ಗುರುವಾರ , ಮೇ 26, 2022
24 °C

ಪ್ರತಿ ಪಂದ್ಯ ಗೆಲ್ಲಲಾಗದು, ಸೋಲು ತಾತ್ಕಾಲಿಕ: ಟೀಮ್ ಇಂಡಿಯಾ ಬಗ್ಗೆ ರವಿ ಶಾಸ್ತ್ರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸೋಲಾಗಿರುವ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಇದು ಭಾರತಕ್ಕೆ ತಾತ್ಕಾಲಿಕ ಹಂತವಷ್ಟೇ. ಶೀಘ್ರದಲ್ಲೇ ಇದು ಬದಲಾಗಲಿದೆ ಎಂದು ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ 0–3 ಅಂತರದಿಂದ ಸೋಲನುಭವಿಸಿತ್ತು. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದ್ದರು.

ಅದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿಯೂ ಭಾರತಕ್ಕೆ 1–2ರ ಅಂತರದಲ್ಲಿ ಸೋಲಾಗಿತ್ತು.

‘ಒಂದು ಸರಣಿಯನ್ನು ಸೋತ ಕೂಡಲೇ ಜನ ಟೀಕೆ ಮಾಡಲು ಆರಂಭಿಸುತ್ತಾರೆ. ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವುದು ಸಾಧ್ಯವಾಗದು. ಗೆಲುವು–ಸೋಲು ಸಾಮಾನ್ಯ’ ಎಂದು ಶಾಸ್ತ್ರಿ ಹೇಳಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್ ಬಳಿಕ ಅವರು ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಒಂದೇ ಒಂದು ಬಾಲ್ ಪಂದ್ಯವನ್ನೂ ನೋಡಿಲ್ಲ ಎಂದಿರುವ ಶಾಸ್ತ್ರಿ, ತಂಡದ ಗುಣಮಟ್ಟ ಕುಸಿದಿದೆ ಎಂಬ ವಾದವನ್ನು ಮಾತ್ರ ಒಪ್ಪಿಲ್ಲ.

‘ಗುಣಮಟ್ಟ ದಿಢೀರಾಗಿ ಕುಸಿಯಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳಿಂದ ತಂಡವು ವಿಶ್ವದ ‘ನಂಬರ್ 1’ ಆಗಿ ಗುರುತಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡವು ಹೆಚ್ಚು ನಿಗದಿತ ಓವರ್‌ಗಳ ಪಂದ್ಯಗಳನ್ನು ಆಯೋಜಿಸುತ್ತಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷದ ಸರಣಿಗಳನ್ನು ಆಯೋಜಿಸಿದೆ.

ಐಪಿಎಲ್ ಟೂರ್ನಿಯ ಬಳಿಕ ಭಾರತ ತಂಡವು ಕಳೆದ ವರ್ಷ ಬಾಕಿಯಾಗಿದ್ದ ಟೆಸ್ಟ್ ಸರಣಿಯ 1 ಪಂದ್ಯವನ್ನು ಆಡುವುದಕ್ಕಾಗಿ ಜೂನ್‌ನಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಬಳಿಕ ಮೂರು ಟ್ವೆಂಟಿ–20 ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು