಾ ಅವರು ಅಂತಿಮ ಟೆಸ್ಟ್‌ಗೆ ಮರಳುವ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT