ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಸಮರ್ಥ ಶತಕದ ಸೊಬಗು

ಕೆ.ವಿ. ಸಿದ್ಧಾರ್ಥ್ ಅರ್ಧಶತಕ
Last Updated 4 ಫೆಬ್ರುವರಿ 2020, 17:31 IST
ಅಕ್ಷರ ಗಾತ್ರ

ಶಿವಮೊಗ್ಗ: ಆರ್. ಸಮರ್ಥ್ ತಮ್ಮ ಹೆಸರಿಗೆ ತಕ್ಕಂತೆ ಆಡುತ್ತಾ ಬೇರುಬಿಡುತ್ತಾ ಹೋದರೆ, ಮಧ್ಯಪ್ರದೇಶದ ವೇಗದ ಬೌಲರ್‌ಗಳು ಸಾಕಷ್ಟು ಬೆವರು ಬಸಿಯಬೇಕಾಯಿತು.

ಇಲ್ಲಿನ ನವುಲೆ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಾರಂಭವಾದ ರಣಜಿ ಕ್ರಿಕೆಟ್ ಪಂದ್ಯದಲ್ಲಿ ದಿನದಾಟದ ಕೊನೆಗೆ ಕರ್ನಾಟಕ ತಂಡವು 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. 86 ಓವರ್‌ಗಳ ಆಟವನ್ನಷ್ಟೇ ಕಂಡ ದಿನದಲ್ಲಿ ಎದ್ದುಕಂಡವರು ಇಬ್ಬರು–ಸಮರ್ಥ್ ಹಾಗೂ ಸಿದ್ಧಾರ್ಥ್ ಕೆ.ವಿ. ಈ ಸಲದ ರಣಜಿ ಋತುವಿನಲ್ಲಿ ಮೊದಲ ಶತಕ ದಾಖಲಿಸಿದ ಸಮರ್ಥ್, 105 ರನ್ ಗಳಿಸಿದ್ದು (278 ಎಸೆತ, 6 ಬೌಂಡರಿ), ಬುಧವಾರ ಆಟ ಮುಂದುವರಿಸುವರು. 62 ರನ್ (130 ಎಸೆತ, 7 ಬೌಂಡರಿ) ದಾಖಲಿಸಿ ಔಟಾಗದೇ ಉಳಿದಿರುವ ಸಿದ್ಧಾರ್ಥ್ ಅಗತ್ಯ ಸಾಥ್ ನೀಡಿದರು.

ಟಾಸ್ ಸೋತು ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿದ ಆತಿಥೇಯ ತಂಡ ಮೊದಲ ಎರಡು ಅವಧಿಯಲ್ಲಿ ರನ್ ಗಳಿಸಲು ಪರದಾಡಿತು. ಉತ್ತಮ ರೀತಿಯಲ್ಲಿ ಪುಟಿಯುತ್ತಾ ಆಗೀಗ ತಿರುವನ್ನೂ ಪಡೆಯುತ್ತಿದ್ದ ಪಿಚ್‌ನಲ್ಲಿ ಮಧ್ಯಮ ವೇಗದ ಬೌಲರ್‌ಗಳು ಕರಾಮತ್ತು ತೋರಿಸಲು ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ಸಮರ್ಥ್ ತಲೆತಗ್ಗಿಸಿ ಆಡುತ್ತಾ, ಆಗೀಗ ನುಗ್ಗಿಬಂದ ಎಸೆತಗಳ ಸವಾಲನ್ನು ಮೆಟ್ಟಿನಿಂತರು.

ಸಂಯಮದಲ್ಲಿ ಅದ್ದಿ ತೆಗೆದಂತೆ ಕಂಡ ಅವರದ್ದು 388 ನಿಮಿಷದ ಅವಧಿಯ ಟೆಸ್ಟ್ ಕ್ರಿಕೆಟ್‌ನ ರಸದಾಟ. ವಿಕೆಟ್ ಕೀಪರ್ ಹಿಮಾಂಶು ಮಂತ್ರಿ ಕೈಚೆಲ್ಲಿದ ಒಂದು ಕ್ಯಾಚ್‌ನ ಲಾಭವನ್ನು ಚೆನ್ನಾಗಿಯೇ ಪಡೆದರು. ಕುಮಾರ್ ಕಾರ್ತಿಕೇಯನ್ ಸಿಂಗ್ ಬೌಲಿಂಗ್‌ನಲ್ಲಿ ಆ ಜೀವದಾನ ಪಡೆದಾಗ ಸಮರ್ಥ್ ಕೇವಲ 21 ರನ್ ಗಳಿಸಿದ್ದರು. 83 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಕರ್ನಾಟಕ ತುಸು ಏದುಸಿರು ಬಿಡುತ್ತಿದ್ದಾಗ ಸಿದ್ಧಾರ್ಥ್, ಸಂಯಮಮೂರ್ತಿಯಂತಿದ್ದ ಜತೆಗಾರನನ್ನು ಸೇರಿಕೊಂಡರು. ಮೊದಲ ಎಸೆತದಲ್ಲೇ ಅವರೂ ವಿಕೆಟ್ ಕೀಪರ್‌ಗೆ ಕ್ಯಾಚಿತ್ತಿದ್ದರು. ಕುಲದೀಪ್ ಸೇನ್ ಹಾಕಿದ ಆ ಎಸೆತ ನೋಬಾಲ್ ಆಗಿದ್ದರಿಂದ ಆಟ ಮುಂದುವರಿಸುವ ಅವಕಾಶ ಅವರದ್ದಾಯಿತೆನ್ನಿ.

ಮೂರು ತಾಸಿಗೂ ಹೆಚ್ಚು ಅವಧಿಯ ಜತೆಯಾಟದಲ್ಲಿ ಇಬ್ಬರೂ 143 ರನ್ ಸೇರಿಸಿದ್ದಾರೆ.

ದಿನದಾಟದ ಎರಡನೇ ಓವರ್‌ನಲ್ಲೇ ದೇವದತ್ತ ಪಡಿಕ್ಕಲ್ (0) ವಿಕೆಟ್ ಪಡೆದ ಎಡಗೈ ಮಧ್ಯಮ ವೇಗದ ಬೌಲರ್ ರವಿ ಯಾದವ್ ಅಪಾಯಕಾರಿಯಾಗುವ ಲಕ್ಷಣ ಕಾಣಿಸಿತ್ತು. ಅದರೆ, ಸಮರ್ಥ್ ಅದಕ್ಕೆ ಒಂದು ತುದಿಯಲ್ಲಿ ತಡೆಯೊಡ್ಡಿದರು. ಆಕ್ರಮಣವನ್ನು ಮುಂದುಮಾಡಿ ಆಡಲು ಯತ್ನಿಸಿದ ರೋಹನ್ ಕದಂ ಕೂಡ ಲಂಗರುಹಾಕಲು ಆಗಲಿಲ್ಲ. ಗೌರವ್ ಯಾದವ್ ಅವರನ್ನು ಬೇಗ ಪೆವಿಲಿಯನ್‌ಗೆ ಕಳುಹಿಸಿದರು.

ಹಳೆಯ ಲಯಕ್ಕೆ ಕುದುರಿಕೊಳ್ಳುವಂತೆ ಆಡತೊಡಗಿದ ಕರುಣ್ ನಾಯರ್ (22 ರನ್, 2 ಬೌಂಡರಿ), ಕುಲದೀಪ್ ಸೇನ್ ಹೆಣೆದ ಬಲೆಯಲ್ಲಿ ಸಿಲುಕಿದರು. ಅಷ್ಟು ಹೊತ್ತಿಗೆ ಸಮರ್ಥ್ ಜತೆ 43 ರನ್‌ಗಳ ಜತೆಯಾಟ ಬಂದಿತ್ತು.

ಚಹಾ ವಿರಾಮದ ಹೊತ್ತಿಗೆ ಸಮರ್ಥ್ ಬರೀ 60 ರನ್ ಗಳಿಸಿದ್ದರು. ಅಷ್ಟು ಹೊತ್ತಿಗೆ ಸಿದ್ಧಾರ್ಥ್‌ 30ರ ಗಡಿ ದಾಟಿದ್ದು, ಬೌಲರ್‌ಗಳನ್ನು ಕಾಡುವ ವರಸೆಗೆ ಸಾಕ್ಷಿಯಂತಿತ್ತು. ಒಂದೆಡೆ ಕಾಡುವ ಸಮರ್ಥ್. ಇನ್ನೊಂದೆಡೆ ತಲೆಮೇಲೆತ್ತಿ ಹೊಡೆಯಲೂ ಅಳುಕದ ಸಿದ್ಧಾರ್ಥ್‌. ದಿನದಾಟದ ಕೊನೆಗೆ ಸಿದ್ಧಾರ್ಥ್‌ ಕೆಲವು ಕಟ್‌ಗಳ ಮೂಲಕ ಸ್ಪಿನ್ನರ್‌ಗಳಿಗೆ ಬಿಸಿಮುಟ್ಟಿಸಿದರು. ಮಧ್ಯಪ್ರದೇಶದ ನಾಯಕ ಶುಭಂ ಶರ್ಮ ಖುದ್ದು ಬೌಲಿಂಗ್ ಮಾಡಲು ಇಳಿದರೂ ಫಲ ಸಿಗಲಿಲ್ಲ. ಅವರ ತಂಡದ ಗೌರವ್ ಹಾಗೂ ಕುಲದೀಪ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. 35 ಇತರೆ ರನ್‌ಗಳು ಹರಿದದ್ದು ಉಲ್ಲೇಖನೀಯ.

ಸಂಯಮಕ್ಕೆ ಸಂದ ಫಲ: ಸಮರ್ಥ್

ಶಿವಮೊಗ್ಗ: ಮೊದಲ ಎರಡು ಅವಧಿಗಳಲ್ಲಿ ಚೆಂಡು ಆಗೀಗ ಸ್ವಿಂಗ್ ಪಡೆಯುತ್ತಿತ್ತು. ಹೀಗಾಗಿ ರನ್‌ ಗಳಿಸುವ ಗೊಡವೆಗೆ ಹೋಗದೆ ತಲೆತಗ್ಗಿಸಿ ಆಡಬೇಕಾಯಿತು ಎಂದು ಆರ್. ಸಮರ್ಥ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಈ ಸಲದ ರಣಜಿ ಋತುವಿನಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದ ಅವರು ಆರಂಭಿಕ ಆಟಗಾರನಾಗಿ ಶತಕ ಗಳಿಸಿದ್ದು ಸಂಯಮದಿಂದಷ್ಟೆ. ‘ಮುಂಬೈ ತಂಡದ ಎದುರು ಶತಕ ತಪ್ಪಿಸಿಕೊಂಡಿದ್ದೆ. ಅಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಿದ್ದು ಭಿನ್ನ ಅನುಭವ. ಇಲ್ಲಿ ವೇಗದ ಎಸೆತಗಳಿಗೆ ಉತ್ತರ ಕೊಟ್ಟೆ. ಮಾತು ಕಡಿಮೆ, ಆಟದಲ್ಲಿ ದುಡಿಮೆ ಎನ್ನುವ ತತ್ವ ನನ್ನದು. ಈ ಇನಿಂಗ್ಸ್‌ನಲ್ಲಿ ಬರೀ ಆರು ಬೌಂಡರಿಗಳಷ್ಟೇ ಬಂದರೂ ತಲೆಕೆಡಿಸಿಕೊಳ್ಳಲಿಲ್ಲ’ ಎಂದು ಅವರು ಹೇಳಿದರು. ಆಯಾ ಅವಧಿಗೆ ತಕ್ಕಂತೆ ಆಡಬೇಕಷ್ಟೆ ಎನ್ನುವ ಅವರಿಗೆ ತಮ್ಮ ಮೊತ್ತವನ್ನು ಇನ್ನಷ್ಟು ಹಿಗ್ಗಿಸುವ ಉತ್ಸಾಹವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT