ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಫರಾಜ್‌ ಟೆಸ್ಟ್‌ಗೆ ವಿದಾಯ ಹೇಳಲಿ: ರಮೀಜ್‌

ಸೀಮಿತ ಓವರುಗಳ ಮಾದರಿ ಕಡೆ ಗಮನಹರಿಸಲು ಸಲಹೆ
Last Updated 11 ಆಗಸ್ಟ್ 2020, 11:54 IST
ಅಕ್ಷರ ಗಾತ್ರ

ಕರಾಚಿ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಸರ್ಫರಾಜ್‌ ಅಹ್ಮದ್‌ ಅವರು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿ ಸೀಮಿತ ಓವರುಗಳ ಕ್ರಿಕೆಟ್‌ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದು ಪಾಕ್‌ ತಂಡದ ಮಾಜಿ ನಾಯಕ ರಮೀಜ್‌ ರಾಜಾ ಅವರು ಸಲಹೆ ನೀಡಿದ್ದಾರೆ.

ಮಾಜಿ ನಾಯಕರೂ ಆಗಿರುವ ಸರ್ಫರಾಜ್‌ ಅವರು ಮ್ಯಾಂಚೆಸ್ಟರ್‌ನಲ್ಲಿ ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದ ಪಾಕ್‌ ತಂಡದಲ್ಲಿ 12ನೇ ಆಟಗಾರನ ಕೆಲಸ ನಿರ್ವಹಿಸಿದ್ದರು.

‘ನನ್ನ ಪ್ರಕಾರ, ನೀವು ಒಮ್ಮೆ ತಂಡದ ನಾಯಕರಾಗಿದ್ದು ಪ್ರಮುಖ ಪಾತ್ರ ವಹಿಸಿದ ಮೇಲೆ, ಬೆಂಚ್‌ ಮೇಲೆ ಕುಳಿತುಕೊಳ್ಳುವುದು (12ನೇ ಆಟಗಾರ) ತುಂಬಾ ಕಷ್ಟದ ಕೆಲಸ’ ಎಂದು ವೀಕ್ಷಕ ವಿವರಣೆಕಾರರೂ ಆಗಿರುವ ರಮೀಜ್‌ ಹೇಳಿದ್ದಾರೆ. ಯೂಟ್ಯೂಬ್‌ ಚಾನೆಲ್‌ ‘ಕ್ರಿಕ್‌ ಬಾಝ್‌’ ಎದುರು ಅವರು ಈ ಅಭಿಪ್ರಾಯ ಮಂಡಿಸಿದ್ದಾರೆ.

‘ಈ ಬಗ್ಗೆ ಯೋಚಿಸಬೇಕೆಂದು ನಾನು ಸರ್ಫರಾಜ್‌ ಅವರಿಗೆ ಸಲಹೆ ನೀಡಬಯಸುತ್ತೇನೆ. ಅವರು ಏಕದಿನ ಕ್ರಿಕೆಟ್‌ಗೆ ಸೂಕ್ತವಾಗಿರುವ ಆಕ್ರಮಣಕಾರಿ ಮನೋಭಾವ ಹೊಂದಿದ್ದು, ಆ ಕಡೆ ತಮ್ಮ ಗಮನಹರಿಸುವುದು ಒಳಿತು’ ಎಂದಿದ್ದಾರೆ ರಮೀಜ್‌.

ಪಾಕಿಸ್ತಾನ ತಂಡದ ಆರಂಭ ಆಟಗಾರನಾಗಿದ್ದ ರಮೀಜ್‌ ರಾಜಾ 57 ಟೆಸ್ಟ್‌ಗಳನ್ನು ಆಡಿದ್ದಾರೆ.

‘ಮಾಜಿ ನಾಯಕ ಅಥವಾ ಸರ್ಫರಾಜ್‌ ಅಂಥ ಹೆಸರಿರುವ ಆಟಗಾರ 12ನೇ ಆಟಗಾರನ ಪಾತ್ರ ವಹಿಸುವುದು ಕ್ರಿಕೆಟ್‌ನಲ್ಲಿ ವಿರಳವೇನಲ್ಲ. ಅದರಲ್ಲಿ ತಪ್ಪೇನೂ ಇಲ್ಲ. ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌ ಅವರಿಗೆ ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗದೇ ಅವರು ಪಾನೀಯ ಒಯ್ಯುವ ಕೆಲಸ ಮಾಡಬೇಕಾಯಿತು. ಆದರೆ ನಮ್ಮ ಕ್ರಿಕೆಟ್‌ ಸಂಸ್ಕೃತಿಯಲ್ಲಿ ಅದನ್ನು ಬೇರೆ ತರ ನೋಡಲಾಗುತ್ತದೆ’ ಎಂದು ರಮೀಜ್‌ ಅಭಿ‍ಪ್ರಾಯಪಟ್ಟರು.

ಸರ್ಫರಾಜ್‌ ತಂಡದಲ್ಲಿದ್ದರೆ ಯುವ ವಿಕೆಟ್‌ ಕೀಪರ್‌ ಮುಹಮ್ಮದ್ ರಿಜ್ವಾನ್‌ ಅವರ ಮೇಲೂ ಒತ್ತಡ ಹೆಚ್ಚಾಗುತ್ತದೆ ಎಂದು ರಮೀಜ್‌ ಭಾವಿಸಿದ್ದಾರೆ. ರಿಜ್ವಾನ್‌ ಮೊದಲ ಟೆಸ್ಟ್‌ನಲ್ಲಿ ಕೀಪಿಂಗ್‌ ಮಾಡಿದ್ದರು.

ಈ ಎಲ್ಲವನ್ನು ಯೋಚನೆಯಲ್ಲಿಟ್ಟುಕೊಂಡು ಸರ್ಫರಾಜ್‌ ಟೆಸ್ಟ್‌ಗೆ ವಿದಾಯ ಹೇಳುವುದು ಒಳ್ಳೆಯದು ಎಂದು ಅವರು ತಿಳಿಸಿದರು.

ಸರ್ಫರಾಜ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅನಿರೀಕ್ಷಿತ ಎಂಬಂತೆ ಕಳೆದ ವರ್ಷ, ಕ್ರಿಕೆಟ್‌ನ ಮೂರೂ ಮಾದರಿಯ ತಂಡಗಳ ನಾಯಕ ಪಟ್ಟದಿಂದ ಕೆಳಗಿಳಿಸಿತ್ತು. ಆದರೆ ಕೋವಿಡ್‌–19 ನಿಂದ ಉಂಟಾದ ಭಿನ್ನ ಬೆಳವಣಿಗೆಯಲ್ಲಿ ರಾಷ್ಟ್ರೀಯ ತಂಡಕ್ಕೆ ಅವರು ಪುನರಾಗಮನ ಮಾಡಿದ್ದರು.

33 ವರ್ಷದ ಈ ಆಟಗಾರ 49 ಟೆಸ್ಟ್‌, 116 ಏಕದಿನ ಮತ್ತು 58 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗೆದ್ದ ಪಾಕಿಸ್ತಾನ ತಂಡದ ಕಪ್ತಾನರಾಗಿದ್ದರು. ಅವರ ನಾಯಕತ್ಬದಲ್ಲೇ ಪಾಕ್‌ ತಂಡ ಟಿ–20 ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT