ಬುಧವಾರ, ಜನವರಿ 22, 2020
19 °C
ರಣಜಿ ಕ್ರಿಕೆಟ್‌

KAR vs TN: ಕರ್ನಾಟಕ–ತಮಿಳುನಾಡು ಸಮಬಲದ ಹೋರಾಟ: ಬೌಲಿಂಗ್‌ನಲ್ಲೂ ಗೌತಮ್ ಕಮಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಂಡಿಗಲ್: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಸಮಬಲದ ಹೋರಾಟ ನಡೆಸಿವೆ. ಮೊದಲ ಇನಿಂಗ್ಸ್‌ನಲ್ಲಿ ಕರುಣ್‌ ನಾಯರ್‌ ಬಳಗ ಕಲೆ ಹಾಕಿದ್ದ 336 ರನ್‌ಗಳಿಗೆ ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿರುವ ತಮಿಳುನಾಡು, 4 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿದೆ. ಹೀಗಾಗಿ ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಎರಡೂ ತಂಡಗಳಿಗೆ ಸಮಾನ ಅವಕಾಶವಿದೆ.

ಇಲ್ಲಿನ ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕೆ.ಗೌತಮ್‌ ಬೌಲಿಂಗ್‌ನಲ್ಲಿಯೂ ಕಮಾಲ್‌ ಮಾಡಿದರು. ಮೊದಲ ವಿಕೆಟ್‌ಗೆ 81 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ತಮಿಳುನಾಡು ತಂಡದ ಆರಂಭಿಕ ಜೋಡಿಯನ್ನು ಅವರು ಪೆವಿಲಿಯನ್‌ಗೆ ಅಟ್ಟಿದರು. 74 ಎಸೆತಗಳಲ್ಲಿ 32 ರನ್‌ ಗಳಿಸಿದ್ದ ಮುರುಳಿ ವಿಜಯ್‌ ಹಾಗು 75 ಎಸೆತಗಳಲ್ಲಿ 47 ರನ್ ಕಲೆಹಾಕಿದ್ದ ಅಭಿನವ್‌ ಮುಕುಂದ್‌ ತಂಡದ ಮೊತ್ತ 82 ಆಗುವುದರೊಳಗೆ ಔಟಾದರು.

ಇದನ್ನೂ ಓದಿ: ಪವನ್–ಪಡಿಕ್ಕಲ್ ಅರ್ಧಶತಕ: ಸಾಧಾರಣ ಮೊತ್ತದತ್ತ ಕರ್ನಾಟಕ

ಬಳಿಕ ಬಂದ ನಾಯಕ ವಿಜಯ್‌ ಶಂಕರ್‌ (12) ಹೆಚ್ಚು ಹೊತ್ತು ನಿಲ್ಲಲು ಬಿಡದ ಗೌತಮ್‌, ಮೊದಲ ಮೂರೂ ವಿಕೆಟ್‌ಗಳನ್ನು ಕಬಳಿಸಿ ಸಂಭ್ರಮಿಸಿದರು. ತಾಳ್ಮೆಯಿಂದ ಬ್ಯಾಟ್‌ ಬೀಸುತ್ತಿದ್ದ ಬಾಬಾ ಅಪರಾಜಿತ್ (32) ವಿಕೆಟ್‌ ಪಡೆದ ರೋನಿತ್‌ ಮೋರೆ, ಹೋರಾಟವನ್ನು ಸಮಬಲಗೊಳಿಸಿದರು.

ಸದ್ಯ ಎರಡನೇ ದಿನದಾಟ ಮುಕ್ತಾಯವಾಗಿದ್ದು, ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಇನಿಂಗ್ಸ್‌ ಮುನ್ನಡೆ ಸಾಧಿಸಲು ಉಳಿದಿರುವ 6 ವಿಕೆಟ್‌ಗಳಿಂದ 171ರನ್‌ ಗಳಿಸಬೇಕಿದೆ. ಅನುಭವಿ ದಿನೇಶ್‌ ಕಾರ್ತಿಕ್‌ (23) ಹಾಗೂ ಎನ್‌.ಜಗದೀಶನ್‌ (6) ಕ್ರೀಸ್‌ನಲ್ಲಿದ್ದಾರೆ.

ಇದನ್ನೂ ಓದಿ: ಇನಿಂಗ್ಸ್ ಕೊನೆಯಲ್ಲಿ ಗೌತಮ್ ಮಿಂಚು; ಕರ್ನಾಟಕ 336ಕ್ಕೆ ಆಲೌಟ್

ಸಂಕ್ಷಿಪ್ತ ಸ್ಕೋರು
ಕರ್ನಾಟಕ ಮೊದಲ ಇನಿಂಗ್ಸ್‌: 336ಕ್ಕೆ ಆಲೌಟ್

ದೇವದತ್ತ ಪಡಿಕ್ಕಲ್ 78 ರನ್‌, ಪವನ್‌ ದೇಶಪಾಂಡೆ 65, ಕೆ. ಗೌತಮ್‌ 51, ಮಯಂಕ್ ಅಗರವಾಲ್‌ 43
ಆರ್‌. ಅಶ್ವಿನ್‌ಗೆ 79ಕ್ಕೆ 4 ವಿಕೆಟ್‌
ಮಣಿಮಾರನ್ ಸಿದ್ದಾರ್ಥ್‌ 47ಕ್ಕೆ 2 ವಿಕೆಟ್‌
ಕೃಷ್ಣಮೂರ್ತಿ ವಿಘ್ನೇಶ್ 55ಕ್ಕೆ 2 ವಿಕೆಟ್‌
ಬಾಬಾ ಅಪರಾಜಿತ್ 24ಕ್ಕೆ 1 ವಿಕೆಟ್

ತಮಿಳುನಾಡು ಮೊದಲ ಇನಿಂಗ್ಸ್‌: 4 ವಿಕೆಟ್‌ಗೆ 165ಕ್ಕೆ ಆಲೌಟ್
ಅಭಿನವ್‌ ಮುಕುಂದ್‌ 47 ರನ್‌,  ಬಾಬಾ ಅಪರಾಜಿತ್ 37, ಮುರುಳಿ ವಿಜಯ್‌ 32 ರನ್‌
ಕೆ. ಗೌತಮ್‌ 61ಕ್ಕೆ 3 ವಿಕೆಟ್‌
ರೋನಿತ್‌ ಮೋರೆ 40ಕ್ಕೆ 1 ವಿಕೆಟ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು