ರಂಜಿಸಿದ ರಸೆಲ್‌; ಕೆಕೆಆರ್‌ ಜಯಭೇರಿ

ಗುರುವಾರ , ಏಪ್ರಿಲ್ 25, 2019
33 °C
ಈಡನ್ ಗಾರ್ಡನ್ಸ್‌ನಲ್ಲಿ ವಾರ್ನರ್‌ ಕಂಪು; ಆರಂಭಿಕ ಬ್ಯಾಟ್ಸ್‌ಮನ್‌ ನಿತೀಶ್ ರಾಣಾ ಮೋಹಕ ಬ್ಯಾಟಿಂಗ್‌

ರಂಜಿಸಿದ ರಸೆಲ್‌; ಕೆಕೆಆರ್‌ ಜಯಭೇರಿ

Published:
Updated:

ಕೋಲ್ಕತ್ತ: ಸೋಲಿನ ಸುಳಿಯಲ್ಲಿ ಸಿಲುಕಿದ್ದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ ಮರುಜೀವ ತುಂಬಿದರು.

ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ನಿತೀಶ್ ರಾಣಾ ಮತ್ತು ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನೈಟ್‌ ರೈಡರ್ಸ್‌ ಆರು ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

ಕಳೆದ ಬಾರಿಯ ರನ್ನರ್ ಅಪ್‌ ಸನ್‌ರೈಸರ್ಸ್ ಹೈದರಾಬಾದ್ ನೀಡಿದ 182 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಆತಿಥೇಯರು ಏಳು ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದ್ದರು.

ನಂತರ ರಾಣಾ ಮತ್ತು ರಾಬಿನ್ ಉತ್ತಪ್ಪ 80 ರನ್‌ಗಳ ಜೊತೆಯಾಟ ಆಡಿದರು. ಆದರೆ ಉತ್ತಪ್ಪ ಔಟಾದ ನಂತರ ನಾಯಕ ದಿನೇಶ್ ಕಾರ್ತಿಕ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಹೀಗಾಗಿ ಸನ್‌ರೈಸರ್ಸ್ ಬಳಗದಲ್ಲಿ ಗೆಲುವಿನ ಆಸೆ ಚಿಗುರಿತು.

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಸೆಲ್ ದಿಟ್ಟ ಆಟವಾಡಿ ಪಂದ್ಯಕ್ಕೆ ತಿರುವು ನೀಡಿದರು. ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ರಂಜಿಸಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿ ತವರಿನ ಪ್ರೇಕ್ಷಕರನ್ನು ಸಂಭ್ರಮದ ಕಡಲಲ್ಲಿ ತೇಲಿಸಿದರು.

ವಾರ್ನರ್‌ ಅಬ್ಬರ: ಚೆಂಡು ವಿರೂಪ ಗೊಳಿಸಿದ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್‌ ಸನ್‌ರೈಸರ್ಸ್‌ ಪರ ಅಬ್ಬರಿಸಿದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಪರ ವಾರ್ನರ್ ಮತ್ತು ಇಂಗ್ಲೆಂಡ್‌ನ ಜಾನಿ ಬೇಸ್ಟೊ ಶತಕದ ಜೊತೆಯಾಟವಾಡಿದರು.

ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ವಾರ್ನರ್‌ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಮಿಂಚಿದರು. ಅವರಿಗೆ ಹೆಚ್ಚು ಅವಕಾಶಗಳನ್ನು ಒದಗಿಸಿದ ಬೇಸ್ಟೊ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದರು. 53 ಎಸೆತಗಳಲ್ಲಿ 85 ರನ್‌ ಗಳಿಸಿದ ವಾರ್ನರ್‌ ಮೊದಲ ವಿಕೆಟ್‌ಗೆ 118 ರನ್‌ ಸೇರಿಸಿದರು.

35 ಎಸೆತಗಳಲ್ಲಿ 39 ರನ್ ಗಳಿಸಿದ ಬೇಸ್ಟೊ ಔಟಾದ ನಂತರ ಬಂದ ವಿಜಯಶಂಕರ್ 24 ಎಸೆತಗಳಲ್ಲಿ 40 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಸನಿಹ ಕೊಂಡೊಯ್ದರು. ಐಪಿಎಲ್‌ನಲ್ಲಿ 37ನೇ ಅರ್ಧಶತಕ ಗಳಿಸಿದ ವಾರ್ನರ್‌ ಅತಿ ಹೆಚ್ಚು ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿಯುವತ್ತ ಹೆಜ್ಜೆ ಇರಿಸಿದ್ದಾರೆ.

ವಾರ್ನರ್ ಔಟಾದ ನಂತರ ಬಂದವರಿಗೆ ನಿರೀಕ್ಷೆಗೆ ತಕ್ಕಂತೆ ಮಿಂಚಲು ಆಗಲಿಲ್ಲ. ಆದರೂ ಸ್ಪರ್ಧಾತ್ಮಕ ಮೊತ್ತ ಸೇರಿಸಲು ತಂಡ ಯಶಸ್ವಿಯಾಯಿತು.

ಕೈಕೊಟ್ಟ ಹೊನಲು ಬೆಳಕು
ಕೋಲ್ಕತ್ತ:
ಸನ್‌ರೈಸರ್ಸ್ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ಇನಿಂಗ್ಸ್ ಸಂದರ್ಭದಲ್ಲಿ ಹೊನಲು ಬೆಳಕು ಕೈಕೊಟ್ಟಿತು. 15.2 ಓವರ್‌ಗಳಲ್ಲಿ ತಂಡದ ಮೊತ್ತ 3 ವಿಕೆಟ್‌ಗಳಿಗೆ 118 ರನ್‌ಗಳಾಗಿದ್ದಾಗ ಶಾರ್ಟ್‌ ಸರ್ಕೀಟ್‌ನಿಂದಾಗಿ ದೀಪಗಳು ನಂದಿದವು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. 12 ನಿಮಿಷಗಳ ನಂತರ ಪಂದ್ಯ ಮತ್ತೆ ಆರಂಭವಾಯಿತು.

ಕೋಲ್ಕತ್ತ ತಂಡದ ನಿತೀಶ್ ರಾಣಾ, ತಾವು ಔಟಾಗಲು ಹೊನಲು ಬೆಳಕಿನಲ್ಲಿ ಆದ ವ್ಯತ್ಯಯವೇ ಕಾರಣ ಎಂದು ದೂರಿದರು. ಬೆಳಕು ಕೈಕೊಟ್ಟಾಗ ರಾಣಾ 68 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. 16ನೇ ಓವರ್‌ನ ಎರಡು ಎಸೆತಗಳನ್ನು ರಶೀದ್ ಖಾನ್‌ ಹಾಕಿದ್ದರು. ಪಂದ್ಯ ಪುನರಾರಂಭಗೊಂಡ ನಂತರ ಮೊದಲ ಎಸೆತದಲ್ಲೇ ರಾಣಾ ಔಟಾಗಿ ದ್ದರು. ‘ಡ್ರೆಸಿಂಗ್ ಕೊಠಡಿಗೆ ಹೋಗಿ ವಾಪಸಾದಾಗ ಏಕಾಗ್ರತೆ ಕಳೆದು ಕೊಂಡ ಕಾರಣ ನಾನು ಔಟಾದೆ’‍ ಎಂದು ರಾಣಾ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !