ಅಪಿಯಾ (ಸಮೊವಾ): ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಮೊವಾದ ಬ್ಯಾಟರ್ ಡಾರಿಯಸ್ ವಿಸೆರ್ ನೂತನ ದಾಖಲೆ ಬರೆದಿದ್ದು, ಓವರ್‌ವೊಂದರಲ್ಲಿ 39 ರನ್ ಗಳಿಸುವ ಮೂಲಕ ಭಾರತದ ಮಾಜಿ ಬ್ಯಾಟರ್ ಯುವರಾಜ್ ಸಿಂಗ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಟ್ವೆಂಟಿ-20 ವಿಶ್ವಕಪ್ ಪೂರ್ವ ಏಷ್ಯಾ-ಪೆಸಿಫಿಕ್ ವಲಯದ ಅರ್ಹತಾ ಪಂದ್ಯದಲ್ಲಿ ವನೌಟು ವಿರುದ್ಧ ಸಮೊವಾದ 28 ವರ್ಷದ ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟರ್ ವಿಸೆರ್, ಆರು ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ.
ತಮ್ಮ ಮೂರನೇ ಟ್ವೆಂಟಿ-20 ಪಂದ್ಯದಲ್ಲೇ ವಿಸೆರ್, ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಸಮೊವಾದ ಮೊದಲ ಬ್ಯಾಟರ್ ಎನಿಸಿದ್ದಾರೆ. ಕೇವಲ 62 ಎಸೆತಗಳಲ್ಲಿ ವಿಸೆರ್, 132 ರನ್ ಗಳಿಸುವ ಮೂಲಕ ಅಬ್ಬರಿಸಿದರು. ಇದರಲ್ಲಿ 14 ಸಿಕ್ಸರ್ ಹಾಗೂ ಐದು ಬೌಂಡರಿ ಒಳಗೊಂಡಿತ್ತು.
ವನೌಟು ತಂಡದ ನಲಿನ್ ನಿಪಿಕೊ ಅವರ ಓವರ್‌ನಲ್ಲಿ ವಿಸೆರ್ ಈ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 36ಕ್ಕೂ ಹೆಚ್ಚು ರನ್ ನೀಡಿದ ಅಪಖ್ಯಾತಿಗೆ ನಿಪಿಕೊ ಒಳಗಾಗಿದ್ದಾರೆ. ಅವರ ಓವರ್‌ನಲ್ಲಿ ಮೂರು ನೋಬಾಲ್ ಸಹ ಒಳಗೊಂಡಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಸಮೊವಾ ವಿಸೆರ್ ಶತಕದ ಬಲದಿಂದ 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವನೌಟು ಒಂಬತ್ತು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ ಸಮೊವಾ 9 ರನ್ ಅಂತರದ ರೋಚಕ ಜಯ ಗಳಿಸಿತು. ಬೌಲಿಂಗ್‌ನಲ್ಲಿ ದುಬಾರಿ ಎನಿಸಿದರೂ ಆರಂಭಿಕ ಬ್ಯಾಟರ್ ನಿಪಿಕೊ, 52 ಎಸೆತಗಳಲ್ಲಿ 73 ರನ್ (6 ಬೌಂಡರಿ, 3 ಸಿಕ್ಸರ್) ಗಳಿಸುವ ಮೂಲಕ ದಿಟ್ಟ ಹೋರಾಟ ನೀಡಿದರು.
ಓವರ್ ಹೀಗಿತ್ತು: 6,6,6, 1(ನೋಬಾಲ್), 6, 0, 1 (ನೋಬಾಲ್), 7(ನೋಬಾಲ್ ಹಾಗೂ 6), 6
Darius Visser creates history after smashing most runs in an over in Men’s T20Is 💥
— ICC (@ICC) August 20, 2024
Read on ➡️ https://t.co/19hSJuDml5 pic.twitter.com/7ptxoDRxfU
2007ರಲ್ಲಿ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದರು.
ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (ಓವರ್‌ವೊಂದರಲ್ಲಿ):
39 ರನ್: ಡಾರಿಯಸ್ ವಿಸೆರ್ (2024), 6,6,6, 1(ನೋಬಾಲ್), 6, 0, 1 (ನೋಬಾಲ್), 7(ನೋಬಾಲ್ ಹಾಗೂ ಸಿಕ್ಸ್), 6
36 ರನ್: ಯುವರಾಜ್ ಸಿಂಗ್ (2007), 6,6,6,6,6,6
36 ರನ್: ಕೀರಾನ್ ಪೊಲಾರ್ಡ್ (2021), 6,6,6,6,6,6
36 ರನ್: ರೋಹಿತ್ ಶರ್ಮಾ/ರಿಂಕು ಸಿಂಗ್ (2024), 5 (ನೋಬಾಲ್), 6, 6,1, 6,6,6
36 ರನ್: ದಿಪೇಂದ್ರ ಸಿಂಗ್ (2024), 6,6,6,6,6,6
36 ರನ್: ನಿಕೋಲಸ್ ಪೂರನ್ (2024), 6, 5 (ನೋಬಾಲ್), 5 (ವೈಡ್), 0, 4 (ಲೆಗ್ ಬೈ), 4, 6, 6
2007ರಲ್ಲಿ ಸ್ಟುವರ್ಟ್ ಬ್ರಾಡ್, 2021ರಲ್ಲಿ ಅಕಿಲ ಧನಂಜಯ, 2024ರಲ್ಲಿ ಕರೀಂ ಜನ್ನತ್, 2024ರಲ್ಲಿ ಕಮ್ರಾನ್ ಖಾನ್ ಮತ್ತು 2024ರಲ್ಲಿ ಅಜ್ಮಮತುಲ್ಲ ಒಮರ್‌ಝೈ ಓವರ್‌ವೊಂದರಲ್ಲಿ 36 ರನ್ ಬಿಟ್ಟುಕೊಟ್ಟಿದ್ದರು.
ಒಟ್ಟಾರೆಯಾಗಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕನೇ ಸಲ ತಂಡವೊಂದರ ಬ್ಯಾಟರ್, ಓವರ್‌ವೊಂದರಲ್ಲಿ ಆರು ಸಿಕ್ಸರ್‌ಗಳನ್ನುಸಿಡಿಸಿದ ನಿದರ್ಶನ ದಾಖಲಾಯಿತು. ಅಲ್ಲದೆ ಆರನೇ ಸಲ ತಂಡವೊಂದು ಓವರ್‌ವೊಂದರಲ್ಲಿ 36 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.