ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶಕ್ಕೆ ಚೊಚ್ಚಲ ರಣಜಿ ಕಿರೀಟ: ಮುಂಬೈ ತಂಡಕ್ಕೆ ಮುಖಭಂಗ

41 ಸಲದ ಚಾಂಪಿಯನ್‌ ಮುಂಬೈ ತಂಡಕ್ಕೆ ಮುಖಭಂಗ: ಶುಭಂ ಶರ್ಮಾ, ಕುಮಾರ್ ಕಾರ್ತಿಕೇಯ ಮಿಂಚು
Last Updated 26 ಜೂನ್ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ಆದಿತ್ಯ ಶ್ರೀವಾಸ್ತವ ನಾಯಕತ್ವದ ಮಧ್ಯಪ್ರದೇಶ ತಂಡ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದುಕೊಂಡಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ಮುಂಬೈ ಎದುರು 6 ವಿಕೆಟ್‌ಗಳಿಂದ ಜಯಿಸಿತು. ರಣಜಿ ಟೂರ್ನಿಯಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದ ಮಧ್ಯಪ್ರದೇಶ ಈ ಸಾಧನೆ ಮಾಡಿತು. ತಂಡದ ಎಲ್ಲ ಆಟಗಾರರ ಕಂಗಳೂ ತೇವಗೊಂಡಿದ್ದವು. ಕೋಚ್ ಚಂದ್ರಕಾಂತ್ ಪಂಡಿತ್ ಕೂಡ ಭಾವುಕರಾಗಿದ್ದರು. ಪಿ3 ಗ್ಯಾಲರಿಯಲ್ಲಿ ಸೇರಿದ್ದ ಪ್ರೇಕ್ಷಕರತ್ತ ಸಾಗಿದ ಆಟಗಾರರು, ಟ್ರೋಫಿ ತೋರಿಸಿ ಕೃತಜ್ಞತೆ ಸಲ್ಲಿಸಿದರು. 300ಕ್ಕೂ ಹೆಚ್ಚು ಪ್ರೇಕ್ಷಕರು ಕೂಡ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

1998–99ರಲ್ಲಿ ಬೆಂಗಳೂರಿನಲ್ಲಿಯೇ ಫೈನಲ್ ಆಡಿತ್ತು. ಆಗ ಕರ್ನಾಟಕದ ಎದುರು ಸೋಲನುಭವಿಸಿತ್ತು. ಆದರೆ, ಈ ಬಾರಿ ಶಿಸ್ತು, ಯೋಜನಾಬದ್ಧ ಮತ್ತು ಛಲದ ಆಟದ ಮೂಲಕ ಟ್ರೋಫಿಗೆ ಮುತ್ತಿಡುವಲ್ಲಿ ಮಧ್ಯಪ್ರದೇಶ ಯಶಸ್ವಿಯಾಯಿತು. ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡವು ಗಳಿಸಿದ್ದ 374 ರನ್‌ಗಳಿಗೆ ಉತ್ತರವಾಗಿ ಮಧ್ಯಪ್ರದೇಶ 536 ರನ್‌ ಗಳಿಸಿ 162 ರನ್‌ಗಳ ಮುನ್ನಡೆ ಗಳಿಸಿತ್ತು.

ಶನಿವಾರ ಮಧ್ಯಾಹ್ನ ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ ಕೂಡ ದಿಟ್ಟ ಹೋರಾಟ ನಡೆಸಿತು. ಭಾನುವಾರ ಊಟದ ವಿರಾಮದ ವೇಳೆಗೆ 57.3 ಓವರ್‌ಗಳಲ್ಲಿ 269 ರನ್‌ ಗಳಿಸಿ ಆಲೌಟ್ ಅಯಿತು. ಆದರೆ, ಮಧ್ಯಪ್ರದೇಶ ತಂಡದ ಕುಮಾರ್ ಕಾರ್ತಿಕೇಯ ಸಿಂಗ್ ನಾಲ್ಕು ವಿಕೆಟ್ ಗಳಿಸಿದರು. ಯುವ ಆಟಗಾರ ಸುವೇದ್ ಪಾರ್ಕರ್ (51ರನ್) ಮತ್ತು ಸರ್ಫರಾಜ್ (45; 48ಎ) ಕಾಣಿಕೆ ನೀಡಿದರು. ಆದರೆ, ಯಶಸ್ವಿ ಜೈಸ್ವಾಲ್ ಮತ್ತು ಕೆಳಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರಿಂದ ದೊಡ್ಡ ಗುರಿ ನೀಡುವುದು ಸಾಧ್ಯವಾಗಲಿಲ್ಲ.

ಇದರಿಂದಾಗಿ 108 ರನ್‌ಗಳ ಗುರಿ ಬೆನ್ನಟ್ಟಿದ ಮಧ್ಯಪ್ರದೇಶಕ್ಕೆ ಒತ್ತಡ ಹೇರುವ ಪ್ರಯತ್ನವನ್ನು ಮುಂಬೈ ಬೌಲರ್‌ಗಳು ಮಾಡಿದರು. ಅದರಲ್ಲೂ ಎಡಗೈ ಸ್ಪಿನ್ನರ್ ಶಮ್ಸ್ ಮಲಾನಿ (41ಕ್ಕೆ3) ಪ್ರಯತ್ನ ಫಲ ನೀಡಲಿಲ್ಲ.

ಆದರೆ, ಆರಂಭಿಕ ಬ್ಯಾಟರ್ ಹಿಮಾಂಶು ಮಂತ್ರಿ (37), ಶುಭಂ ಶರ್ಮಾ (30) ಮತ್ತು ರಜತ್ ಪಾಟೀದಾರ್ (ಔಟಾಗದೆ 30) ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

₹ 2 ಕೋಟಿ: ಮಧ್ಯಪ್ರದೇಶ ತಂಡ ₹ 2 ಕೋಟಿ ಹಾಗೂ ಮುಂಬೈ ₹1 ಕೋಟಿ ಬಹುಮಾನ ಪಡೆದುಕೊಂಡವು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್

ಮುಂಬೈ: 374 (127.4 ಓವರ್‌ಗಳಲ್ಲಿ)

ಮಧ್ಯಪ್ರದೇಶ 536 (177.2 ಓವರ್‌ಗಳಲ್ಲಿ)

ಎರಡನೇ ಇನಿಂಗ್ಸ್

ಮುಂಬೈ 269 (57.3 ಓವರ್‌ಗಳಲ್ಲಿ)

(ಶನಿವಾರ:22 ಓವರ್‌, 2 ವಿಕೆಟ್‌ಗೆ 113)

ಅರ್ಮಾನ್ ಬಿ ಗೌರವ್ 37 (40ಎ, 4X3),ಸುವೇದ್ ಬಿ ಕುಮಾರ್ 51 (58ಎ, 4X3, 6X1), ಸರ್ಫರಾಜ್ ಸಿ ಅನುಭವ್ ಬಿ ಪಾರ್ಥ್ 45 (48ಎ, 4X2, 6X1), ಜೈಸ್ವಾಲ್ ಸಿ ರಜತ್ ಬಿ ಕುಮಾರ್ 1 (2ಎ), ಶಮ್ಸ್ ಮಲಾನಿ ರನ್‌ಔಟ್/ಸಾರಾಂಶ್ 17 (24ಎ, 4X1), ತನುಷ್ ಸಿ ಹಿಮಾಂಶು ಬಿ ಕುಮಾರ್ 11 (24ಎ), ತುಷಾರ್ ರನ್‌ಔಟ್ 7 (25ಎ), ಮೋಹಿತ್ ಎಲ್‌ಬಿಡಬ್ಲ್ಯು ಬಿ ಪಾರ್ಥ್‌ 15 (25ಎ, 6X1), ಧವಳ್ ಔಟಾಗದೆ 2 (15ಎ)

ಇತರೆ: 14 (ಬೈ 4, ಲೆಗ್‌ಬೈ 4, ವೈಡ್ 6)

ವಿಕೆಟ್ ಪತನ: 3–139 (ಅರ್ಮಾನ್ ಜಾಫರ್; 25.6), 4–192 (ಸುವೇದ್ ಪಾರ್ಕರ್; 34.1), 5–198 (ಯಶಸ್ವಿ ಜೈಸ್ವಾಲ್; 34.5), 6–232 (ಶಮ್ಸ್‌ ಮಲಾನಿ;41.5), 7–236 (ಸರ್ಫರಾಜ್ ಖಾನ್; 43.3), 8–250 (ತನುಷ್ ಕೋಟ್ಯಾನ್; 50.1), 9–252 (ತುಷಾರ್ ದೇಶಪಾಂಡೆ; 52.1), 10–269 (ಮೋಹಿತ್ ಅವಸ್ತಿ; 57.3)

ಬೌಲಿಂಗ್‌: ಕುಮಾರ್ ಕಾರ್ತಿಕೇಯ ಸಿಂಗ್ 25–3–98–4, ಅನುಭವ್ ಅಗರವಾಲ್ 9–0–53–0, ಗೌರವ್ ಯಾದವ್ 10–0–53–2, ಪಾರ್ಥ್ ಸಹಾನಿ 7.3–0–43–2, ಸಾರಾಂಶ್ ಜೈನ್ 6–0–14–0.

ಮಧ್ಯಪ್ರದೇಶ 4ಕ್ಕೆ 108 (29.5 ಓವರ್)

ಹಿಮಾಂಶು ಬಿ ಶಮ್ಸ್‌ 37 (55ಎ, 4X3), ಯಶ್ ಬಿ ಕುಲಕರ್ಣಿ 1 (3ಎ), ಶುಭಂ ಸಿ ಅರ್ಮಾನ್ ಬಿ ಶಮ್ಸ್‌ 30 (75ಎ, 4X1, 6X1), ಪಾರ್ಥ್ ಸಿ ತನುಷ್ ಬಿ ಶಮ್ಸ್ 5 (7ಎ), ರಜತ್ ಔಟಾಗದೆ 30 (37ಎ, 4X4), ಆದಿತ್ಯ ಔಟಾಗದೆ 1 (2ಎ)

ಇತರೆ: 4 (ಬೈ 4)

ವಿಕೆಟ್ ಪತನ: 1–2 (ಯಶ್ ದುಬೆ; 1.2), 2–54 (ಹಿಮಾಂಶು ಮಂತ್ರಿ; 16.3), 3–66 (ಪಾರ್ಥ್ ಸಹಾನಿ;18.6), 4–101 (ಶುಭಂ ಶರ್ಮಾ; 28.1)

ಬೌಲಿಂಗ್‌: ಶಮ್ಸ್‌ ಮಲಾನಿ 13–0–41–3, ಧವಳ್ ಕುಲಕರ್ಣಿ 3–0–7–1, ತುಷಾರ್ ದೇಶಪಾಂಡೆ 3–1–3–0, ತನುಷ್ ಕೋಟ್ಯಾನ್ 8–0–29–0, ಮೋಹಿತ್ ಅವಸ್ತಿ 2–0–19–0, ಸರ್ಫರಾಜ್ ಖಾನ್ 0.5–0–5–0.

ಪಂದ್ಯಶ್ರೇಷ್ಠ: ಶುಭಂ ಶರ್ಮಾ

ಸರಣಿಶ್ರೇಷ್ಠ: ಸರ್ಫರಾಜ್ ಖಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT