ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಗೆಲುವಿನತ್ತ ಕರ್ನಾಟಕ ಹೆಜ್ಜೆ

ಮನೀಷ್ ಬಳಗದಲ್ಲಿ ಮಿಂಚಿದ ಕರುಣ್‌, ಶ್ರೇಯಸ್‌ ಗೋಪಾಲ್
Last Updated 26 ಫೆಬ್ರುವರಿ 2022, 14:24 IST
ಅಕ್ಷರ ಗಾತ್ರ

ಚೆನ್ನೈ: ದ್ವಿತೀಯ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಭವ ಮುಂದುವರಿಸಿದ ಕರ್ನಾಟಕಕ್ಕೆ ಬೌಲಿಂಗ್‌ನಲ್ಲಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಭರವಸೆ ತುಂಬಿದರು. ಇದರ ಪರಿಣಾಮ ರಣಜಿ ಕ್ರಿಕೆಟ್ ಟೂರ್ನಿಯ ಎಲೀಟ್ ‘ಸಿ’ ಗುಂಪಿನ ಪಂದ್ಯದಲ್ಲಿ ತಂಡ ಗೆಲುವಿನತ್ತ ಹೆಜ್ಜೆ ಇರಿಸಿದೆ.

ಇಲ್ಲಿನ ಐಐಟಿ ಕೆಮ್‌ಪ್ಲಾಸ್ಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವಿಗೆ ಕರ್ನಾಟಕ 508 ರನ್‌ಗಳ ಗುರಿ ನೀಡಿದೆ. ಮೂರನೇ ದಿನದಾಟದ ಮುಕ್ತಾಯಕ್ಕೆ ಜಮ್ಮು ಮತ್ತು ಕಾಶ್ಮೀರ ನಾಲ್ಕು ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದೆ. ಗೆಲುವಿಗೆ ಇನ್ನೂ 319 ರನ್ ಗಳಿಸಬೇಕಾಗಿದೆ.

ಬೃಹತ್‌ ಗುರಿ ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ ನಾಲ್ಕು ರನ್ ಅಗಿದ್ದಾಗ ಕಮ್ರಾನ್ ಇಕ್ಬಾಲ್ ಅವರನ್ನು ವಾಪಸ್ ಕಳುಹಿಸುವ ಮೂಲಕ ಪ್ರಸಿದ್ಧ ಕೃಷ್ಣ ಕರ್ನಾಟಕ ತಂಡದಲ್ಲಿ ಸಂಭ್ರಮ ಮೂಡಿಸಿದರು. ಇಕ್ಬಾಲ್ ಅವರ ಜೋಡಿ ಜತಿನ್ ವಾಧ್ವಾನ್ ಕೂಡ ಬೇಗನೇ ವಾಪಸಾದರು. ಜತಿನ್ ವಿಕೆಟ್ ಉರುಳಿಸಿದ ಶ್ರೇಯಸ್ ಗೋಪಾಲ್ ನಾಲ್ಕನೇ ಕ್ರಮಾಂಕದ ಶುಭಂ ಪುಂದೀರ್ ಅವರ ವಿಕೆಟ್ ಕೂಡ ಪಡೆದರು.

ಚಹಾ ವಿರಾಮದ ವೇಳೆ 73 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಫಜಿಲ್ ರಶೀದ್ ಮತ್ತು ಚೌಹಾಣ್ ಜೊತೆಯಾಟ ರಂಗೇರಿತು. ಇವರಿಬ್ಬರೂ 79 ರನ್ ಸೇರಿಸಿ ಮೊತ್ತವನ್ನು ಮೂರಂಕಿ ಗಡಿ ದಾಟಿಸಿದರು. ಫಜಿಲ್ ಔಟಾದ ನಂತರ ಚೌಹಾಣ್ ಜೊತೆಗೂಡಿದ ಅಬ್ದುಲ್ ಸಮದ್‌ ಅರ್ಧಶತಕದ ಜೊತೆಯಾಟದ ಮೂಲಕ ಪತನವನ್ನು ತಪ್ಪಿಸಿದರು.

ಕರುಣ್ – ಸಿದ್ಧಾರ್ಥ್ ಶತಕದ ಜೊತೆಯಾಟ

ಮೊದಲ ಇನಿಂಗ್ಸ್‌ನಲ್ಲಿ 302 ರನ್ ಗಳಿಸಿರುವ ಕರ್ನಾಟಕ ಎರಡನೇ ದಿನವಾದ ಶುಕ್ರವಾರ ಜಮ್ಮು ಕಾಶ್ಮೀರವನ್ನು ಮೊದಲ ಇನಿಂಗ್ಸ್‌ನಲ್ಲಿ 93 ರನ್‌ಗಳಿಗೆ ಆಲೌಟ್ ಮಾಡಿ ಭಾರಿ ಮುನ್ನಡೆ ಸಾಧಿಸಿತ್ತು. ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 128 ರನ್ ಕಲೆ ಹಾಕಿತ್ತು.

ಶನಿವಾರ ಕರ್ನಾಟಕದ ಒಂದು ವಿಕೆಟ್ ಉರುಳಿಸಲಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ಸಾಧ್ಯವಾಯಿತು. ಶುಕ್ರವಾರ ಕ್ರೀಸ್‌ನಲ್ಲಿದ್ದ ಕರುಣ್ ನಾಯರ್ ಮತ್ತು ಕೆ.ವಿ.ಸಿದ್ಧಾರ್ಥ್ ಅವರು ಅಮೋಘ ಆಟವಾಡಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 113 ರನ್‌ಗಳನ್ನು ಸೇರಿಸಿದರು.

72 ಎಸೆತಗಳಲ್ಲಿ 72 ರನ್ ಗಳಿಸಿದ ಸಿದ್ಧಾರ್ಥ್ ಔಟಾದ ನಂತರವೂ ಕರುಣ್ ನಾಯರ್ ಆಟ ಮುಂದುವರಿಯಿತು. ನಾಯಕ ಮನೀಷ್ ಪಾಂಡೆ ಕ್ರೀಸ್‌ಗೆ ಬಂದ ನಂತರ ರನ್ ಗಳಿಕೆಯ ವೇಗ ಇನ್ನಷ್ಟು ಹೆಚ್ಚಿತ್ತು. ಇಬ್ಬರೂ ಚುರುಕಾಗಿ ಬ್ಯಾಟಿಂಗ್ ಮಾಡಿ 60 ರನ್‌ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT