ಮಂಗಳವಾರ, ಸೆಪ್ಟೆಂಬರ್ 21, 2021
22 °C

ತಪ್ಪುಗಳೇ ಪಾಠವಾದವು: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಟಿಂಗ್‌ಹ್ಯಾಂ: ‘ವೃತ್ತಿಜೀವನದಲ್ಲಿ ಅನೇಕ ಬಾರಿ ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಪ್ರತಿ ಬಾರಿಯೂ ತಪ್ಪುಗಳಿಂದ ಸಾಕಷ್ಟು ಪಾಠ ಕಲಿತಿದ್ದೇನೆ’ ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಹೇಳಿದ್ದಾರೆ. 

ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಪಂತ್ ಈಗ ಚೇತರಿಸಿಕೊಂಡಿದ್ದು ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಟ್ರೆಂಟ್‌ಬ್ರಿಜ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವ 11ರಲ್ಲಿ ಅವಕಾಶ ಪಡೆದುಕೊಂಡರೆ ಅದು ಅವರ 22ನೇ ಪಂದ್ಯ ಆಗಲಿದೆ. 2018ರಲ್ಲಿ ಇದೇ ಅಂಗಣದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

’ವೃತ್ತಿಜೀವನ ಆರಂಭಿಸಿ ಹೆಚ್ಚು ಕಾಲವೇನೂ ಆಗಲಿಲ್ಲ. ಆದರೆ ಇಷ್ಟರಲ್ಲೇ ಅನೇಕ ಏಳು–ಬೀಳುಗಳನ್ನು ಕಂಡಿದ್ದೇನೆ. ಒಬ್ಬ ಕ್ರಿಕೆಟಿಗನಾಗಿ ಕಲಿತ ಪಾಠಗಳನ್ನೆಲ್ಲ ಆಟದ ಮೇಲೆ ಪ್ರಯೋಗಿಸಿದ್ದೇನೆ. ಸವಾಲುಗಳನ್ನೆಲ್ಲ ಅವಕಾಶಗಳೆಂದು ತಿಳಿದುಕೊಂಡು ಮುನ್ನುಗ್ಗಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದು ಬಿಸಿಸಿಐ ಡಾಟ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಪಂತ್ ಅಭಿಪ್ರಾಯಪಟ್ಟಿದ್ದಾರೆ.

‘ಮುನ್ನೆಲೆಯಲ್ಲಿರುವ ಆಟಗಾರರನ್ನು ಸದಾ ಗಮನಿಸುತ್ತಿರುತ್ತೇನೆ. ಅವರನ್ನು ನೋಡಿ ಕಲಿಯುತ್ತಿರುತ್ತೇನೆ. ರೋಹಿತ್ ಶರ್ಮಾ ಅವರೊಂದಿಗೆ ಹಿಂದಿನ ಪಂದ್ಯಗಳ ಬಗ್ಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಫಳಿತಾಂಶ ಸಿಗಲು ಏನೇನು ಮಾಡಬಹುದು ಎಂಬುದರ ಬಗ್ಗೆಯೂ ಮಾತನಾಡಿದ್ದೇನೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷವಾಗಿ ಇಂಗ್ಲೆಂಡ್ ನೆಲದಲ್ಲಿ ಅಳವಡಿಸಿಕೊಳ್ಳಬೇಕಾದ ತಂತ್ರಗಳ ಬಗ್ಗೆ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೇನೆ’ ಎಂದು ಅವರು ಹೇಳಿದರು. 

‘ಪ್ರತಿಯೊಬ್ಬರ ಮನಸ್ಸಿನಲ್ಲೂ ಏನು ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಕೋಚ್‌ ರವಿಶಾಸ್ತ್ರಿ ಅವರೊಂದಿಗೆ ಚರ್ಚಿಸಿದ್ದೇನೆ. ರವಿಚಂದ್ರನ್ ಅಶ್ವಿನ್ ಅವರೊಂದಿಗೂ ಮಾತನಾಡಿದ್ದೇನೆ. ಬೌಲರ್‌ಗಳ ಮನಸ್ಸಿನಲ್ಲಿ ಏನು ಇರುತ್ತದೆ ಎಂಬುದನ್ನು ಒಬ್ಬ ಬ್ಯಾಟ್ಸ್‌ಮನ್‌ ಆಗಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ’ ಎಂದು ಅವರು ಹೇಳಿದರು. 

ಮೂರು ಶತಕಗಳೊಂದಿಗೆ 43ರ ಸರಾಸರಿಯಲ್ಲಿ 1400 ರನ್ ಕಲೆ ಹಾಕಿರುವ ರಿಷಭ್ ಪಂತ್ ವಿಕೆಟ್ ಹಿಂದೆಯೂ ಚುರುಕಿನ ಆಟ ಪ್ರದರ್ಶಿಸಿದ್ದಾರೆ. 83 ಬಾರಿ ಬ್ಯಾಟ್ಸ್‌ಮನ್‌ಗಳು ಅವರ ಚಾಣಾಕ್ಷತನಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯುತ್ತಮ ಯುವ ಆಟಗಾರ ಎಂದೆನಿಸಿಕೊಂಡಿರುವ ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸರಣಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು