ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಬ್ಯಾಟಿಂಗ್ ಪಡೆಯೇ ‘ಶಕ್ತಿ’

ಉದ್ಯಾನನಗರಲ್ಲಿ ಕ್ವಾರ್ಟರ್‌ಫೈನಲ್; ಪಾಂಡೆ ಬಳಗಕ್ಕೆ ಉತ್ತರಪ್ರದೇಶ ಸವಾಲು
Last Updated 5 ಜೂನ್ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ರಂಗಿನಲ್ಲಿ ಮಿಂದೆದ್ದು ಬಂದಿರುವ ಹುಡುಗರೀಗ ಬಿಳಿ ಸಮವಸ್ತ್ರ ಧರಿಸಿ ಕಣಕ್ಕಿಳಿಯಲಿದ್ದಾರೆ. ದೇಶಿ ಕ್ರಿಕೆಟ್‌ನ ‘ರಾಜ’ ರಣಜಿ ಟ್ರೋಫಿಯನ್ನು ಗೆಲ್ಲುವ ಕನಸು ಕಂಗಳೊಂದಿಗೆ ಉದ್ಯಾನನಗರಿಯಲ್ಲಿ ತಮ್ಮ ಸಾಮರ್ಥ್ಯ ಮೆರೆಯಲು ಉತ್ಸುಕರಾಗಿದ್ದಾರೆ.

ಸೋಮವಾರದಿಂದ ರಣಜಿ ಟ್ರೋಫಿ ಟೂರ್ನಿಯ ಎಂಟರ ಘಟ್ಟದ ನಾಲ್ಕು ಪಂದ್ಯಗಳಿಗೂ ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆತಿಥ್ಯ ವಹಿಸುತ್ತಿದೆ. ನಗರದ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಮೂರು ಮತ್ತು ಜಸ್ಟ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆಯಲಿದೆ.

ಇದರಲ್ಲಿ ಕರ್ನಾಟಕ ಮನೀಷ್ ಪಾಂಡೆ ನಾಯಕತ್ವದ ತಂಡವು ಉತ್ತರ ಪ್ರದೇಶವನ್ನು ಎದುರಿಸಲಿದೆ. ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡಿ ಬಂದಿರುವ ಮನೀಷ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದ ಮಯಂಕ್ ಅಗರವಾಲ್ ಕರ್ನಾಟಕ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅವರೊಂದಿಗೆ ಆರ್. ಸಮರ್ಥ್ ಮತ್ತು ಕೆ.ವಿ. ಸಿದ್ಧಾರ್ಥ್ ಅವರೂ ಉತ್ತಮ ಲಯದಲ್ಲಿರುವುದು ಉತ್ತರ ಪ್ರದೇಶಕ್ಕಿಂತ ಬಲಿಷ್ಠ ಬ್ಯಾಟಿಂಗ್ ಪಡೆ ಎಂಬುದರಲ್ಲಿ ಸಂಶಯವಿಲ್ಲ.

ಆದರೆ, ಬೌಲಿಂಗ್ ವಿಭಾಗದ ತುಸು ದುರ್ಬಲ. ಮಧ್ಯಮವೇಗಿ ರೋನಿತ್ ಮೋರೆ, ವಿ. ಕೌಶಿಕ್, ಸ್ಪಿನ್ ಜೋಡಿ ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಪ್ರಸಿದ್ಧಕೃಷ್ಣ ಅನುಪಸ್ಥಿತಿಯಲ್ಲಿ ಉತ್ತರಪ್ರದೇಶದ ಪ್ರಿಯಂ ಗರ್ಗ್, ರಿಂಕುಸಿಂಗ್, ಆಕ್ಷದೀಪ್ ನಾಥ್ ಅವರನ್ನು ಕಟ್ಟಿಹಾಕುವ ಸವಾಲು ರಾಜ್ಯ ಬೌಲಿಂಗ್ ಬಳಗದ ಮುಂದಿದೆ.

ಕರ್ನಾಟಕದ ವಿಕೆಟ್‌ಕೀಪಿಂಗ್‌ನಲ್ಲಿಯೂ ಸಮರ್ಥ ಆಟದ ಕೊರತೆ ಇದೆ. ಬಿ.ಆರ್. ಶರತ್ ಮತ್ತು ಶರತ್ ಶ್ರೀನಿವಾಸ್ ತಂಡದಲ್ಲಿದ್ದಾರೆ. ಅವಕಾಶ ಪಡೆದವರು ತಮ್ಮ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಾಮರ್ಥ್ಯ ತೋರಲು ಇದು ಸಕಾಲ.

ಕರ್ನಾಟಕ ತಂಡದಲ್ಲಿ ಕೆ.ಎಲ್. ರಾಹುಲ್ ಲಭ್ಯರಿಲ್ಲ. ಉತ್ತರಪ್ರದೇಶ ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರು ಇಲ್ಲ. ಈ ಮೂವರೂ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿದ್ಧಾರೆ.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್

ಐತಿಹಾಸಿಕ ಕ್ವಾರ್ಟರ್‌ ಫೈನಲ್‌: ರಣಜಿ ಕ್ರಿಕೆಟ್ ಟೂರ್ನಿ ಇತಿಹಾಸದಲ್ಲಿಯೇ ಮೊದಲ ಸಲ ನಾಲ್ಕು ಕ್ವಾರ್ಟರ್‌ಫೈನಲ್ ಪಂದ್ಯಗಳೂ ಒಂದೇ ಊರಿನಲ್ಲಿ ನಡೆಯುತ್ತಿರುವುದು ಇದೇ ಮೊದಲು.

ಆಲೂರಿನ ಕ್ರೀಡಾಂಗಣದಲ್ಲಿ ಮೂರು ಮತ್ತು ಜಸ್ಟ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆಯಲಿದೆ. ಅಲ್ಲದೇ ಎರಡು ಸೆಮಿಫೈನಲ್ ಮತ್ತು ಫೈನಲ್‌ಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆತಿಥ್ಯ ವಹಿಸಲಿದೆ. ಇದೊಂದು ನೂತನ ದಾಖಲೆಯಾಗಿದೆ ಎಂದು ದೇಶಿ ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತ ಚನ್ನಗಿರಿ ಕೇಶವಮೂರ್ತಿ ತಿಳಿಸಿದ್ದಾರೆ.

ತಂಡಗಳು ಕರ್ನಾಟಕ: ಮನೀಷ್ ಪಾಂಡೆ (ನಾಯಕ), ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಮಯಂಕ್ ಅಗರವಾಲ್, ಕೆ.ಸಿ. ಕಾರ್ಯಪ್ಪ, ಶ್ರೇಯಸ್ ಗೋಪಾಲ್, ಅನೀಶ್ವರ್ ಗೌತಮ್, ಶುಭಾಂಗ್ ಹೆಗಡೆ, ಕೃಷ್ಣಪ್ಪ ಗೌತಮ್ ರೋನಿತ್ ಮೋರೆ, ಕರುಣ್ ನಾಯರ್, ಡೆಗಾ ನಿಶ್ವಲ್, ಪ್ರಸಿದ್ಧಕೃಷ್ಣ, ವಿದ್ಯಾಧರ ಪಾಟೀಲ, ಶ್ರೀನಿವಾಸ್ ಶರತ್, ಬಿ.ಆರ್. ಶರತ್, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್, ಮುರಳೀಧರ್ ವೆಂಕಟೇಶ್, ವಿಜಯಕುಮಾರ್ ವೈಶಾಖ್, ವಿದ್ವತ್ ಕಾವೇರಪ್ಪ.

ಉತ್ತರಪ್ರದೇಶ: ಕರಣ್ ಶರ್ಮಾ, ಪ್ರಿಯಂ ಗರ್ಗ್, ಅಲ್ಮಾಸ್ ಶೌಕತ್, ರಿಷಭ್ ಬನ್ಸಲ್, ಹರದೀಪ್ ಸಿಂಗ್, ಜಸ್ಮೇರ್ ಧನಕರ್, ಧ್ರುವ ಜುರೇಲ್, ಆರ್ಯನ್ ಜುಯಾಲ್, ಮಾಧವ್ ಕೌಶಿಕ್, ಪಾರ್ಥ್ ಮಿಶ್ರಾ, ಅಕ್ಷದೀಪ್ ನಾಥ್, ಪ್ರಿನ್ಸ್ ಯಾದವ್, ಅಂಕಿತ್ ರಜಪೂತ್, ಶಾನು ಸೈನಿ, ಸಮರ್ಥ್ ಸಿಂಗ್, ಸಮೀರ್ ಚೌಧರಿ, ಶಿವಂ ಮಾವಿ, ಶಿವಂ ಶರ್ಮಾ, ರಿಂಕು ಸಿಂಗ್, ಯಶ್ ದಯಾಳ್, ಜೀಶನ್ ಅನ್ಸಾರಿ, ಅಕೀಬ್ ಖಾನ್, ಸೌರಭ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT