ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚಿನ್ ರವೀಂದ್ರ, ಅಜಾಜ್ ಪಟೇಲ್ ದಿಟ್ಟ ಆಟ; ಕೊನೆಯ ಅವಧಿಯಲ್ಲಿ ಕೈಜಾರಿದ ಜಯ

Last Updated 29 ನವೆಂಬರ್ 2021, 14:15 IST
ಅಕ್ಷರ ಗಾತ್ರ

ಕಾನ್ಪುರ: ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ನಿಯಂತ್ರಿಸಿದ ಭಾರತದ ಬೌಲರ್‌ಗಳನ್ನು ನ್ಯೂಜಿಲೆಂಡ್‌ನ ಬಾಲಂಗೋಚಿಗಳು ಕಾಡಿದರು. 52 ಎಸೆತಗಳನ್ನು ಎದುರಿಸಿ ಕೊನೆಯ ವಿಕೆಟ್ ಉಳಿಸಿಕೊಂಡ ಭಾರತ ಮೂಲದ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ ಅವರ ಛಲದ ಆಟದಿಂದಾಗಿ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.

284 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ನಾಲ್ಕನೇ ದಿನವಾದ ಭಾನುವಾರ ಒಂದು ವಿಕೆಟ್ ಕಳೆದುಕೊಂಡು ನಾಲ್ಕು ರನ್ ಗಳಿಸಿತ್ತು. ಸೋಮವಾರ ಮೊದಲ ಅವಧಿಯಲ್ಲಿ ದಿಟ್ಟ ಆಟವಾಡಿದರೂ ನಂತರ ವಿಕೆಟ್‌ಗಳನ್ನು ಕಳೆದುಕೊಂಡಿತು.

90ನೇ ಓವರ್‌ನಲ್ಲಿ ಒಂಬತ್ತನೇ ವಿಕೆಟ್ ಉರುಳಿಸಿದ ಭಾರತ ಗೆಲುವಿನ ಹೊಸ್ತಿಲಿನಲ್ಲಿತ್ತು. ಆದರೆ ಬೆಳಕಿನ ಅಭಾವದಿಂದ ಅಂಪೈರ್‌ಗಳು ಬೇಲ್ಸ್‌ ತೆಗೆದಾಗ ನ್ಯೂಜಿಲೆಂಡ್ ಒಂಬತ್ತು ವಿಕೆಟ್‌ಗಳಿಗೆ 165 ರನ್ ಗಳಿಸಿ ನಗೆ ಸೂಸಿತು.

ಎಂಟನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ರಚಿನ್ ರವೀಂದ್ರ ಪದಾರ್ಪಣೆ ಪಂದ್ಯದಲ್ಲಿ ದಿಟ್ಟ ಆಟವಾಡಿದರು. ಕೊನೆಯ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ನಿರ್ಣಾಯಕ ಜೊತೆಯಾಟವಾಡಿ ತಂಡವನ್ನು ಸೋಲಿನ ಸುಳಿಯಿಂದ ರಕ್ಷಿಸಿದರು.

ಭಾನುವಾರ ಕ್ರೀಸ್‌ನಲ್ಲಿ ಉಳಿದಿದ್ದ ಆರಂಭಿಕ ಬ್ಯಾಟರ್ ಟಾಮ್ ಲಥಾಮ್ ಸೋಮವಾರ ಬೆಳಿಗ್ಗೆ ವಿಲಿಯಮ್ ಸೋಮರ್‌ವಿಲ್ ಜೊತೆಗೂಡಿ 76 ರನ್ ಸೇರಿಸಿದರು. ಭೋಜನ ವಿರಾಮದ ವರೆಗೂ ಇವರಿಬ್ಬರು ಭಾರತದ ಬೌಲರ್‌ಗಳನ್ನು ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಲಥಾಮ್ ಈ ಇನಿಂಗ್ಸ್‌ನಲ್ಲೂ 50ರ ಗಡಿ ದಾಟಿದರು.

ಸೋಮರ್‌ವೀಲ್ ಔಟಾದ ನಂತರ ನಾಯಕ ಕೇನ್ ವಿಲಿಯಮ್ಸನ್ ಜೊತೆಗೂ ಲಥಾಮ್ ಉತ್ತಮ ಆಟ ಮೂಡಿಬಂತು. ಲಥಾಮ್‌ ಮರಳಿದ ನಂತರ ಅನುಭವಿ ರಾಸ್ ಟೇಲರ್‌ ಮತ್ತು ಹೆನ್ರಿ ನಿಕೋಲ್ಸ್ ವಿಕೆಟ್‌ಗಳು ಬೇಗನೇ ಉರುಳಿದವು. ವಿಲಿಯಮ್ಸನ್ ಮತ್ತು ಬ್ಲಂಡೆಲ್‌ ವಿಕೆಟ್ ಕೂಡ ಕಬಳಿಸಿದಾಗ ಭಾರತದ ಭರವಸೆ ಹೆಚ್ಚಿತು.

ಆದರೆ ಎಡಗೈ ಬ್ಯಾಟರ್ ರಚಿನ್ ರವೀಂದ್ರ ವೇಗಿ ಕೈಲ್ ಜೆಮೀಸನ್ ಜೊತೆಗೂಡಿ 46 ಎಸೆತಗಳ ಕಾಲ ಬ್ಯಾಟಿಂಗ್ ಮಾಡಿ ನಿರೀಕ್ಷೆ ಮೂಡಿಸಿದರು. ಕಾಡಿದ ಮಂದ ಬೆಳಕಿನ ನಡುವೆಯೇ ಕೊನೆಯ ವಿಕೆಟ್‌ ಉರುಳಿಸಲು ನಡೆಸಿದ ಭಾರತದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಕ್ರೀಡಾಂಗಣ ಸಿಬ್ಬಂದಿಗೆ ರಾಹುಲ್ ಕೊಡುಗೆ

ಐದೂ ದಿನ ಅತ್ಯುತ್ತಮ ಕ್ರಿಕೆಟ್‌ಗೆ ನೆರವಾದ ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿದ ಕ್ರೀಡಾಂಗಣದ ಸಿಬ್ಬಂದಿಗೆ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ₹35,000 ಕೊಡುಗೆಯಾಗಿ ನೀಡಿದ್ದಾರೆ. ಶಿವಕುಮಾರ್ ನೇತೃತ್ವದ ಸಿಬ್ಬಂದಿಗೆ ಮೊತ್ತ ನೀಡಲು ದ್ರಾವಿಡ್‌ ಮುಂದಾಗಿರುವ ವಿಷಯವನ್ನು ಪ್ರೆಸ್ ಬಾಕ್ಸ್‌ನಲ್ಲಿ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿ ಘೋಷಿಸಿದರು.

ಹರಭಜನ್ ಹಿಂದಿಕ್ಕಿದ ಅಶ್ವಿನ್

ಅರ್ಧಶತಕ ಗಳಿಸಿದ ಎಡಗೈ ಬ್ಯಾಟರ್ ಟಾಮ್ ಲಥಾಮ್ ವಿಕೆಟ್ ಉರುಳಿಸುವ ಮೂಲಕ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಗಳಿಸಿದ ಮೂರನೇ ಬೌಲರ್ ಎನಿಸಿಕೊಂಡರು.

ಲಥಾಮ್ ವಿಕೆಟ್ ಗಳಿಸಿದ ಅಶ್ವಿನ್ ಅವರು ಹರಭಜನ್ ಸಿಂಗ್ ಸಾಧನೆಯನ್ನು ಹಿಂದಿಕ್ಕಿದರು. ಟಾಮ್ ಬ್ಲಂಡೆಲ್ ವಿಕೆಟ್ ಕೂಡ ಅಶ್ವಿನ್ ಪಾಲಾಯಿತು. ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ಕಪಿಲ್ ದೇವ್ ಇದ್ದಾರೆ.

ರಚಿನ್ ಬೆಂಗಳೂರಿನ ಹುಡುಗ

ಪಂದ್ಯ ಡ್ರಾ ಮಾಡಿಕೊಳ್ಳಲು ನ್ಯೂಜಿಲೆಂಡ್‌ಗೆ ನೆರವಾದ ರಚಿನ್ ರವೀಂದ್ರ ಅವರ ಮೂಲ ಬೆಂಗಳೂರು. ಅವರೊಂದಿಗೆ ಮುರಿಯದ ಕೊನೆಯ ವಿಕೆಟ್‌ಗೆ ಅಮೋಘ ಜೊತೆಯಾಟವಾಡಿದ ಅಜಾಜ್‌ ಪಟೇಲ್ ಮುಂಬೈ ಮೂಲದವರು.

ಇವರಿಬ್ಬರ ಬಗ್ಗೆ ಮೆಚ್ಚುಗೆಯ ಮಾತನಾಡಿದ ರವಿಚಂದ್ರನ್ ಅಶ್ವಿನ್ ’ಕೊನೆಯ ಅವಧಿಯಲ್ಲಿ, ಪಂದ್ಯದ ಕೊನೆಯ ವರೆಗೂ ದಿಟ್ಟವಾಡಿ ಆಡಿದ ರಚಿನ್ ಮತ್ತು ಅಜಾಜ್ ಅತ್ಯುತ್ತಮ ಕ್ರಿಕೆಟ್ ಪ್ರದರ್ಶಿಸಿದರು‘ ಎಂದರು.

ಟೆಸ್ಟ್ ಕ್ರಿಕೆಟ್‌ ವಿಶಿಷ್ಟವಾದದ್ದು. ಇಲ್ಲಿ ಕೇವಲ ನಿಗದಿತ ಓವರ್‌ಗಳ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾತ್ರ ಇರುವುದಿಲ್ಲ. ಪ್ರತಿ ದಿನವೂ ಸವಾಲಿನದ್ದಾಗಿರುತ್ತದೆ. ಏಳು ಬೀಳುಗಳ ನಂತರ ಕೊನೆಗೆ ಕ್ರಿಕೆಟ್‌ನ ಸೊಗಸು ಉಳಿಯುತ್ತದೆ‘ ಎಂದು ಅಶ್ವಿನ್ ಹೇಳಿದರು.

ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್‌ಗಳು

ಬೌಲರ್‌;ಪಂದ್ಯ;ವಿಕೆಟ್‌;ಶ್ರೇಷ್ಠ*;ಶ್ರೇಷ್ಠ**;10 ವಿಕೆಟ್;5 ವಿಕೆಟ್

ಅನಿಲ್ ಕುಂಬ್ಳೆ;132;619;74ಕ್ಕೆ10;149ಕ್ಕೆ14;8;35

ಕಪಿಲ್ ದೇವ್‌;131;434;83ಕ್ಕೆ9;146ಕ್ಕೆ11;2;23

ರವಿಚಂದ್ರನ್ ಅಶ್ವಿನ್;80;419;59ಕ್ಕೆ7;140ಕ್ಕೆ13;7;30

ಹರಭಜನ್ ಸಿಂಗ್‌;103;417;84ಕ್ಕೆ8;217ಕ್ಕೆ15;5;25

ಇಶಾಂತ್ ಶರ್ಮಾ;105;311;74ಕ್ಕೆ7;108ಕ್ಕೆ10;1;11

(* ಇನಿಂಗ್ಸ್‌ನಲ್ಲಿ; ** ಪಂದ್ಯದಲ್ಲಿ)

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಗಳಿಸಿದವರು

ಬೌಲರ್‌;ದೇಶ;ಪಂದ್ಯ;ವಿಕೆಟ್‌

ಮುತ್ತಯ್ಯ ಮುರಳೀಧರನ್;ಶ್ರೀಲಂಕಾ;133;800

ಶೇನ್ ವಾರ್ನ್;ಆಸ್ಟ್ರೇಲಿಯಾ;145;708

ಜೇಮ್ಸ್ ಆ್ಯಂಡರ್ಸನ್;ಇಂಗ್ಲೆಂಡ್‌;166;632

ಅನಿಲ್ ಕುಂಬ್ಳೆ;ಭಾರತ;132;619

ಗ್ಲೆನ್ ಮೆಗ್ರಾ;ಆಸ್ಟ್ರೇಲಿಯಾ;124;563

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT