ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ರಣಜಿ ಅಭಿಯಾನ ಅಂತ್ಯ: ಕಳಪೆ ಬ್ಯಾಟಿಂಗ್‌ಗೆ ಸೋಲಿನ ಕಹಿ

Published 27 ಫೆಬ್ರುವರಿ 2024, 10:12 IST
Last Updated 27 ಫೆಬ್ರುವರಿ 2024, 10:12 IST
ಅಕ್ಷರ ಗಾತ್ರ

ನಾಗ್ಪುರ: ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಸತತ ಏಳನೇ ರಣಜಿ ಟ್ರೋಫಿ ಟೂರ್ನಿ ಕ್ರಿಕಟ್ ಟೂರ್ನಿಯಲ್ಲಿ ನಾಕೌಟ್ ಹಂತದಲ್ಲಿ ಮುಗ್ಗರಿಸಿತು. ಕಳಪೆ ಬ್ಯಾಟಿಂಗ್‌ನಿಂದಾಗಿ ಜಯದ ಅವಕಾಶವನ್ನು ಕೈಚೆಲ್ಲಿತು.

ಸಿವಿಲ್ ಲೈನ್ಸ್‌ನಲ್ಲಿರುವ ವಿಸಿಎ ಕ್ರೀಡಾಂಗಣದಲ್ಲಿ ವಿದರ್ಭ ಎದುರು 127 ರನ್‌ಗಳ ಅಂತರದಿಂದ ಮಯಂಕ್ ಅಗರವಾಲ್ ಬಳಗವು ಮಂಡಿಯೂರಿತು. ಎಡಗೈ ಸ್ಪಿನ್ನರ್ ಹರ್ಷ್ ದುಬೆ (65ಕ್ಕೆ4) ಮತ್ತು ಆದಿತ್ಯ ಸರ್ವಟೆ (78ಕ್ಕೆ4) ಅವರ ಅಮೋಘ ಬೌಲಿಂಗ್ ಮುಂದೆ ಕರ್ನಾಟಕದ ಬ್ಯಾಟಿಂಗ್ ಪಡೆ ನೆಲಕಚ್ಚಿತು.

ಕರ್ನಾಟಕದ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಸೋಮವಾರ ದಿನದಾಟದಲ್ಲಿ ಗೆಲುವಿನ ಭರವಸೆ ಮೂಡಿತ್ತು. 372 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ  ಕರ್ನಾಟಕ ತಂಡವು ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತ್ತು.  ಅದರಿಂದಾಗಿ ಕರ್ನಾಟಕ ತಂಡವು ಮಂಗಳವಾರ ಇನ್ನುಳಿದಿರುವ ರನ್‌ಗಳನ್ನು ಹೊಡೆದು, ಜಯಿಸುವ ಭರವಸೆ ಕೂಡ ಮೂಡಿತ್ತು.  ಆದರೆ,  62.4 ಓವರ್‌ಗಳಲ್ಲಿ 243 ರನ್ ಗಳಿಸಿ ಆಲೌಟ್ ಆಯಿತು.

ಕ್ರೀಸ್‌ನಲ್ಲಿ ಉಳಿದಿದ್ದ ಮಯಂಕ್ ಅಗರವಾಲ್ ಹಾಗೂ ಕೆ.ವಿ. ಅನೀಶ್  ಬ್ಯಾಟಿಂಗ್ ಮುಂದುವರಿಸಿದರು. ಆದರೆ ದಿನದಾಟದ  ಏಳನೇ ಓವರ್‌ನಲ್ಲಿ ಮಯಂಕ್ ಅವರು ಕೆಟ್ಟ ಹೊಡೆತಕ್ಕೆ ದಂಡ ತೆತ್ತರು. ಅಲ್ಲಿಯವರೆಗೂ ಒಂದು,  ಎರಡು ರನ್‌ಗಳ ರೂಪದಲ್ಲಿ ಮೊತ್ತವು ನಿಧಾನವಾಗಿ ಗುರಿಯತ್ತ ಸಾಗುತ್ತಿತ್ತು. ಆದರೆ, ಅಲ್ಲಿಂದ ಅತಿಥೇಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಚುರುಕಾದರು. ಕ್ರೀಸ್‌ಗೆ ಬರುತ್ತಿದ್ದ ಬ್ಯಾಟರ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಮರಳಿಸುವ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾದರು.

ಅನೀಶ್ 40 ರನ್ ಗಳಿಸಿದರು. ಬಿಟ್ಟರೆ ಕೊನೆಯಲ್ಲಿ ವೈಶಾಖ (34; 37ಎ, 4X3, 6X2) ಮತ್ತು ವಿದ್ವತ್ (25; 29ಎ, 4X3, 6X2) ತಂಡವನ್ನು ಗೆಲುವಿನ ಗಡಿ ಮುಟ್ಟಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಇವರಿಬ್ಬರ ವಿಕೆಟ್‌ಗಳನ್ನೂ ಹರ್ಷ ದುಬೆ ಗಳಿಸಿದರು.

ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ದೇವದತ್ತ ಪಡಿಕ್ಕಲ್ ಅವರು ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಅವರ ಗೈರುಹಾಜರಿ ಇಲ್ಲಿ ಕಾಡಿತು.

‘ನಾನು ಪ್ರಯೋಗಿಸಿದ ಹೊಡೆತವು ಸೂಕ್ತವಾಗಿರಲಿಲ್ಲ.  ಮೊದಲ ಇನಿಂಗ್ಸ್‌ನಲ್ಲಿಯೂ ಹೊಡೆತಗಳ ಆಯ್ಕೆ ಸರಿಯಾಗಿರಲಿಲ್ಲ. ಐದನೇ ದಿನದಾಟದಲ್ಲಿ ನಮಗೆ ಗೆಲ್ಲಲು ಬಹಳ ಒಳ್ಳೆಯ ಅವಕಶವಿತ್ತು. ಆದರೆ, ಬ್ಯಾಟಿಂಗ್‌ನಲ್ಲಿ ವಿಫಲರಾದೆವು. ಇದು ನನಗೆ ಅಪಾರ ಬೇಸರ ತಂದಿದೆ’ ಎಂದು ನಾಯಕ ಮಯಂಕ್ ಪಂದ್ಯದ ನಂತರ ಸುದ್ದಿಗಾರರಿಗೆ ಹೇಳಿದರು.

ಸೆಮಿಫೈನಲ್‌ನಲ್ಲಿ ವಿದರ್ಭ ತಂಡವು ಮಧ್ಯಪ್ರದೇಶವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ವಿದರ್ಭ 143.1 ಓವರ್‌ಗಳಲ್ಲಿ 460. ಕರ್ನಾಟಕ: 90.1 ಓವರ್‌ಗಳಲ್ಲಿ 286. ಎರಡನೇ ಇನಿಂಗ್ಸ್: ವಿದರ್ಭ: 67.2 ಓವರ್‌ಗಳಲ್ಲಿ 196. ಕರ್ನಾಟಕ: 62.4 ಓವರ್‌ಗಳಲ್ಲಿ 243 (ಮಯಂಕ್ ಅಗರವಾಲ್ 70, ಕೆ.ವಿ. ಅನೀಶ್ 40, ಹಾರ್ದಿಕ್ ರಾಜ್ 13, ವೈಶಾಖ ವಿಜಯಕುಮಾರ್ 34, ವಿದ್ವತ್ ಕಾವೇರಪ್ಪ 25, ಹರ್ಷ ದುಬೆ 65ಕ್ಕೆ4, ಆದಿತ್ಯ ಸರವಟೆ 78ಕ್ಕೆ4) ಫಲಿತಾಂಶ: ವಿದರ್ಭ ತಂಡಕ್ಕೆ 127 ರನ್‌ಗಳ ಜಯ, ಸೆಮಿಫೈನಲ್‌ಗೆ ಪ್ರವೇಶ.

ಅನುಭವಿಗಳ ಅಸ್ಥಿರತೆ; ಹೊಸಬರಿಗೆ ಅನುಭವದ ಕೊರತೆ!

ಈ ಋತುವಿನಲ್ಲಿ ಆಡಿದ ಕರ್ನಾಟಕ ತಂಡದಲ್ಲಿ  ಎಲ್ಲರಿಗಿಂತ ಹೆಚ್ಚು ಅನುಭವಿಗಳಾಗಿರುವ  ಮಯಂಕ್ ಅಗರವಾಲ್ (468 ರನ್) ಮತ್ತು  ಮನೀಷ್ ಪಾಂಡೆ (480 ರನ್)  ಈ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ ಸಮರ್ಥಿಸಿಕೊಳ್ಳುವಷ್ಟು ರನ್‌ಗಳನ್ನು ಕಲೆಹಾಕಿದ್ದಾರೆ.

ಆದರೆ  ಕ್ವಾರ್ಟರ್‌ಫೈನಲ್‌ನಲ್ಲಿ ಅವರಿಂದ ದೀರ್ಘ ಇನಿಂಗ್ಸ್‌ ಅಗತ್ಯವಿದ್ದಾಗ ವಿಫಲರಾಗಿದ್ದಾರೆ.  ಆರಂಭಿಕ ಬ್ಯಾಟರ್ ಆರ್. ಸಮರ್ಥ್ (341 ರನ್) ಮತ್ತು ನಿಕಿನ್ ಜೋಸ್ (281) ಅವರು ಈ ಪಂದ್ಯದಲ್ಲಿ ಬಿಟ್ಟರೆ ಕಳೆದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿರಲಿಲ್ಲ.

ಎಂಟರ ಘಟ್ಟದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿದರ್ಭ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಬಿಟ್ಟ ಬೌಲರ್‌ಗಳು ಮತ್ತು ಮುನ್ನಡೆ ಗಳಿಸುವಲ್ಲಿ ವಿಫಲರಾದ ಬ್ಯಾಟರ್‌ಗಳ ಆಟವು ಕೊನೆಯ ದಿನ ಮುಳುವಾಯಿತು.

ದುರ್ಬಲ ಸ್ಪಿನ್ ವಿಭಾಗವೂ ಈ ಸೋಲಿಗೆ ಒಂದು ಕಾರಣ. ಜೆ.ಅಭಿರಾಮ್ ಮುಖ್ಯಸ್ಥರಾಗಿರುವ ಕೆಎಸ್‌ಸಿಎ ಆಯ್ಕೆ ಸಮಿತಿಯು ಅನುಭವಿ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರನ್ನು ಈ ಬಾರಿ ಆಯ್ಕೆ ಮಾಡಿರಲಿಲ್ಲ. ಅವರು ಕಳೆದ ಋತುವಿನಲ್ಲಿ 31 ವಿಕೆಟ್ ಗಳಿಸಿದ್ದರು.  ಆದರೆ ವಯೋಮಿತಿ ಕ್ರಿಕೆಟ್‌ನಲ್ಲಿ ಮಿಂಚಿದ್ದ ಹೊಸಪ್ರತಿಭೆಗಳಿಗೆ ಮಣೆ ಹಾಕಿದ್ದು ಫಲ ನೀಡಲಿಲ್ಲ.

ಶುಭಾಂಗ್ ಹೆಗಡೆ ಮತ್ತು ಎ.ಸಿ. ರೋಹಿತ್ ಕುಮಾರ್ ಅವರಿಗೆ ಕೇವಲ ಮೂರು ಪಂದ್ಯಗಳಲ್ಲಿ ಆಡಿಸಲಾಯಿತು. ನಂತರ ಅವರಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ನೀಡಲಿಲ್ಲ. 17 ವರ್ಷದ ಸ್ಪಿನ್ ಆಲ್‌ರೌಂಡರ್ ಧೀರಜ್ ಗೌಡ ಅವರನ್ನು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪದಾರ್ಪಣೆ ಮಾಡಿಸಲಾಯಿತು. ಇದೇ ಮೊದಲ ಬಾರಿ ರಣಜಿ ಟೂರ್ನಿಯಲ್ಲಿ ಆಡಿದ ಹಾರ್ದಿಕ್ ರಾಜ್ ಅವರಿಗೂ 17 ವರ್ಷ ವಯಸ್ಸು. ಸಹಜವಾಗಿಯೇ ಅವರು ಅನುಭವದ ಕೊರತೆಯಿಂದಾಗಿ ಪರದಾಡಬೇಕಾಯಿತು. 

ಈ ಬಾರಿ ಸ್ಥಿರವಾಗಿ ಆಡಿದವರು ಮೂವರು ವೇಗಿಗಳು ಮಾತ್ರ. ವೈಶಾಖ (39 ವಿಕೆಟರ್), ಕೌಶಿಕ್ (28) ಮತ್ತು ವಿದ್ವತ್ (25) ಅವರು ಈ ಪಂದ್ಯದಲ್ಲಿಯೂ ತಂಡದ ಗೆಲುವಿಗೆ ಅವಕಾಶ ಸೃಷ್ಟಿಸಿಕೊಟ್ಟಿದ್ದರು. ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿಯೂ ತಮ್ಮ ಭುಜಬಲ ಪರಾಕ್ರಮ ಮೆರೆದಿದ್ದರು.

ಈ ಸೋಲಿನೊಂದಿಗೆ ತಂಡದ ಯಾವ  ವಿಭಾಗಗಳಲ್ಲಿ ಸಮಸ್ಯೆಗಳು ಇವೆ ಎಂಬುದರ ಅರಿವು ವ್ಯವಸ್ಥಾಪಕರಿಗೆ ತಿಳಿದಿರಬಹುದು. ಅವುಗಳನ್ನು ಸರಿಪಡಿಸಲು ಇನ್ನೂ ಸಾಕಷ್ಟು ಸಮಯವೂ ಅವರಿಗೆ ಇದೆ.

ನಾಕೌಟ್‌ನಲ್ಲಿ ಕರ್ನಾಟಕದ ಸತತ ಸೋಲು (ರಣಜಿ)

2016–17; ಕ್ವಾರ್ಟರ್‌ಫೈನಲ್ (ತಮಿಳುನಾಡು  ಎದುರು ಸೋಲು)

2017–18;ಸೆಮಿಫೈನಲ್ (ವಿದರ್ಭ ಎದುರು ಸೋಲು)

2018–19;ಸೆಮಿಫೈನಲ್ (ಸೌರಾಷ್ಟ್ರ ಎದುರು ಸೋಲು)

2019–20; ಸೆಮಿಫೈನಲ್ (ಬಂಗಾಳ ಎದುರು ಸೋಲು)

2020–21; ಕೋವಿಡ್‌ನಿಂದಾಗಿ ಟೂರ್ನಿ ರದ್ದು

2022; ಕ್ವಾರ್ಟರ್‌ಫೈನಲ್ (ಉತ್ತರಪ್ರದೇಶ ಎದುರು ಸೋಲು)

2022–23; ಸೆಮಿಫೈನಲ್ (ಸೌರಾಷ್ಟ್ರ ಎದುರು ಸೋಲು)

2024; ಕ್ವಾರ್ಟರ್‌ಫೈನಲ್ (ವಿದರ್ಭ ಎದುರು ಸೋಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT