‘ಪಿಂಕ್‌ ಸಿಟಿ’ಯಲ್ಲಿ ಪುಟಿದೇಳುವುದೇ ಆರ್‌ಸಿಬಿ

ಬುಧವಾರ, ಏಪ್ರಿಲ್ 24, 2019
24 °C
ಇಂದು ರಾಜಸ್ಥಾನ್‌ ರಾಯಲ್ಸ್‌ ಎದುರು ಹೋರಾಟ: ವಿರಾಟ್‌ ಕೊಹ್ಲಿ–ಡಿವಿಲಿಯರ್ಸ್‌ ಮೇಲೆ ಹೆಚ್ಚಿನ ನಿರೀಕ್ಷೆ

‘ಪಿಂಕ್‌ ಸಿಟಿ’ಯಲ್ಲಿ ಪುಟಿದೇಳುವುದೇ ಆರ್‌ಸಿಬಿ

Published:
Updated:
Prajavani

ಜೈಪುರ: ಸತತ ಮೂರು ಪಂದ್ಯಗಳಲ್ಲಿ ಸೋತು ಸೊರಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ‘ಪಿಂಕ್‌ ಸಿಟಿ’ಯಲ್ಲಿ ಪುಟಿದೇಳುವುದೇ...?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಮಂಗಳವಾರದ ಹಣಾಹಣಿಯಲ್ಲಿ ವಿರಾಟ್‌ ಕೊಹ್ಲಿ ಪಡೆ ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಮಣಿಸಿ ಟೀಕಾಕಾರರಿಗೆ ಪ್ರತ್ಯುತ್ತರ ನೀಡಲಿದೆಯೇ..?

ಹೀಗೆ ಹಲವು ಪ್ರಶ್ನೆಗಳು ಈಗ ಬೆಂಗಳೂರಿನ ತಂಡದ ಅಭಿಮಾನಿಗಳನ್ನು ಕಾಡುತ್ತಿವೆ.

ಕೊಹ್ಲಿ ಪಡೆ ಈ ಸಲ ಆಡಿರುವ ಮೂರೂ ಪಂದ್ಯ ಗಳಲ್ಲೂ ನೀರಸ ಸಾಮರ್ಥ್ಯ ತೋರಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಕೇವಲ 70 ರನ್‌ಗಳಿಗೆ ಆಲೌಟ್‌ ಆಗಿದ್ದ ತಂಡ, ತವರಿನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಹಣಾಹಣಿ ಯಲ್ಲಿ ಗೆಲುವಿನ ಸನಿಹಕ್ಕೆ ಬಂದು ಎಡವಿತ್ತು. ಭಾನುವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಪೈಪೋಟಿಯಲ್ಲಿ ತಂಡ ಸೋತ ರೀತಿ ಕೊಹ್ಲಿ ‍ಪಡೆಯು ಹೋರಾಟ ಮನೋಭಾವವನ್ನೇ ಮರೆತಿದೆ ಎಂಬ ಮಾತಿಗೆ ಪುಷ್ಠಿ ನೀಡುವಂತಿತ್ತು.

ಬೆಂಗಳೂರಿನ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಪ್ರತಿಭಾವಂತ ಬೌಲರ್‌ಗಳಿದ್ದಾರೆ. ಆದರೆ ನಿರೀಕ್ಷೆಗೆ ಅನುಗುಣವಾಗಿ ಆಡಲು ಯಾರಿಗೂ ಆಗುತ್ತಿಲ್ಲ.

ಇನಿಂಗ್ಸ್‌ ಆರಂಭಿಸುವ ಕೊಹ್ಲಿ ಮತ್ತು ಪಾರ್ಥೀವ್‌ ಪಟೇಲ್‌ ಭದ್ರ ಅಡಿಪಾಯ ಹಾಕಿಕೊಡಲು ವಿಫಲರಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ. ಅನುಭವಿ ಆಲ್‌ರೌಂಡರ್‌ ಮೋಯಿನ್‌ ಅಲಿ ಮತ್ತು ಶಿಮ್ರನ್‌ ಹೆಟ್ಮೆಯರ್‌ ಅವರ ವೈಫಲ್ಯ ಚಿಂತೆಗೆ ಕಾರಣವಾಗಿದೆ.

ದಕ್ಷಿಣ ಆಫ್ರಿಕಾದ ‘ಸೂಪರ್‌ ಮ್ಯಾನ್‌’ ಎಬಿ ಡಿವಿಲಿಯರ್ಸ್‌ ಸ್ಥಿರ ಸಾಮರ್ಥ್ಯ ತೋರದಿರುವುದು ಕೂಡಾ ತಂಡದ ಸಂಕಷ್ಟ ಹೆಚ್ಚುವಂತೆ ಮಾಡಿದೆ. ಮುಂಬೈ ಎದುರಿನ ಹೋರಾಟದಲ್ಲಿ ಅಜೇಯ 70 ರನ್‌ ಗಳಿಸಿ ಗಮನ ಸೆಳೆದಿದ್ದ ಡಿವಿಲಿಯರ್ಸ್‌, ಸನ್‌ರೈಸರ್ಸ್‌ ಎದುರು ಕೇವಲ ಒಂದು ರನ್‌ಗೆ ಔಟಾಗಿದ್ದರು. ಈ ಬಾರಿಯ ಲೀಗ್‌ನಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು (80) ರನ್‌ ಗಳಿಸಿರುವ ಅವರು ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಸಬೇಕಿದೆ.

ಎಡಗೈ ಬ್ಯಾಟ್ಸ್‌ಮನ್‌ ಪಾರ್ಥೀವ್ ಮತ್ತು ಕೊಹ್ಲಿ ಅವರೂ ಅಬ್ಬರಿಸುವುದು ಅಗತ್ಯ.

ಬೌಲಿಂಗ್‌ನಲ್ಲೂ ಆರ್‌ಸಿಬಿ ದಿಟ್ಟ ಸಾಮರ್ಥ್ಯ ತೋರಬೇಕು. ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಬೌಲರ್‌ಗಳು ದುಬಾರಿಯಾಗಿದ್ದರು. ಎದುರಾಳಿಗಳ ವಿಕೆಟ್‌ ಪಡೆಯಲು ಪರದಾಡಿದ್ದರು. ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇಸ್ಟೊ ಅವರ ಅಬ್ಬರಕ್ಕೆ ಕಡಿವಾಣ ಹಾಕಲು ಉಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೊಮ್‌ ವಿಫಲರಾಗಿದ್ದರು.

ಮೊಯಿನ್‌ ಅಲಿ, ಯಜುವೇಂದ್ರ ಚಾಹಲ್‌ ಮತ್ತು ‍ಪ್ರಯಾಸ್‌ ರೇ ಬರ್ಮನ್‌ ಅವರ ಸ್ಪಿನ್‌ ಜಾದೂ ಕೂಡಾ ಫಲ ನೀಡಿರಲಿಲ್ಲ. ಇವರು ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ರಾಜಸ್ಥಾನ್‌ ಎದುರು  ಬಿಗುವಿನ ದಾಳಿ ನಡೆಸುವುದು ಅವಶ್ಯ.

ರಾಜಸ್ಥಾನಕ್ಕೂ ಮೊದಲ ಗೆಲುವಿನ ತವಕ: ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಕೂಡಾ ಈ ಬಾರಿಯ ಲೀಗ್‌ನಲ್ಲಿ ಮೊದಲ ಗೆಲುವು ಪಡೆಯಲು ತುದಿಗಾಲಿನಲ್ಲಿ ನಿಂತಿದೆ.

ಈ ತಂಡ ಕಿಂಗ್ಸ್‌ ಇಲೆವನ್‌ ಪಂಜಾಬ್‌, ಸನ್‌ರೈಸರ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ದಿಟ್ಟ ಹೋರಾಟ ನಡೆಸಿ ಸೋತಿತ್ತು.

ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ನಾಯಕ ರಹಾನೆ ಮತ್ತು ಸ್ಟೀವ್‌ ಸ್ಮಿತ್‌ ಅವರು ಬ್ಯಾಟಿಂಗ್‌ ವಿಭಾಗದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ. ರಾಹುಲ್‌ ತ್ರಿಪಾಠಿ ಹಾಗೂ ಬೆನ್‌ಸ್ಟೋಕ್ಸ್‌ ಬಲವೂ  ತಂಡದ ಬೆನ್ನಿಗಿದೆ. ಇವರನ್ನು ಕಟ್ಟಿಹಾಕಲು ಆರ್‌ಸಿಬಿ ಬೌಲರ್‌ಗಳು ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.

ಕರ್ನಾಟಕದ ಆಲ್‌ರೌಂಡರ್‌ಗಳಾದ ಕೆ.ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರೂ ರಾಯಲ್ಸ್‌ ಶಕ್ತಿ ಹೆಚ್ಚಿಸಿದ್ದಾರೆ. ಜೋಫ್ರಾ ಆರ್ಚರ್‌ ಮತ್ತು ಧವಳ್‌ ಕುಲಕರ್ಣಿ ಅವರ ಬೌಲಿಂಗ್ ಬಲವೂ ಆತಿಥೇಯರಿಗಿದೆ.

**

ಸನ್‌ರೈಸರ್ಸ್‌ ಎದುರು ಇಷ್ಟು ಹೀನಾಯವಾಗಿ ಸೋಲುತ್ತೇವೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ರಾಯಲ್ಸ್‌ ಎದುರು ಗೆದ್ದು ಹಿಂದಿನ ನಿರಾಸೆ ಮರೆಯುವುದು ನಮ್ಮ ಗುರಿ. ಅದಕ್ಕಾಗಿ ಒಂದು ತಂಡವಾಗಿ ಹೋರಾಡುತ್ತೇವೆ.
-ವಿರಾಟ್‌ ಕೊಹ್ಲಿ, ಆರ್‌ಸಿಬಿ ನಾಯಕ 

**

ಹಿಂದಿನ ಮೂರೂ ಪಂದ್ಯಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದ್ದೆವು. ಹೀಗಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ‌ಆರ್‌ಸಿಬಿಯನ್ನು ಮಣಿಸಿ ತವರಿನ ಅಭಿಮಾನಿಗಳಿಗೆ ಜಯದ ಉಡುಗೊರೆ ನೀಡುವುದು ನಮ್ಮ ಗುರಿ. ಅದಕ್ಕಾಗಿ ಸೂಕ್ತ ಯೋಜನೆ ಹೆಣೆದು ಆಡುತ್ತೇವೆ.
-ಅಜಿಂಕ್ಯ ರಹಾನೆ, ರಾಜಸ್ಥಾನ್‌ ತಂಡದ ನಾಯಕ 

ಆರ್‌ಸಿಬಿ–ರಾಜಸ್ಥಾನ್‌
ಆರಂಭ:
ರಾತ್ರಿ 8
ಸ್ಥಳ: ಜೈಪುರ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !