ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಬಳಗಕ್ಕೆ ಶುಭಾರಂಭದ ವಿಶ್ವಾಸ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಇಂದಿನಿಂದ; ಕರ್ನಾಟಕ –ಸರ್ವಿಸಸ್ ಹಣಾಹಣಿ
Last Updated 12 ಡಿಸೆಂಬರ್ 2022, 18:47 IST
ಅಕ್ಷರ ಗಾತ್ರ

ಬೆಂಗಳೂರು: ವಿಪರೀತ ಮಳೆ ಮತ್ತು ಚಳಿಯಲ್ಲಿ ನಡುಗುತ್ತಿರುವ ’ಸಿಲಿಕಾನ್ ಸಿಟಿ‘ಯಲ್ಲಿ ಮಂಗಳವಾರದಿಂದ ದೇಶಿ ಕ್ರಿಕೆಟ್‌ ಗಾಳಿಯೂ ಬೀಸಲಿದೆ.

ರಣಜಿ ಟ್ರೋಫಿ ಟೂರ್ನಿಯ ಸಿ ಗುಂಪಿನ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಲಿದೆ. ಆತಿಥೇಯ ಕರ್ನಾಟಕ ಮತ್ತು ಸರ್ವಿಸಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಹಣಾಹಣಿ ನಡೆಸುತ್ತಿರುವುದು ಇದೇ ಮೊದಲ ಸಲ.

2014–15ರಲ್ಲಿ ವಿನಯಕುಮಾರ್ ನಾಯಕತ್ವದ ಬಳಗವು ಚಾಂಪಿಯನ್ ಆದ ನಂತರ ಕರ್ನಾಟಕ ತಂಡವು ಇಲ್ಲಿಯವರೆಗೂ ಟ್ರೋಫಿ ಜಯಿಸಿಲ್ಲ.

ಆಗಿನ ವಿಜಯದಲ್ಲಿ ಪ್ರಮುಖ ಕಾಣಿಕೆ ನೀಡಿದ್ದ ಬ್ಯಾಟರ್ ಮಯಂಕ್ ಅಗರವಾಲ್ ಈ ಬಾರಿ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ಬಹುಕಾಲದ ಗೆಳೆಯರಾದ ಮನೀಷ್ ಪಾಂಡೆ, ಆರ್. ಸಮರ್ಥ್ ಅವರಂತಹ ಅನುಭವಿಗಳು ತಂಡದಲ್ಲಿದ್ದಾರೆ. ಅಲ್ಲದೇ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ನಿಕಿನ್ ಜೋಸ್, ಕೆ.ವಿ. ಸಿದ್ಧಾರ್ಥ್ ಕೂಡ ಬಳಗದಲ್ಲಿದ್ದಾರೆ. ಸ್ವತಃ ಮಯಂಕ್ ಲಯ ಕಂಡುಕೊಂಡರೆ ಉತ್ತಮ ಬ್ಯಾಟಿಂಗ್ ಪಡೆ ಸಿದ್ಧವಾಗುವುದರಲ್ಲಿ ಅನುಮಾನವಿಲ್ಲ. ಆದರೆ ದೇವದತ್ತ ಪಡಿಕ್ಕಲ್ ಅವರ ಕೊರತೆ ಕಾಡಬಹುದು.

’ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ನಮ್ಮ ಸಾಮರ್ಥ್ಯವನ್ನು ಸಂಪೂರ್ಣ ಪಣಕ್ಕೊಡ್ಡಿ ಆಡಿದರೆ ಉತ್ತಮ ಫಲಿತಾಂಶಗಳು ಬರುವುದರಲ್ಲಿ ಸಂಶಯವಿಲ್ಲ. ಈ ವರ್ಷದಿಂದ ರಣಜಿ ಟೂರ್ನಿಯು ಹಳೆಯ ಮಾದರಿಯಲ್ಲಿ ನಡೆಯುತ್ತಿರುವುದು ಆಶಾದಾಯಕವಾಗಿದೆ. ತವರು ಮತ್ತು ಎದುರಾಳಿ ತಂಡಗಳ ತವರಿನಂಗಳಲ್ಲಿ ನಾವು ಆಡಬೇಕಿರುವುದು ಕೂಡ ಸವಾಲಿನದ್ದು. ವಿಭಿನ್ನ ಪರಿಸ್ಥಿತಿ ಮತ್ತು ವಾತಾವರಣಗಳಿಗೆ ಹೊಂದಿಕೊಂಡು ಆಡಬೇಕಿದೆ‘ ಎಂದು ನಾಯಕ ಮಯಂಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದರೆ, ವಿಕೆಟ್‌ಕೀಪಿಂಗ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಳೆದ ಹಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಬಿ.ಆರ್. ಶರತ್ ಮತ್ತು ಶರತ್ ಶ್ರೀನಿವಾಸ್ ಅವರಿಬ್ಬರಿಗೂ ಮತ್ತೊಂದು ಅವಕಾಶ ಲಭಿಸಿದೆ. ಅವರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಬಹುಶಃ ಕೊನೆಯ ಅವಕಾಶವೂ ಆಗಬಹುದು.

ಆದರೆ ಬೌಲಿಂಗ್ ವಿಭಾಗದಲ್ಲಿ ಭರವಸೆ ಇದೆ. ಯುವ ವೇಗಿ ವಿದ್ವತ್ ಕಾವೇರಪ್ಪ ವೈಶಾಖ ವಿಜಯಕುಮಾರ್ ಭರವಸೆ ಮೂಡಿಸಿದ್ದಾರೆ. ಅನುಭವಿ ಸ್ಪಿನ್–ಆಲ್‌ರೌಂಡರ್‌ ಶ್ರೇಯಸ್ ಗೋಪಾಲ್ ಉತ್ತಮ ಲಯದಲ್ಲಿದ್ದಾರೆ. ಕೆ. ಗೌತಮ್ ಮತ್ತು ಪ್ರಸಿದ್ಧಕೃಷ್ಣ, ರೋನಿತ್ ಮೋರೆ ತಮ್ಮ ಅನುಭವವನ್ನು ಧಾರೆಯೆರೆದರೆ ಯಶಸ್ಸು ಲಭಿಸುವುದರಲ್ಲಿ ಅನುಮಾನವಿಲ್ಲ.

ಸಿ ಗುಂಪಿನಲ್ಲಿ ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ ತಂಡಗಳಿಂದ ಕಠಿಣ ಪೈಪೋಟಿ ಎದುರಾಗಬಹುದು. ಉಳಿದ ನಾಲ್ಕು ತಂಡಗಳ ಮುಂದೆ ಕರ್ನಾಟಕವೇ ಬಲಿಷ್ಠವಾಗಿದೆ. ಆದ್ದರಿಂದ ನಾಕೌಟ್ ಹಾದಿ ಸುಲಭವಾಗಬಹುದು.

ಆದರೆ ಕಳೆದ ಕೆಲ ವರ್ಷಗಳಿಂದ ಎಲ್ಲ ಮಾದರಿಯ ದೇಶಿ ಟೂರ್ನಿಗಳಲ್ಲಿ ಕರ್ನಾಟಕವು ನಾಕೌಟ್ ಹಂತಗಳಲ್ಲಿಯೇ ಎಡವುತ್ತಿದೆ. ಲೀಗ್ ಹಂತದಲ್ಲಿ ಮಿಂಚಿದ ಆಟಗಾರರು ಕ್ವಾರ್ಟರ್‌, ಸೆಮಿಫೈನಲ್‌ಗಳಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಹೊರಬರಲು ಕೋಚ್ ಪಿ.ವಿ. ಶಶಿಕಾಂತ್ ರೂಪಿಸುವ ತಂತ್ರಗಾರಿಕೆಯೂ ಇಲ್ಲಿ ಪ್ರಮುಖವಾಗಲಿದೆ. ಆದರೆ ಮಂಗಳವಾರ ಮತ್ತು ಬುಧವಾರವೂ ಮಳೆ ಸುರಿಯುವ ಸಾಧ್ಯತೆಗಳಿವೆ. ಆದ್ದ ರಿಂದ ನಾಲ್ಕು ದಿನಗಳಲ್ಲಿ ಎಷ್ಟು ಅವಧಿ ಆಟ ನಡೆಯಲು ಅವಕಾಶ ಸಿಗಲಿದೆ ಎಂಬುದೂ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

‌ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT