ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಸಂಯಮಿ ಬೆಳಗಾವಿ ಹುಡುಗ ರೋನಿತ್ ಮೋರೆ ಸಾಧನೆ

Last Updated 6 ಜನವರಿ 2019, 19:30 IST
ಅಕ್ಷರ ಗಾತ್ರ

‘ಟಾಸ್ ಬೀಳುವವರೆಗೂ ನಾನು ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತೇನೆ’– ಬೆಳಗಾವಿ ಹುಡುಗ ರೋನಿತ್ ಮೋರೆ ಹೀಗೆ ಹೇಳಲು ಅಸಂಖ್ಯ ಕಾರಣಗಳು ಸಿಗುತ್ತವೆ.

2012ರ ನವೆಂಬರ್‌ನಲ್ಲಿ ಮೀರತ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ ರಣಜಿ ಪಂದ್ಯಾವಳಿಗೆ ಅವರು ಕಾಲಿಟ್ಟದ್ದು. ಅಂದಿನಿಂದ ಇದುವರೆಗೆ ಆಡಲು ಸಾಧ್ಯವಾಗಿರುವುದು ಬರೀ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ (ಆ ಪೈಕಿ ಈ ಋತುವಿನ ರಣಜಿ ಪಂದ್ಯಗಳೇ ನಾಲ್ಕು). ಆದರೆ, ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ, ಭರವಸೆಯ ಬೆಳಕು ಕಂಡೀತು. ಅಷ್ಟೂ ಪಂದ್ಯಗಳಿಂದ ಅವರು 56 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಮೂರು ಸಲ 4 ವಿಕೆಟ್‌ಗಳ, ನಾಲ್ಕು ಸಲ 5 ವಿಕೆಟ್‌ಗಳ ಗುಚ್ಛ ಅವರ ಖಾತೆಗೆ ಸೇರಿರುವುದೂ ಆಸಕ್ತಿಕರ.

ಕಳೆದ ಏಳೆಂಟು ವರ್ಷಗಳಲ್ಲಿ ವಿನಯ್‌ಕುಮಾರ್‌ ನೇತೃತ್ವದ ಕರ್ನಾಟಕ ಬೌಲಿಂಗ್‌ ಪಡೆ ಸ್ಥಿರ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ
ವಿಷಯವೇನೋ ಸರಿ. ಅದರ ನೆರಳಿನಲ್ಲಿ ಕುಳಿತೇ ರೋನಿತ್ ತರಹದ ಪ್ರತಿಭಾವಂತರು ಅವಕಾಶದ ಎಳೆಬಿಸಿಲಿಗಾಗಿ ಕಾಯುವುದನ್ನೂ ನಾವು ಗಮನಿಸಬೇಕು. ಅಭಿಮನ್ಯು ಮಿಥುನ್, ಅರವಿಂದ್ ಕೂಡ ವಿನಯ್‌ ಕುಮಾರ್‌ಗೆ ಸಮರ್ಥ ಸಾಥ್‌ ನೀಡುತ್ತಾ ಬಂದಿದ್ದರು. ಈಗ ಅವರೆಲ್ಲರಲ್ಲಿನ ತಾಳ–ಮೇಳ ಸ್ಥಿರತೆ ತಪ್ಪಿದೆ. ವಿನಯ್‌ಕುಮಾರ್‌ ಗಾಯಗೊಳ್ಳದೇ ಹೋಗಿದ್ದರೆ ಬಹುಶಃ ಈ ರಣಜಿ ಋತುವಿನಲ್ಲಿಯೂ ರೋನಿತ್‌ಗೆ ಈಗ ಸಿಕ್ಕಷ್ಟು ಅವಕಾಶ ಸಿಗುತ್ತಿರಲಿಲ್ಲವೋ ಏನೋ?

18 ಓವರ್‌, 8 ಮೇಡನ್, 48 ರನ್, 5 ವಿಕೆಟ್‌–ಇದು ಛತ್ತೀಸಗಡದ ವಿರುದ್ಧ ಮೊನ್ನೆ ಮುಗಿದ ರಣಜಿ ಪಂದ್ಯದ ಮೊದಲ ಇನಿಂಗ್ಸ್‌ನ ಅವರದ್ದೇ ಬೌಲಿಂಗ್‌ ವಿವರ. ಆರು ವರ್ಷಗಳ ನಂತರವೂ ರೋನಿತ್‌ ಕನಸು ಕಾಣುವುದನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಬೌಲಿಂಗ್‌ ವಿವರದಲ್ಲಿನ ಜಿಗಿತವೇ ಕನ್ನಡಿ ಹಿಡಿಯುತ್ತದೆ.

ಇದೇ ವರ್ಷ ನವೆಂಬರ್ ಕೊನೆಯಲ್ಲಿ ಮುಂಬೈ ಎದುರು ನಡೆದ ರಣಜಿ ಪಂದ್ಯದಲ್ಲಿ ಐದು ವಿಕೆಟ್‌ಗಳ ಗುಚ್ಛವನ್ನು ಬುಟ್ಟಿಗೆ ಹಾಕಿಕೊಳ್ಳುವ ಮೊದಲು ರೋನಿತ್ ಅಂಥದ್ದೇ ಸಾಧನೆ ಮಾಡಲು ಅವಕಾಶ ಸಿಕ್ಕಿದ್ದು ಯಾವಾಗ ಎಂದು ನೋಡಿದರೆ, 2013ರಲ್ಲಿ ಎಂಬ ಅಚ್ಚರಿಯ ಸಂಗತಿ ಗೊತ್ತಾದೀತು. ಹರಿಯಾಣ ತಂಡದ ವಿರುದ್ಧ ಆಗ ಅವರು ಐದು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಮುಂಬೈ ವಿರುದ್ಧ ಅವರು ಮಾಡಿದ ಸಾಧನೆಯನ್ನು ತಂದೆ–ತಾಯಿ ಇಬ್ಬರೂ ಕಣ್ತುಂಬಿಕೊಂಡಿದ್ದು ಈ ಸಾಧಕನ ಖುಷಿಯನ್ನು ಸಹಜವಾಗಿಯೇ ಇಮ್ಮಡಿಗೊಳಿಸಿತ್ತು; ಅದೂ ತನ್ನ ತವರು ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲಿ.

‘ಅವಕಾಶಕ್ಕಾಗಿ ಕಾಯುವುದು ನನಗೆ ಅಭ್ಯಾಸವಾಗಿ ಹೋಗಿದೆ. ಕೊನೆಯ ಕ್ಷಣದಲ್ಲಿ ತಂಡಕ್ಕೆ ಆಯ್ಕೆಯಾಗಿರುವ ಅನೇಕ ಉದಾ
ಹರಣೆಗಳಿವೆ. ಉತ್ತಮ ಬೌಲರ್‌ಗಳು ಇರುವಾಗ ಹೊಸಬರ ಮೇಲೆ ಭರವಸೆ ಇಡುವುದು ಸುಲಭವಲ್ಲ. ತಂಡದ 15 ಆಟಗಾರರಲ್ಲಿ ನಾನು ಒಬ್ಬ ಆಗಿರುತ್ತಿದ್ದುದೇ ಹೆಮ್ಮೆ’ ಎನ್ನುವ ರೋನಿತ್, ತಾಳ್ಮೆಯನ್ನು ಅರೆದು ಕುಡಿದಂತೆ ಮಾತನಾಡುತ್ತಾರೆ.

ಇಷ್ಟದ ನಟಿ ಶ್ರದ್ಧಾ ಕಪೂರ್, ಇಷ್ಟದ ಸಿನಿಮಾ ಪಿ.ಕೆ, ಬಾಲಿವುಡ್‌ ಸಂಗೀತದ ಅಭಿಮಾನಿ–ಎಂದೆಲ್ಲ ತಮ್ಮ ಆಸಕ್ತಿಯನ್ನು ಹಂಚಿ
ಕೊಳ್ಳುವ ರೋನಿತ್‌ ಮೋರೆ, ಇಂಡಿಯನ್‌ ಪ್ರೀಮಿಯರ್‌ಲೀಗ್‌ ಚುಟುಕು ಕ್ರಿಕೆಟ್‌ನಲ್ಲಿಯೂ ಸಾಣೆಗೆ ಒಳಗಾದವರು.

‘ಅವಕಾಶ ಸಿಕ್ಕಾಗ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಬೇಕು’ ಎಂಬ ಅವರದ್ದೇ ಮಾತನ್ನು ಕಣ್ಣಿಗೊತ್ತಿಕೊಂಡಂತೆ ಆಡುತ್ತಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT