ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ‍್ಯಾಂಕಿಂಗ್‌: ರಿಷಭ್ ಪಂತ್ ನಂ. ಒನ್ ವಿಕೆಟ್ ಕೀಪರ್

ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಆಟಗಾರ
Last Updated 21 ಜನವರಿ 2021, 1:47 IST
ಅಕ್ಷರ ಗಾತ್ರ

ದುಬೈ: ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದ ರಿಷಭ್ ಪಂತ್ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನ ಗಳಿಸಿದ್ದಾರೆ. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಹೀಗಾಗಿ ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ.

ಮಂಗಳವಾರ ಮುಕ್ತಾಯಗೊಂಡ ಸರಣಿಯ ನಾಲ್ಕನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಅಜೇಯ 89 ರನ್ ಗಳಿಸಿದ್ದ ಪಂತ್ ಭಾರತಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು. ಈ ಮೂಲಕ ಭಾರತ 2–1ರಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು. ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ನಲ್ಲಿ ಪಂತ್‌ಗೆ 691 ಪಾಯಿಂಟ್‌ಗಳು ಸಂದಿದ್ದು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 677 ‍ಪಾಯಿಂಟ್‌ಗಳೊಂದಿಗೆ ವಿಕೆಟ್‌ಕೀಪರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 15ನೇ ಸ್ಥಾನವಿದೆ.

919 ಪಾಯಿಂಟ್‌ಗಳೊಂದಿಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಪಿತೃತ್ವ ರಜೆಯಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ ಮೂರನೇ ಸ್ಥಾನಕ್ಕೇರಿದ್ದಾರೆ. ಬ್ರಿಸ್ಬೇನ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಶತಕ, ಅವರಿಗೆ 878 ಪಾಯಿಂಟ್ ಗಳಿಸಲು ನೆರವಾಗಿದ್ದು ಕೊಹ್ಲಿ ಖಾತೆಯಲ್ಲಿ 862 ಪಾಯಿಂಟ್‌ಗಳಿವೆ. 68ನೇ ಸ್ಥಾನದಲ್ಲಿದ್ದ ಭಾರತದ ಶುಭಮನ್ ಗಿಲ್ 47ನೇ ಸ್ಥಾನಕ್ಕಿ ಜಿಗಿದಿದ್ದು ಒಂದು ಸ್ಥಾನದ ಏರಿಕೆ ಕಂಡಿರುವ ಚೇತೇಶ್ವರ್ ಪೂಜಾರ ಏಳನೇ ಸ್ಥಾನದಲ್ಲಿದ್ದರೆ ಅಜಿಂಕ್ಯ ರಹಾನೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

32 ಸ್ಥಾನಗಳ ಜಿಗಿತ ಕಂಡ ಸಿರಾಜ್‌

ಬ್ರಿಸ್ಬೇನ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಒಟ್ಟು ಆರು ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಸಿರಾಜ್ 32 ಸ್ಥಾನಗಳ ಏರಿಕೆಯೊಂದಿಗೆ 45ನೇ ಸ್ಥಾನಕ್ಕೆ ಜಿಗಿದಿದ್ದಾರೆ. ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್‌ನಲ್ಲಿ 82, ಬೌಲಿಂಗ್‌ನಲ್ಲಿ 97ನೇ ಸ್ಥಾನ) ಮತ್ತು ಶಾರ್ದೂಲ್ ಠಾಕೂರ್ (ಬೌಲಿಂಗ್‌ನಲ್ಲಿ 65, ಬ್ಯಾಟಿಂಗ್‌ನಲ್ಲಿ 113ನೇ ಸ್ಥಾನ) ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಮೂರು ಸ್ಥಾನಗಳ ಏರಿಕೆಯೊಂದಿಗೆ 42ನೇ ಸ್ಥಾನದಲ್ಲಿದ್ದು ಬೌಲರ್‌ಗಳ ಪಟ್ಟಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಅವರು ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ ಎರಡು ವರ್ಷಗಳ ನಂತರ ಅಗ್ರ ಐದರೊಳಗೆ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT