ಬುಧವಾರ, ಏಪ್ರಿಲ್ 1, 2020
19 °C

‘ಲಾರೆಯಸ್‌ ಕ್ರೀಡಾ ಕ್ಷಣ ಪ್ರಶಸ್ತಿ’ ಭಾರತಕ್ಕೆ ಅರ್ಪಣೆ: ಸಚಿನ್ ತೆಂಡೂಲ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

ಬರ್ಲಿನ್: ಪ್ರತಿಷ್ಠಿತ ‘ಲಾರೆಯಸ್‌ ಅತ್ಯುತ್ತಮ ಕ್ರೀಡಾ ಕ್ಷಣ ಪ್ರಶಸ್ತಿ’ಗೆ (ಲಾರೆಯಸ್‌ ಸ್ಪೋರ್ಟಿಂಗ್‌ ಮೊಮೆಂಟ್‌ 2000–2020) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ಭಾಜನರಾಗಿದ್ದಾರೆ.

ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಸಚಿನ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ವೀವ್ ವಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಸಚಿನ್ ಅದನ್ನು ದೇಶಕ್ಕೆ ಮತ್ತು ಅಭಿಮಾನಿಗಳಿಗೆ ಸಮರ್ಪಿಸಿ ಟ್ವೀಟ್ ಮಾಡಿದ್ದಾರೆ.

‘ಈ ಪ್ರಶಸ್ತಿಯನ್ನು ಭಾರತಕ್ಕೆ, ನನ್ನ ಎಲ್ಲ ಸಹ ಆಟಗಾರರಿಗೆ, ಅಭಿಮಾನಿಗಳಿಗೆ ಹಾಗೂ ವಿಶ್ವದಾದ್ಯಂತ ಇರುವ ಹಿತೈಷಿಗಳಿಗೆ, ಭಾರತದ ಕ್ರಿಕೆಟ್‌ ಅನ್ನು ಬೆಂಬಲಿಸಿದವರಿಗೆ ಅರ್ಪಿಸುತ್ತಿದ್ದೇನೆ’ ಎಂದು ಅವರು ಉಲ್ಲೇಖಿಸಿದ್ದಾರೆ.

2011ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಜಯಿಸಿದ ಬಳಿಕ ಟೀಂ ಇಂಡಿಯಾದ ಇತರ ಆಟಗಾರರು ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನಕ್ಕೆ ಸುತ್ತು ಹಾಕಿದ್ದರು. ಇದು ಎರಡು ದಶಕಗಳಲ್ಲೇ (2000 – 2020 ಅವಧಿ) ‘ಅತ್ಯುತ್ತಮ ಕ್ರೀಡಾ ಕ್ಷಣ’ ಎಂದು ಆಯ್ಕೆಯಾಗಿದೆ.


ಸಹ ಆಟಗಾರರು ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನಕ್ಕೆ ಸುತ್ತು ಹಾಕಿದ ಕ್ಷಣ

ಕ್ರೀಡಾ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆ ಮಾಡಿದವರಿಗೆ ನೀಡಲಾಗುವ ‘ಲಾರೆಯಸ್‌ ಪ್ರಶಸ್ತಿ’ಗೆ 20 ವರ್ಷಗಳಾದ ನಿಮಿತ್ತ 2000ನೇ ಇಸವಿಯಿಂದ 2020ರ ಅವಧಿಯ ಅತ್ಯುತ್ತಮ ಕ್ರೀಡಾ ಕ್ಷಣ ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಈ ಪೈಕಿ ಸಚಿನ್ ಅವರನ್ನು ಸಹ ಆಟಗಾರರು ಹೆಗಲ ಮೇಲೆ ಹೊತ್ತುಕೊಂಡು ಹೋದ ಕ್ಷಣಕ್ಕೆ ಹೆಚ್ಚಿನ ಮತಗಳು ದೊರೆತಿದ್ದವು.

ಪದಗಳಲ್ಲಿ ಬಣ್ಣಿಸಲಾಗದು: ‘ವಿಶ್ವಕಪ್ ಜಯಿಸಿದ್ದನ್ನು ಪದಗಳಲ್ಲಿ ವರ್ಣಿಸಲಾಗದು. ಅಂತಹ ಕ್ಷಣಗಳನ್ನು ನೀವೆಷ್ಟು ಬಾರಿ ಹೊಂದಲು ಸಾಧ್ಯ? ಬಹಳ ಅಪರೂಪದಲ್ಲಿ ಇಡೀ ದೇಶ ಸಂಭ್ರಮಾಚರಿಸಿತ್ತು’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

‘ಕ್ರೀಡೆಗೆ ಎಷ್ಟು ಶಕ್ತಿ ಇದೆ ಮತ್ತು ಅದು ನಮ್ಮ ಜೀವನದಲ್ಲಿ ಹೇಗೆ ಮ್ಯಾಜಿಕ್ ಮಾಡಬಲ್ಲದು ಎಂಬುದಕ್ಕೆ ಇದುವೇ ಸಾಕ್ಷಿ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು