ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಸರಣಿ: ರೋಹಿತ್‌ ಶರ್ಮಾಗೆ ಉಪನಾಯಕನ ಪಟ್ಟ

ಆರಂಭಿಕ ಬ್ಯಾಟ್ಸ್‌ಮನ್‌ಗೆ ಮೊದಲ ಬಾರಿ ಜವಾಬ್ದಾರಿ
Last Updated 1 ಜನವರಿ 2021, 12:59 IST
ಅಕ್ಷರ ಗಾತ್ರ

ನವದೆಹಲಿ: ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಅವರು ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ಉಪನಾಯಕರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. ವೃತ್ತಿಜೀವನದಲ್ಲಿ ಮೊದಲ ಬಾರಿ ಅವರು ಈ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಬದಲಿಗೆ ರೋಹಿತ್ ಅವರಿಗೆ ಸಾರಥ್ಯ ವಹಿಸಲಾಗಿದೆ.

ಮೊದಲ ಟೆಸ್ಟ್ ಪಂದ್ಯದ ಬಳಿಕ ನಾಯಕ ವಿರಾಟ್‌ ಕೊಹ್ಲಿ ಅವರು ‘ಪಿತೃತ್ವ ರಜೆ‘ಯ ಮೇಲೆ ಸ್ವದೇಶಕ್ಕೆ ಮರಳಿದ್ದರು. ಹೀಗಾಗಿ ಅಜಿಂಕ್ಯ ರಹಾನೆ ಹಂಗಾಮಿ ನಾಯಕತ್ವದ ಹೊಣೆ ವಹಿಸಿಕೊಂಡಿದ್ದರು. ಚೇತೇಶ್ವರ್ ಪೂಜಾರ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿತ್ತು. ಆದಾಗ್ಯೂ ರೋಹಿತ್ ಅವರು ಫಿಟ್‌ ಆಗಿ ತಂಡಕ್ಕೆ ಮರಳಿದ ನಂತರ ಉಪನಾಯಕನ ಜವಾಬ್ದಾರಿ ನೀಡಲು ತಂಡದ ಆಡಳಿತ ಮಂಡಳಿಯು ಮೊದಲೇ ನಿರ್ಧರಿಸಿತ್ತು ಎಂದು ತಿಳಿದುಬಂದಿದೆ.

‘ವಿರಾಟ್‌ ರಜೆಯ ಮೇಲೆ ತೆರಳಿದಾಗ ಅಜಿಂಕ್ಯ ಅವರು ಹಂಗಾಮಿ ನಾಯಕ ಆಗಿದ್ದು, ಉಪನಾಯಕ ಯಾರಾಗಬೇಕೆಂಬ ಕುರಿತು ಯಾವುದೇ ಗೊಂದಲವಿರಲಿಲ್ಲ. ಆ ಸ್ಥಾನವನ್ನು ರೋಹಿತ್ ಅವರೇ ನಿಭಾಯಿಸಬೇಕಿತ್ತು. ಅವರು ಫಿಟ್‌ ಆಗುವವರೆಗೆ ತಾತ್ಕಾಲಿಕ ವ್ಯವಸ್ಥೆಯಾಗಿ ಪೂಜಾರ ಅವರನ್ನು ನೇಮಿಸಲಾಗಿತ್ತು‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದೀರ್ಘಕಾಲ ರೋಹಿತ್ ಅವರು ತಂಡದ ಉಪನಾಯಕ ಆಗಿದ್ದಾರೆ. ಹೀಗಾಗಿ ವಿರಾಟ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ಗುಂಪಿನ ಭಾಗವಾಗುವುದು ಕಡ್ಡಾಯವಾಗಿತ್ತು‘ ಎಂದು ಅವರು ಹೇಳಿದ್ದಾರೆ.

ರೋಹಿತ್, ಮೆಲ್ಬರ್ನ್‌ನಲ್ಲಿರುವ ಭಾರತ ತಂಡವನ್ನುಬುಧವಾರ ಸೇರಿಕೊಂಡಿದ್ದರು. ಐಪಿಎಲ್‌ ಸಂದರ್ಭದಲ್ಲಿ ಗಾಯಗೊಂಡಿದ್ದ ಅವರು ಆಸ್ಟ್ರೇಲಿಯಾ ಎದುರಿನ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಆಡಿರಲಿಲ್ಲ. ಬೆಂಗಳೂರಿನ ಎನ್‌ಸಿಎನಲ್ಲಿ ಚಿಕಿತ್ಸೆ ಪಡೆದು ಫಿಟ್‌ ಆಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.14 ದಿನಗಳ ಕಡ್ಡಾಯ ಕ್ವಾರಂಟೈನ್‌ ಪಾಲಿಸಿದ ನಂತರ ತಂಡ ಸೇರಿಕೊಂಡಿದ್ದರು.

ಕಳೆದೆರಡು ಟೆಸ್ಟ್‌ಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ನಿರೀಕ್ಷಿತ ಬ್ಯಾಟಿಂಗ್ ಮಾಡಿಲ್ಲ. ಹೀಗಾಗಿ ಅವರ ಬದಲಿಗೆ ರೋಹಿತ್ ಅವರು ಶುಭಮನ್ ಗಿಲ್ ಅವರ ಜೊತೆ ಇನಿಂಗ್ಸ್ ಆರಂಭಿಸುತ್ತಾರೊ ಅಥವಾ ತಂಡದ ಸಂಯೋಜನೆಯ ದೃಷ್ಟಿಯಿಂದ ಹನುಮ ವಿಹಾರಿ ಅವರನ್ನು ಕೈಬಿಟ್ಟರೆ, ಮಧ್ಯಮಕ್ರಮಾಂಕದಲ್ಲಿ ಆಡಲಿದ್ದಾರೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ರೋಹಿತ್ ಅವರು ಗುರುವಾರ ಅಭ್ಯಾಸ ನಡೆಸಿದ್ದರು. ಜನವರಿ 5ರಂದು ಭಾರತ ತಂಡ ಸಿಡ್ನಿಗೆ ತೆರಳಲಿದೆ. ಜನವರಿ 7ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT