ಸೋಮವಾರ, ಜನವರಿ 20, 2020
18 °C
ರಣಜಿ: ಉತ್ತರ ಪ್ರದೇಶ 5 ವಿಕೆಟ್‌ಗೆ 232, ಮೊದಲ ದಿನ ಎರಡೂ ತಂಡಗಳಿಗೂ ಸಮಗೌರವ

ಆರ್ಯನ್‌ ಚೊಚ್ಚಲ ಶತಕದ ಸಂಭ್ರಮ

ಪ್ರಮೋದ್‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಸನಿಹ ಹಸಿರುಹಾಸು ಹೊದ್ದು ಸುಂದರವಾಗಿ ಕಂಗೊಳಿಸುತ್ತಿರುವ ಇಲ್ಲಿನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶದ ಯುವಪ್ರತಿಭೆ ಆರ್ಯನ್‌ ಜುಯಾಲ್ ಗಳಿಸಿದ ಸೊಗಸಾದ ಶತಕ ಅಭಿಮಾನಿಗಳ ಮನಸೂರೆಗೊಂಡಿತು!

ಅವರ ಶತಕದ ನೆರವಿನಿಂದ ಇಲ್ಲಿನ ರಾಜನಗರದ ಕೆಎಸ್‌ಸಿಎ ಅಂಗಳದಲ್ಲಿ ಮಂಗಳವಾರ ಅರಂಭವಾದ ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ 90 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 232 ರನ್‌ ಗಳಿಸಿತು.

ಟಾಸ್‌ ಗೆದ್ದ ಉತ್ತರ ಪ್ರದೇಶ ಆರಂಭದಲ್ಲಿ ರನ್ ಗಳಿಸಲು ಅವಸರಿಸದೇ ವಿಕೆಟ್ ಬೀಳದಂತೆಯೂ ಎಚ್ಚರಿಕೆ ವಹಿಸಿತು. ನಂತರ ನಿಧಾನವಾಗಿ ಸುಂದರ ಇನಿಂಗ್ಸ್‌ ಕಟ್ಟಿತು. ಭೋಜನ ವಿರಾಮದ ವೇಳೆಗೆ ಒಂದೇ ವಿಕೆಟ್‌ ಪಡೆದಿದ್ದ ರಾಜ್ಯದ ಬೌಲರ್‌ಗಳು ಬಳಿಕ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಮೂರು ವಿಕೆಟ್‌ಗಳು ಅಭಿಮನ್ಯು ಮಿಥುನ್‌ ಪಾಲಾದವು.

ಚೊಚ್ಚಲ ಶತಕ: 2018ರಲ್ಲಿ ನಡೆದಿದ್ದ 19 ವರ್ಷದ ಒಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡದಲ್ಲಿದ್ದ ಆರ್ಯನ್ ಅವರ ಸೊಗಸಾದ ಬ್ಯಾಟಿಂಗ್‌ ಮೊದಲ ದಿನದಾಟದ ಆಕರ್ಷಣೆಯಾಯಿತು. 18 ವರ್ಷದ ಈ ಬ್ಯಾಟ್ಸ್‌ಮನ್‌ ಆಡುತ್ತಿರುವ ಎರಡನೇ ರಣಜಿ ಪಂದ್ಯವಿದು. ಹೋದ ವಾರವಷ್ಟೇ ಪದಾರ್ಪಣೆ ಮಾಡಿದ್ದರು.

ಆರ್ಯನ್‌ ಅರ್ಧಶತಕ ಗಳಿಸಲು 133 ಎಸೆತಗಳನ್ನು ತೆಗೆದುಕೊಂಡರು. 237 ಎಸೆತಗಳಲ್ಲಿ ಹತ್ತು ಬೌಂಡರಿ ಒಳಗೊಂಡಂತೆ 109 ರನ್‌ ಕಲೆಹಾಕಿ ರಣಜಿಯಲ್ಲಿ ಚೊಚ್ಚಲ ಶತಕ ಗಳಿಸಿದರು.

ಆರ್ಯನ್‌ ಕಲಾತ್ಮಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು ಚೆಂಡನ್ನು ಬೌಂಡರಿ ಗೆರೆಗೆ ಬಾರಿಸಿದಾಗಲೆಲ್ಲ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಕೇಕೆ ಹೊಡೆದು ಸಂಭ್ರಮಿಸಿದರು. 79ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆಂಡನ್ನು ಬೌಂಡರಿ ಬಾರಿಸಿ ಶತಕ ದಾಖಲಿಸಿದಾಗ ವಿದ್ಯಾರ್ಥಿಗಳೆಲ್ಲ ಎದ್ದು ನಿಂತು ಚಪ್ಪಾಳೆಯ ಬಹುಮಾನ ಕೊಟ್ಟಿದ್ದು ವಿಶೇಷವಾಗಿತ್ತು. ಆರ್ಯನ್‌ಗೆ ಉತ್ತಮ ಬೆಂಬಲ ನೀಡಿದ ಮೊಹಮ್ಮದ್ ಸೈಫ್‌ (ಬ್ಯಾಟಿಂಗ್‌ 56) ತಾಳ್ಮೆಯ ಬ್ಯಾಟಿಂಗ್‌ ಕೂಡ ಸ್ಥಳೀಯರ ಮೆಚ್ಚುಗೆಗೆ ಕಾರಣವಾಯಿತು. ಈ ಜೋಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 215 ಎಸೆತಗಳಲ್ಲಿ 109 ರನ್‌ಗಳ ಕಲೆಹಾಕಿತು.

ಆರಂಭದಲ್ಲಿ ನೀರಸ: ಆರಂಭದಿಂದಲೇ ಕರ್ನಾಟಕ ಕರಾರುವಾಕ್ಕಾಗಿ ಬೌಲಿಂಗ್ ಮಾಡಿದರೂ ಬೇಗನೆ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಅಲ್ಮಾಸ್ ಶೌಕತ್‌ (22), ಮಾಧವ ಕೌಶಿಕ್‌ (15) ಮತ್ತು ಅಕ್ಷದೀಪ್‌ ನಾಥ್‌ (9) ಮಾತ್ರ ಬೇಗ ಪೆವಿಲಿಯನ್‌ ಸೇರಿದರು.

ನಾಲ್ಕನೇ ವಿಕೆಟ್ ಜೊತೆಯಾಟ ಮುರಿಯಲು ನಾಯಕ ಕರುಣ್ ನಾಯರ್‌ ಬೌಲಿಂಗ್‌ನಲ್ಲಿ ಮೇಲಿಂದ ಮೇಲೆ ಬದಲಾವಣೆ ಮಾಡಿದರು. ಸ್ಪಿನ್ನರ್‌ಗಳಾದ ಜಗದೀಶ ಸುಚಿತ್‌, ಶ್ರೇಯಸ್ ಗೋಪಾಲ್‌ ಮತ್ತು ಸಾಂದರ್ಭಿಕ ಸ್ಪಿನ್ನರ್‌ ಕರುಣ್‌ ಪ್ರಯತ್ನಿಸಿದರೂ ವಿಕೆಟ್‌ ಬೀಳಲಿಲ್ಲ.84ನೇ ಓವರ್‌ನಲ್ಲಿ ಪ್ರೆಸ್‌ಬಾಕ್ಸ್‌ ತುದಿಯಿಂದ ಬೌಲ್‌ ಮಾಡಿದ ಅನುಭವಿ ವೇಗಿ ಮಿಥುನ್ ಒಂದೇ ಓವರ್‌ನಲ್ಲಿ ಆರ್ಯನ್‌ ಮತ್ತು ರಿಂಕು ಸಿಂಗ್ ಅವರನ್ನು ಔಟ್‌ ಮಾಡಿ, ದಿನದ ಕೊನೆಯಲ್ಲಿ ರಾಜ್ಯ ತಂಡದ ಆಟಗಾರರಲ್ಲಿ ಸಮಾಧಾನ  ಮೂಡಿಸಿದರು. ಇದರಿಂದ ಮೊದಲ ದಿನ ಉಭಯ ತಂಡಗಳು ಸಮಗೌರವ ಹಂಚಿಕೊಂಡವು.

ಸ್ಕೋರ್ ವಿವರ

ಉತ್ತರ ಪ್ರದೇಶ 5ಕ್ಕೆ232 (90 ಓವರ್‌ಗಳಲ್ಲಿ)

ಅಲ್ಮಾಸ್‌ ಶೌಕತ್‌ ಸಿ. ರವಿಕುಮಾರ ಸಮರ್ಥ್‌ ಬಿ. ರೋನಿತ್ ಮೋರೆ 22

ಆರ್ಯನ್‌ ಜುಯಾಲ್‌ ಸಿ. ದೇವದತ್ತ ಪಡಿಕ್ಕಲ್‌ ಬಿ. ಅಭಿಮನ್ಯು ಮಿಥುನ್‌ 109

ಮಾಧವ ಕೌಶಿಕ್‌ ಎಲ್‌ಬಿಡಬ್ಲ್ಯು ಬಿ. ಅಭಿಮನ್ಯು ಮಿಥುನ್‌ 15

ಅಕ್ಷದೀಪ್‌ ನಾಥ್‌ ಬಿ. ಶ್ರೇಯಸ್‌ ಗೋಪಾಲ 9

ಮೊಹಮ್ಮದ್ ಸೈಫ್‌ ಬ್ಯಾಟಿಂಗ್‌ 56

ರಿಂಕು ಸಿಂಗ್ ಸಿ. ಬಿ.ಆರ್‌. ಶರತ್ ಬಿ. ಅಭಿಮನ್ಯು ಮಿಥುನ್‌ 4

ಸೌರಭ್‌ ಕುಮಾರ್ ಬ್ಯಾಟಿಂಗ್‌ 12

(ನೋ ಬಾಲ್‌–1, ವೈಡ್‌–4) 05

ವಿಕೆಟ್ ಪತನ: 1–56 (ಅಲ್ಮಾಸ್‌; 24.5), 2–80 (ಮಾಧವ; 34.5), 3–106 (ಅಕ್ಷದೀಪ್‌; 47.2), 4–215 (ಆರ್ಯನ್‌; 83.1), 5–219 (ರಿಂಕು ಸಿಂಗ್‌; 83.5).

ಬೌಲಿಂಗ್‌: ಮಿಥುನ್‌ 16–1–45–3, ರೋನಿತ್ ಮೋರೆ 18–11–22–1, ಮಥಾಯಿಸ್‌ 14–4–38–0, ಜೆ.ಸುಚಿತ್‌ 23–3–68–0–, ಶ್ರೇಯಸ್‌ ಗೋಪಾಲ 15–1–45–1, ಕರುಣ್‌ ನಾಯರ್‌ 3–1–8–0, ದೇವದತ್ತ ಪಡಿಕ್ಕಲ್‌ 1–0–6–0.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು