ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಹಿಡಿತ ಸಾಧಿಸಿದ ಮುಂಬೈ

Published 11 ಮಾರ್ಚ್ 2024, 16:11 IST
Last Updated 11 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಮುಂಬೈ: ಋತುವಿನುದ್ದಕ್ಕೂ ರನ್‌ಗಳ ಬರಗಾಲ ಎದುರಿಸುತ್ತಿದ್ದ ನಾಯಕ ಅಜಿಂಕ್ಯ ರಹಾನೆ (ಔಟಾಗದೇ 58, 109 ಎಸೆತ) ಸಕಾಲದಲ್ಲಿ ಅಜೇಯ ಅರ್ಧ ಶತಕ ಬಾರಿಸಿದರು. ವಿದರ್ಭ ವಿರುದ್ಧ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನವಾದ ಸೋಮವಾರ ಮುಂಬೈ ತಂಡ 260 ರನ್‌ಗಳ ಉತ್ತಮ ಮುನ್ನಡೆ ಹೊಂದಿದ್ದು ಎಂಟು ವಿಕೆಟ್‌ಗಳನ್ನು ಹೊಂದಿದ್ದು ಮೇಲುಗೈ ಸಾಧಿಸಿದೆ.

ಯುವ ಆಟಗಾರ ಮುಷೀರ್ ಖಾನ್‌ ಅಕ್ರಮಣದ ಆಟ ಬದಿಗಿಟ್ಟು ಸಹನೆಯ 51 ರನ್ (135ಎ, 4x3) ಗಳಿಸಿ ನಾಯಕನ ಜೊತೆ ಅಜೇಯರಾಗಿ ಉಳಿದಿದ್ದಾರೆ. ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 141 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 119 ರನ್‌ಗಳ ಮುನ್ನಡೆ ಪಡೆದಿದ್ದ ಮುಂಬೈ ಈಗ 42ನೇ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

ಮೊದಲ ದಿನ ಆತಿಥೇಯ ತಂಡ 224 ರನ್‌ಗಳ ಸಾಧಾರಣ ಮೊತ್ತಕ್ಕೆ ಉತ್ತರವಾಗಿ 3 ವಿಕೆಟ್‌ಗೆ 31 ರನ್‌ ಗಳಿಸಿದ್ದ ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳಿಗೆ ಪತನಗೊಂಡಿತು. ಒಂದೂ ಉತ್ತಮ ಜೊತೆಯಾಟ ಬರದೇ ತಂಡದ ಆಟ ಸೊರಗಿತು.

ಆರಂಭ ಆಟಗಾರರಾದ ಪೃಥ್ವಿ ಶಾ (11) ಮತ್ತು ಭೂಪೇನ್ ಲಾಲ್ವಾನಿ (18) ಅವರು ಲಂಚ್‌ ಕಳೆದು ಕೆಲವೇ ಹೊತ್ತಿನಲ್ಲಿ ನಿರ್ಗಮಿಸಿದಾಗ ವಿದರ್ಭ ಮತ್ತೊಂದು ಮರುಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿದಂತೆ ಕಂಡಿತು. ಆದರೆ ರಹಾನೆ ಮತ್ತು ಮುಷೀರ್‌ ಮೂರು ಗಂಟೆಗಳಿಗೂ ಹೆಚ್ಚುಕಾಲ ಸಂಯಮದಿಂದ ಆಡಿ ಎದುರಾಳಿಗಳನ್ನು ಹತಾಶಗೊಳಿಸಿದರು. ಹೀಗಾಗಿ ಪಂದ್ಯ ಈಗ ಮುಂಬೈ ಕಡೆಗೆ ವಾಲಿದೆ. ಕೇವಲ 12ರ ಸರಾಸರಿ ಹೊಂದಿದ್ದ ರಹಾನೆ ವಿಶ್ವಾಸ ವೃದ್ಧಿಸುತ್ತಿದ್ದಂತೆ ಋತುವಿನ ಎರಡನೇ ಅರ್ಧ ಶತಕ ದಾಟಿದರು. ಮುಷೀರ್ ಕೂಡ ಎಂದಿನ ಆಕ್ರಮಣದ ಶೈಲಿಗಿಂತ ರಕ್ಷಣೆಗೇ ಒತ್ತು ನೀಡಿದರು. ಇವರಿಬ್ಬರು ಮುರಿಯದ ಮೂರನೇ ವಿಕೆಟ್‌ಗೆ 107 ರನ್ ಸೇರಿಸಿದ್ದಾರೆ.

ಇದಕ್ಕೆ ಮೊದಲು ವಿದರ್ಭ ಆಟಗಾರರಲ್ಲಿ ಯಾರೂ ಬೇರೂರು ಆಡುವ ಛಲ ತೋರಲಿಲ್ಲ. ನೈಟ್‌ ವಾಚ್‌ಮನ್ ಆಗಿದ್ದ ಆದಿತ್ಯ ಠಾಕರೆ (19, 69ಎಸೆತ) ತಮ್ಮ ಕೆಲಸ ನಿಭಾಯಿಸಿದರು. ಯಶ್ ರಾಥೋಡ್‌ (27, 67ಎ) ಅವರದೇ ಗರಿಷ್ಠ ವೈಯಕ್ತಿಕ ಮೊತ್ತ ಎನಿಸಿತು.

ವೇಗದ ಬೌಲರ್ ಧವಳ್ ಕುಲಕರ್ಣಿ 15 ರನ್ನಿಗೆ 3 ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ (32ಕ್ಕೆ3) ಮತ್ತು ತನುಷ್‌ ಕೋಟ್ಯಾನ್ (4.3–1–7–3) ಎದುರಾಳಿ ತಂಡಕ್ಕೆ ಲಂಚ್‌ಗೆ ಮೊದಲು ಹೊಡೆತ ನೀಡಿದರು.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಮುಂಬೈ 224; ವಿದರ್ಭ: 45.3 ಓವರುಗಳಲ್ಲಿ 105 (ಅಥರ್ವ ತೈಡೆ 23, ಯಶ್‌ ರಾಥೋಡ್‌ 27; ಧವಳ ಕುಲಕರ್ಣಿ 13 ಕ್ಕೆ3, ಶಮ್ಸ್ ಮುಲಾನಿ 32ಕ್ಕೆ3, ತನುಷ್‌ ಕೋಟ್ಯಾನ್ 7ಕ್ಕೆ3);

ಎರಡನೇ ಇನಿಂಗ್ಸ್‌: ಮುಂಬೈ: 50 ಓವರುಗಳಲ್ಲಿ 2 ವಿಕೆಟ್‌ಗೆ 141 (ಮುಷೀರ್‌ ಖಾನ್ ಬ್ಯಾಟಿಂಗ್ 51, ಅಜಿಂಕ್ಯ ರಹಾನೆ ಬ್ಯಾಟಿಂಗ್ 58)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT