ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕಕ್ಕೆ ಜಯದ ಕನವರಿಕೆ

ಶತಕ ಸಿಡಿಸಿ ಸಂಭ್ರಮಿಸಿದ ನಿಕಿನ್‌ ಜೋಸ್‌
Published 21 ಜನವರಿ 2024, 18:03 IST
Last Updated 21 ಜನವರಿ 2024, 18:03 IST
ಅಕ್ಷರ ಗಾತ್ರ

ಮೈಸೂರು: ನಿಕಿನ್‌ ಜೋಸ್‌ (107, 215 ಎ, 4X6) ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 177 ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಗೋವಾ ಎದುರಿನ ರಣಜಿ ಪಂದ್ಯದಲ್ಲಿ ಜಯದತ್ತ ಚಿತ್ತ ಹರಿಸಿದೆ.

2ನೇ ಇನಿಂಗ್ಸ್‌ನಲ್ಲಿ ಗೋವಾ 1 ವಿಕೆಟ್‌ ನಷ್ಟಕ್ಕೆ 93 ರನ್ ಗಳಿಸುವ ಮೂಲಕ ತಿರುಗೇಟು ನೀಡಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ತಂಡಕ್ಕೆ ಇನ್ನು 84 ರನ್‌ ಬೇಕಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರ ನಿಕಿನ್‌ ಈ ರಣಜಿ ಋತುವಿನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. ಪಂಜಾಬ್ ಹಾಗೂ ಗುಜರಾತ್ ಎದುರಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಅವರು, ತವರು ನೆಲದಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಪಿಚ್‌ನ ಮರ್ಮ ಅರಿತವರಂತೆ ತಾಳ್ಮೆಯಿಂದ ರನ್ ಕಲೆ ಹಾಕಿದರು. ಟೀ ವಿರಾಮದ ವೇಳೆ ಕರ್ನಾಟಕ 9 ವಿಕೆಟ್‌ಗೆ 498 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಶನಿವಾರ ದಿನದಂತ್ಯಕ್ಕೆ ಕ್ರೀಸ್‌ನಲ್ಲಿದ್ದ ನಿಕಿನ್‌ ಹಾಗೂ ವಿಕೆಟ್‌ ಕೀಪರ್‌ ಎಸ್. ಶರತ್‌ (49) ಜೋಡಿಯು ಭಾನುವಾರ ಮಧ್ಯಾಹ್ನ ಊಟದ ವಿರಾಮದವರೆಗೂ ಪ್ರವಾಸಿ ಬೌಲರ್‌ಗಳನ್ನು ಕಾಡಿತು. 5ನೇ ವಿಕೆಟ್‌ ಜೊತೆಯಾಟದಲ್ಲಿ 230 ಎಸೆತಗಳಲ್ಲಿ 148 ರನ್‌ಗಳ ಉಪಯುಕ್ತ ಕಾಣಿಕೆ ನೀಡಿತು. ಅರ್ಧಶತಕದ ಹೊಸ್ತಿಲಲ್ಲಿದ್ದ ಶರತ್‌ ಊಟದ ವಿರಾಮದ  ನಂತರ ಎರಡನೇ ಓವರ್‌ನಲ್ಲಿ ದರ್ಶನ್ ಎಸೆತದಲ್ಲಿ ಸ್ನೇಹಲ್‌ಗೆ ಕ್ಯಾಚ್‌ ನೀಡಿ ನಿರಾಸೆ ಅನುಭವಿಸಿದರು.

ಇನಿಂಗ್ಸ್‌ನ 119ನೇ ಓವರ್‌ನಲ್ಲಿ ದರ್ಶನ್‌ ಎಸೆತದಲ್ಲಿ ಒಂದು ರನ್ ಮೂಲಕ ಶತಕ ಪೂರೈಸಿದ ನಿಕಿನ್‌ ಗಾಳಿಯಲ್ಲಿ ಜಿಗಿದು ಎರಡೂ ಕೈಮೇಲಕ್ಕೆತ್ತಿ ಸಂಭ್ರಮಿಸಿದರು. 204 ಎಸೆತಗಳಲ್ಲಿ ಅವರ ಈ ಶತಕ ದಾಖಲಾಯಿತು. ನಂತರ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದ ಅವರು, 123ನೇ ಓವರ್‌ನಲ್ಲಿ ದರ್ಶನ್‌ ಎಸೆತವನ್ನು ಬಲವಾಗಿ ಬಾರಿಸಿದರು. ಚೆಂಡು ಶಾರ್ಟ್‌ ಲೆಗ್‌ನಲ್ಲಿದ್ದ ದೀಪ್‌ರಾಜ್‌ಗೆ ಬಡಿದು ಮೇಲೆ ಚಿಮ್ಮಿತು. ಮೊದಲ ಸ್ಲಿಪ್‌ನಲ್ಲಿದ್ದ ಸ್ನೇಹಲ್‌ ಸುಲಭ ಕ್ಯಾಚ್‌ ಪಡೆದರು.

ಶುಭಾಂಗ್‌ ಹೆಗಡೆ (36, 58ಎ, 4X5) ಬಿರುಸಿನ ಆಟದ ಮೂಲಕ ಸ್ಕೋರ್ ಹೆಚ್ಚಿಸುವ ಪ್ರಯತ್ನ ಮಾಡಿದರು. ಉತ್ತಮ ಹೊಡೆತದ ಯತ್ನದಲ್ಲಿ ದರ್ಶನ್‌ಗೆ ಎಲ್‌ಬಿಡಬ್ಲ್ಯು ಆದರು. ನಂತರ ಬಂದ ವೆಂಕಟೇಶ್‌ (3) ಹಾಗೂ ವೈಶಾಖ (8) ಬೇಗನೆ ವಿಕೆಟ್‌ ಒಪ್ಪಿಸಿದರೆ, ವಿ. ಕೌಶಿಕ್‌ (9) ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು. ಗಾಯದ ಕಾರಣ ಮನೀಶ್ ಪಾಂಡೆ ಬ್ಯಾಟಿಂಗ್ ಮಾಡಲಿಲ್ಲ.

ಕರ್ನಾಟಕದ ಬ್ಯಾಟರ್‌ಗಳನ್ನು ಕಾಡಿದ ಗೋವಾ ನಾಯಕ ದರ್ಶನ್‌ ಮಿಸಾಳ್‌ 134ಕ್ಕೆ 6 ವಿಕೆಟ್‌ ಉರುಳಿಸಿ ಗಮನ ಸೆಳೆದರು. ಮೋಹಿತ್‌ ರೆಡಕರ್ 119ಕ್ಕೆ 3 ವಿಕೆಟ್‌ ಮೂಲಕ ಸಾಥ್‌ ನೀಡಿದರು.

ಗೋವಾ ತಿರುಗೇಟು: ಮೂರನೇ ದಿನದ ಕೊನೆಯ ಅವಧಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಗೋವಾ ತಂಡವು ತಿರುಗೇಟು ಕೊಡುವ ಪ್ರಯತ್ನ ನಡೆಸಿತು. 2ನೇ ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಕರ್ನಾಟಕ ವೇಗಿ ವೈಶಾಖ, ಇಶಾನ್‌ ಗಡೇಕರ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಆದರೆ ಕೆ.ವಿ. ಸಿದ್ದಾರ್ಥ್‌ (57) ಹಾಗೂ ಸುಯಶ್‌ ಪ್ರಭುದೇಸಾಯಿ (34) 92 ರನ್‌ಗಳ ಅಜೇಯ ಜೊತೆಯಾಟ  ತಂಡಕ್ಕೆ ಆಸರೆಯಾಗಿದೆ. ಇಬ್ಬರೂ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT