ಗುರುವಾರ , ಮಾರ್ಚ್ 4, 2021
18 °C

ರಣಜಿ ಕ್ರಿಕೆಟ್ ಫೈನಲ್: ಜಯದೇವ ಕೈಚಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಎಡಗೈ ಮಧ್ಯಮವೇಗಿ ಜಯದೇವ ಉನದ್ಕತ್ ಕೈಚಳಕ ಮತ್ತು ಚಾಣಾಕ್ಷ ನಾಯಕತ್ವದ ಬಲದಿಂದ ಸೌರಾಷ್ಟ್ರ ತಂಡವು ಭಾನುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌ನಲ್ಲಿ ಉತ್ತಮ ಆರಂಭ ಮಾಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ವಿದರ್ಭ ತಂಡವು ದಿನದಾಟದ ಅಂತ್ಯಕ್ಕೆ90 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 ರನ್‌ ಗಳಿಸಿದೆ. ಅಕ್ಷಯ್ ಕರ್ಣವೀರ್ (ಬ್ಯಾಟಿಂಗ್ 31)ಮತ್ತು ಅಕ್ಷಯ್ ವಾಖರೆ ಕ್ರೀಸ್‌ನಲ್ಲಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಇನಿಂಗ್ಸ್‌ನ ಆರಂಭದಲ್ಲಿಯೇ ಪೆಟ್ಟು ನೀಡಿದ್ದ ಜಯದೇವ ತಮ್ಮ ತಂತ್ರವನ್ನು ಇಲ್ಲಿಯೂ ಮುಂದುವರಿಸಿದರು.

ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿರುವ ವಿದರ್ಭ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಂಜಯ್ ರಾಮಸ್ವಾಮಿ (2ರನ್) ಮತ್ತು ಸಾವಿರ ರನ್‌ಗಳ ಸರದಾರ ವಾಸೀಂ ಜಾಫರ್‌ (23 ರನ್)ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳಿಸಿದರು.  ಜಾಫರ್‌ಗೂ ಮುನ್ನ ನಾಯಕ ಫಜಲ್ ರನ್‌ ಔಟ್‌ ಆಗಿದ್ದರು. ಇದರಿಂದಾಗಿ 60 ರನ್‌ಗಳಿಗೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ತಂಡವು ಸಂಕಷ್ಟದಲ್ಲಿತ್ತು.

ಈ ಹಂತದಲ್ಲಿ ಜೊತೆಗೂಡಿದ ಮೋಹಿತ್ ಕಾಳೆ (35; 86 ಎಸೆತ) ಮತ್ತು ಅಕ್ಷಯ್ ವಾಡಕರ್ (45; 115ಎಸೆತ) ನಾಲ್ಕನೇ ವಿಕೆಟ್‌ಗೆ 46 ರನ್‌ ಸೇರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಸೌರಾಷ್ಟ್ರದ ಪ್ರೇರಕ್ ಮಂಕಡ್ ಈ ಜೊತೆಯಾಟವನ್ನು ಮುರಿದರು. ಕನ್ನಡಿಗ ಗಣೇಶ್ ಸತೀಶ್ (32 ರನ್) ತುಸು ಪ್ರತಿರೋಧ ತೋರಿದರು. ಉತ್ತಮ ಹೊಡೆತಗಳನ್ನು ಆಡಿದರು. ಆದರೆ ದೊಡ್ಡ ಇನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ. ಆದಿತ್ಯ ಸರ್ವಟೆ ಸೊನ್ನೆ ಸುತ್ತಿದರು.

ಚೇತನ್ ಸಕಾರಿಯಾ (14–7–13–1) ಎಲ್ಲರಿಗಿಂತ ಹೆಚ್ಚು ಬಿಗುವಿನ ದಾಳಿ ನಡೆಸಿದರು. ಅವರು, ಪ್ರೇರಕ್, ಧರ್ಮೇಂದ್ರಸಿಂಹ ಜಡೇಜ ಮತ್ತು ಕಮಲೇಶ್ ಮಕ್ವಾನ ಅವರು ತಲಾ ಒಂದು ವಿಕೆಟ್ ಗಳಿಸಿದರು. ಇದರಿಂದಾಗಿ ‘ಹಾಲಿ ಚಾಂಪಿಯನ್‍’ ತಂಡದ ರನ್‌ ಗಳಿಕೆಯ ವೇಗ ಕುಸಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು