ಬುಧವಾರ, ಜುಲೈ 15, 2020
22 °C

ಸಚಿನ್ ವಿಕೆಟ್ ಗಳಿಸಿದ್ದಕ್ಕೆ ಕೊಲೆ ಬೆದರಿಕೆ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ‘ಅವತ್ತು  ಸಚಿನ್ ತೆಂಡೂಲ್ಕರ್ ವಿಕೆಟ್‌ ಗಳಿಸಿದ್ದ ನಾನು ಮತ್ತು ತೀರ್ಪು ನೀಡಿದ್ದ ಅಂಪೈರ್ ರಾಡ್ ಟಕ್ಕರ್ ಅವರು ಕೊಲೆ ಬೆದರಿಕೆ ಎದುರಿಸಬೇಕಾಯಿತು. ಸಚಿನ್ ಅವರ ಕೆಲವು ಅಭಿಮಾನಿಗಳು ನಮಗೆ ಆ ರೀತಿಯ ಬೆದರಿಕೆಗಳನ್ನು ಒಡ್ಡುತ್ತಿದ್ದರು’ ಎಂದು ಇಂಗ್ಲೆಂಡ್ ತಂಡದ ವೇಗದ ಬೌಲರ್ ಟಿಮ್ ಬ್ರೆಸ್ನನ್ ಹೇಳಿದ್ದಾರೆ.

ದ ಓವಲ್‌ ಕ್ರೀಡಾಂಗಣದಲ್ಲಿ 2011ರಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 91 ರನ್‌ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಟಿಮ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿದ್ದರು. ಅದರಿಂದಾಗಿ ಅವರು ಕ್ರಿಕೆಟ್‌ನಲ್ಲಿ ‘ಶತಕದ ಶತಕ’ ಸಾಧನೆ ಕೈತಪ್ಪಿತ್ತು. ಅದೇ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಶತಕ ಹೊಡೆದಿದ್ದರು. ಅದು ಅವರ ಒಟ್ಟು 99ನೇ ಶತಕವಾಗಿತ್ತು.

‘ಅವತ್ತು ಸಚಿನ್ ಉತ್ತಮ ಲಯದಲ್ಲಿದ್ದರು. ಖಂಡಿತವಾಗಿಯೂ ಶತಕ ಗಳಿಸುತ್ತಿದ್ದರು. ಲೆಗ್‌ ಮಿಸ್‌ ಆದಂತೆ ಕಂಡಿದ್ದ  ಆ ಎಸೆತದಲ್ಲಿ ಅಂಪೈರ್ (ಟಕ್ಕರ್) ಔಟ್ ತೀರ್ಪು ನೀಡಿದ್ದರು. ಆ ಸರಣಿಯಲ್ಲಿ ನಾವು ಜಯಿಸಿದ್ದೆವು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದೆವು’ ಎಂದು ಬ್ರೆಸ್ನನ್ ‘ಯಾರ್ಕ್‌ಶೈರ್ ಕ್ರಿಕೆಟ್‌ ಕವರ್ಸ್‌ ಆಫ್‌’ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

‘ಇದರಿಂದಾಗಿ ನನಗೆ ಮತ್ತು ಅಂಪೈರ್‌ಗೆ ಬಹಳ ದಿನಗಳವರೆಗೆ ಕೊಲೆ ಬೆದರಿಕೆಯ ಕರೆಗಳು ಬರುತ್ತಿದ್ದವು. ಲೆಗ್‌ ಮಿಸ್ಸಿಂಗ್‌ ಆಗಿದ್ದರೂ ಔಟ್ ಕೊಡಲು ನಿನಗೆಷ್ಟು ಧೈರ್ಯ ಎಂದು ಟಕ್ಕರ್ ಅವರಿಗೆ ಸಂದೇಶಗಳು ಬರುತ್ತಿದ್ದವು. ಕೆಲವು ಅ‍ಪರಿಚಿತರು ಹಾಕುತ್ತಿದ್ದ ಈ ಬೆದರಿಕೆಗಳಿಂದಾಗಿ ಆತಂಕವಾಗಿತ್ತು. ಟಕ್ಕರ್ ಕೂಡ ತಮ್ಮ ಭದ್ರತೆ ಹೆಚ್ಚಿಸಿಕೊಳ್ಳಲು ಮುಂದಾಗಬೇಕಾಯಿತು’ ಎಂದಿದ್ದಾರೆ. 

2012ರ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಸಚಿನ್ ಶತಕ ಬಾರಿಸಿ ಒಟ್ಟು ನೂರು ಶತಕಗಳ ದಾಖಲೆ ಬರೆದರು. 2013ರಲ್ಲಿ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು